ಹುಬ್ಬಳ್ಳಿಯಲ್ಲಿ ಪ್ರಸಿದ್ಧ ಸಿದ್ಧಾರೂಢ ಶ್ರೀಗಳ ಅಂಚೆ ಚೀಟಿ ಬಿಡುಗಡೆ: ಸಂತಸ ವ್ಯಕ್ತಪಡಿಸಿದ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿಯಲ್ಲಿ ಪ್ರಸಿದ್ಧ ಸಿದ್ಧಾರೂಢ ಶ್ರೀಗಳ ಅಂಚೆ ಚೀಟಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಪ್ರಲ್ಹಾದ್ ಜೋಶಿ, ಪುಣ್ಯ ಪುರುಷರ ಅಂಚೆ ಚೀಟಿಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿರೋದು ಸೌಭಾಗ್ಯ ಎಂದು ಹೇಳಿದ್ದಾರೆ.
ಹುಬ್ಬಳ್ಳಿ, ಜುಲೈ 06: ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಸದ್ಗುರು ಸಿದ್ಧಾರೂಢ ಶ್ರೀಗಳ (Shri Siddharoodha Swamiji) ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸರ್ಕಾರ ಗೌರವ ಸಲ್ಲಿಸಿದೆ. ಸದ್ಗುರು ಸಿದ್ಧಾರೂಢ ಶ್ರೀಗಳ ಅಂಚೆ ಚೀಟಿ (Postage Stamp) ಹೊರ ತರುವಂತೆ ಸುಮಾರು ವರ್ಷಗಳಿಂದ ಭಕ್ತರ ಬೇಡಿಕೆ ಆಗಿತ್ತು. ಇದೀಗ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಭಕ್ತರ ಕನಸನ್ನು ನನಸು ಮಾಡಲಾಗಿದೆ. ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಕಾರ್ಯಕ್ರಮ ಮಾಡಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಭಾಪತಿ ಹೊರಟ್ಟಿ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಶಾಸಕರಾದ ಅರವಿಂದ ಬೆಲ್ಲದ್ ಮಹೇಶ್ ತೆಂಗಿನಕಾಯಿ, ಪ್ರಸಾದ್ ಅಬ್ಬಯ್ಯ, N.H.ಕೋನರೆಡ್ಡಿ ಭಾಗಿ ಆಗಿದ್ದರು.
ಸಿದ್ಧಾರೂಢ ಶ್ರೀಗಳ ಅಂಚೆ ಚೀಟಿ ಬಿಡುಗಡೆ ಬಳಿಕ ಮಾತನಾಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಹಳ ಸಂತೋಷದಿಂದ ಪುಣ್ಯ ಪುರುಷರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿರೋದು ಸೌಭಾಗ್ಯ. ಕೆಲ ವರ್ಷಗಳಿಂದ ಅಂಚೆ ಚೀಟಿ ಬಿಡುಗಡೆ ಮುಂದೂಡಿಕೆ ಆಗಿತ್ತು. ನಾವು ಇವತ್ತು ಅಶ್ವಿನಿ ವೈಷ್ಣವ್ರನ್ನು ಸ್ಮರಿಸಬೇಕು ಎಂದಿದ್ದಾರೆ.
ಪ್ರಲ್ಹಾದ್ ಜೋಶಿ ಟ್ವೀಟ್
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳು ಉತ್ತರ ಕರ್ನಾಟಕದ ಪಾಲಿನ ಆರಾಧ್ಯ ದೈವ. ದಾಸೋಹವನ್ನೇ ಸರ್ವ ಶ್ರೇಷ್ಠ ಕಾಯಕವೆಂದು ಪರಿಗಣಿಸಿ ನಾಡಿಗೆ ಕೀರ್ತಿ ತಂದ ಮಹಾಪುರುಷ. ಪ್ರಧಾನಿ ಶ್ರೀ @narendramodi ಅವರ ಮಾರ್ಗದರ್ಶನದಲ್ಲಿ, ಶ್ರೀ @AshwiniVaishnaw ಅವರ ನಾಯಕತ್ವದಲ್ಲಿ ಕೇಂದ್ರ ಅಂಚೆ ಸಚಿವಾಲಯ ಶ್ರೀ ಸಿದ್ಧಾರೂಢರ ಶ್ರೇಷ್ಠ… pic.twitter.com/5n2yGsAedN
— Pralhad Joshi (@JoshiPralhad) July 6, 2024
ಸಿದ್ಧಾರೂಢರ ಜೀವನವನ್ನು ನಾವೆಲ್ಲರೂ ನೆನಪು ಮಾಡಕೊಳ್ಳಬೇಕು. ಶಿವನ ಆಶೀರ್ವಾದದಿಂದ ಸಿದ್ಧಾರೂಢರ ಜನನವಾಗಿದೆ. ಭಾರತಕ್ಕೆ ಬಂದಿದ್ದವರನ್ನು ಸ್ವೀಕಾರ ಮಾಡಿದ್ದು ಸನಾತನ ಧರ್ಮ. ಸಿದ್ಧಾರೂಢರು ಅನೇಕ ಪವಾಡಗಳನ್ನು ಮಾಡಿ ತೋರಿಸಿದ್ದಾರೆ. ನಂಬಿದ ಭಕ್ತರನ್ನು ಸಿದ್ಧಾರೂಢರು ಕೈಹಿಡಿದಿದ್ದಾರೆ. ಟ್ರಸ್ಟಿಗಳು ಸಾಕಷ್ಟು ಬೆನ್ನು ಹತ್ತಿ ಈ ಕೆಲಸ ಮಾಡಿಸಿಕೊಂಡಿದ್ದಾರೆ. ನಾವು ಕೂಡ ಕೇಂದ್ರ ಸರ್ಕಾರಿಂದ ಸಹಾಯ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರದಿಂದ ಯಾತ್ರಿ ನಿವಾಸ ನಿರ್ಮಿಸಿ ಕೊಡ್ತೇವೆ: ಹೆಚ್.ಕೆ.ಪಾಟೀಲ್
ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ಸಿದ್ಧಾರೂಢ ಮಠ ಪಕ್ಷಾತೀತ ಹಾಗೂ ಧರ್ಮಾತೀತ ಕ್ಷೇತ್ರ ಇದು. ಸಿದ್ಧಾರೂಢರ ಖ್ಯಾತಿ, ಪ್ರಭಾವ ದೇಶದ ತುಂಬೆಲ್ಲಾ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಇಲ್ಲಿಗೆ ಭಕ್ತರು ಬರ್ತಾರೆ. ಅಂಚೆ ಚೀಟಿ ಬಿಡುಗಡೆ ಮಾಡಿರೋದು ಬಹಳ ಖುಷಿ ತಂದಿದೆ. ರಾಜ್ಯ ಸರ್ಕಾರದಿಂದ ಸಿದ್ಧಾರೂಢರ ಮಠದಲ್ಲಿ ಯಾತ್ರಿ ನಿವಾಸ ನಿರ್ಮಿಸಿ ಕೊಡುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:39 pm, Sat, 6 July 24