ಹುಬ್ಬಳ್ಳಿಯ ಸಿದ್ಧಾರೂಢರ ಹುಟ್ಟೂರು ಯಾವುದು ಗೊತ್ತಾ? ಇಂದಿಗೂ ಇದೆ ಅವರು ವಾಸವಿದ್ದ ಮನೆ, ಬಾವಿ
ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ಜನ್ಮಸ್ಥಳದ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹುಬ್ಬಳ್ಳಿಯ ಸಿದ್ಧಾರೂಢ ಮಠ ಅವರ ಐಕ್ಯಸ್ಥಳವಾದರೆ, ಅವರ ಹುಟ್ಟೂರು ಯಾವುದು ಎನ್ನುವುದು ಹಲವರಿಗೆ ತಿಳಿದಿಲ್ಲ. ಹಾಗಾದರೆ ಮಹಾನ್ ಸಂತ ಸಿದ್ಧಾರೂಢರ ಜನ್ಮಸ್ಥಳದ ರಹಸ್ಯ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಮಹಾನ್ ಸಂತ ಸಿದ್ಧಾರೂಢರ ಜನ್ಮಸ್ಥಳದ ರಹಸ್ಯ!
- ಸಿದ್ಧಾರೂಢರು ಲಿಂಗೈಕ್ಯವಾಗಿದ್ದು ಹುಬ್ಬಳ್ಳಿಯಲ್ಲಿ, ಜನ್ಮವೆತ್ತಿದ್ದು ಎಲ್ಲಿ?
- ಸಿದ್ಧಾರೂಢರ ಜನ್ಮಭೂಮಿಯ ಕುತೂಹಲಕಾರಿ ಸಂಗತಿ
ಹುಬ್ಬಳ್ಳಿ, ನವೆಂಬರ್ 04: ಸದ್ಗುರು ಸಿದ್ಧಾರೂಢರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದಲ್ಲಿ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಕೂಡ ಒಂದು. ಕೇವಲ ರಾಜ್ಯದಲ್ಲಷ್ಟೇ ಅಲ್ಲ ದೇಶ ವಿದೇಶಗಳಲ್ಲೂ ಸಿದ್ಧಾರೂಢರ ಭಕ್ತರಿದ್ಧಾರೆ. ಆದರೆ ಅವರ ಹುಟ್ಟೂರು ಯಾವುದು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಮಹಾನ್ ಸಂತ ಸಿದ್ಧಾರೂಢರ ಜನ್ಮಸ್ಥಳ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ.
ಸಿದ್ಧಾರೂಢರ ಜನ್ಮಭೂಮಿ ಯಾವುದು?
ಸಿದ್ಧಾರೂಢ ಸ್ವಾಮೀಜಿಗಳ ಐಕ್ಯಸ್ಥಳವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕೋಟ್ಯಂತರ ಜನರು ಭಕ್ತರಿದ್ದು, ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಪವಾಡ ಪುರುಷನ ಹುಟ್ಟೂರು ಯಾವುದು ಅಂತಾ ಇನ್ನೂ ಅದೇಷ್ಟೋ ಭಕ್ತರಿಗೆ ಗೊತ್ತಿರಲಿಕ್ಕಿಲ್ಲ. ಆ ಸದ್ಗುರುವಿನ ಜನ್ಮಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮ.
ಇದನ್ನೂ ಓದಿ: AI ವಿಡಿಯೋಗಳಿಂದ ಸಿದ್ಧಾರೂಢರ ಚರಿತ್ರೆಗೆ ಧಕ್ಕೆ: ಭಕ್ತರ ಆಕ್ರೋಶ; ಮಠದ ಟ್ರಸ್ಟ್‌ನಿಂದ ವಾರ್ನಿಂಗ್
ಶ್ರೀ ಸಿದ್ಧಾರೂಢರು ಗುರುಶಾಂತಪ್ಪ, ತಾಯಿ ದೇವಮಲ್ಲಮ್ಮ ಉದರದಲ್ಲಿ 1836 ಜನವರಿ 26 ರಂದು ಜನಸಿದರು. ಸಿದ್ಧಾರೂಢರು ತಮ್ಮ 6ನೇ ವಯಸ್ಸಿನಲ್ಲಿಯೇ ತಂದೆ, ತಾಯಿ, ಬಂಧು ಬಳಗವನ್ನು ಬಿಟ್ಟು ಗುರು ಶೋಧನೆಗೆ ಹೊರಟರು. 31 ವರ್ಷಗಳ ಕಾಲ ಸಂಚಾರ ಮಾಡಿ 1877 ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆಯೂರಿದರು. ಅಲ್ಲಿ ಸಾಕಷ್ಟು ಪವಾಡಗಳನ್ನ ಮಾಡುತ್ತಾ, ಬಂದ ಭಕ್ತರ ಕಷ್ಟಗಳನ್ನ ಪರಿಹರಿಸುತ್ತಾ ಪವಾಡ ಪುರುಷರಾದರು. ರಾಜ್ಯ, ದೇಶ ಸೇರಿದಂತೆ ವಿದೇಶದಲ್ಲಿಯೂ ಸಿದ್ಧಾರೂಢರ ಲಕ್ಷಾಂತರ ಭಕ್ತರಿದ್ದಾರೆ.
ಚಳಕಾಪುರದಲ್ಲಿ ಸಿದ್ಧಾರೂಢರ 4ನೇ ತಲೆಮಾರಿನವರು ವಾಸ
ಇನ್ನು ಬೀದರ್ ಜಿಲ್ಲೆಯ ಚಳಕಾಪುರದಲ್ಲಿ ಇಂದಿಗೂ ಸಿದ್ಧಾರೂಢರ ನಾಲ್ಕನೇಯ ತಲೆಮಾರಿನವರು ವಾಸವಾಗಿದ್ದಾರೆ. ಸಿದ್ಧಾರೂಢರು ಸ್ನಾನ ಮಾಡುತ್ತಿದ್ದ ಭಾವಿ ಕೂಡ ಇಂದಿಗೂ ಹಾಗೆಯೇ ಇದ್ದು, ಇದುವರೆಗೂ ನೀರು ಬತ್ತಿರುವ ಉದಾಹರಣೆಯಿಲ್ಲ. ಅವರು ವಾಸವಿದ್ದ ಮನೆ ಕೂಡ ಇದ್ದು, ಅವರ ನಾಲ್ಕನೇಯ ತಲೆಮಾರಿನವರು ಸಿದ್ದಾರೂಢರು ವಾಸವಿದ್ದ ಸ್ಥಳದಲ್ಲಿಯೇ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಬರದ ನಡುವೆಯೂ ಈರುಳ್ಳಿ ಬೆಳೆದು ಕೋಟಿ ಆದಾಯ! ಧಾರವಾಡದ ರೈತ ಕುಟುಂಬದ ಯಶೋಗಾಥೆ
ಹುಬ್ಬಳ್ಳಿಯಲ್ಲಿರುವ ಶ್ರೀಗಳ ಐಕ್ಯಸ್ಥಳಕ್ಕೆ ಸಿಕ್ಕ ಮನ್ನಣೆ ಅವರ ಹುಟ್ಟೂರು ಚಳಕಾಪುರಕ್ಕೆ ಸಿಕ್ಕಿಲ್ಲ ಎನ್ನುವ ನೋವು ಭಕ್ತರನ್ನ ಕಾಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




