ಇಂದು (ಬುಧವಾರ ಏ.17) ಅಯೋಧ್ಯಾಪತಿ, ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮನ ಜನ್ಮದಿನ. ಹಾಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಜನ್ಮದಿನ ಕೂಡ.
ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ 188 ನೇಯ ಜನ್ಮದಿನೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. "ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು. ಆಧ್ಯಾತ್ಮಿಕ ಪ್ರಬುದ್ಧತೆ, ಸಾಮಾಜಿಕ ಸಾಮರಸ್ಯ ಮತ್ತು ವಂಚಿತರ ಸಬಲೀಕರಣಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಸ್ಮರಿಸಲಾಗುತ್ತದೆ" ಎಂದು ಎಂದು ಟ್ವೀಟ್ ಮಾಡಿದ್ದಾರೆ.
"ಶ್ರೀ ಸಿದ್ಧಾರೂಢ ಸ್ವಮೀಜಿ ಅವರ ಜೀವನ ಮತ್ತು ಕಾರ್ಯಗಳು ಎಲ್ಲ ಜೀವಿಗಳ ಕಲ್ಯಾಣಕ್ಕೆ ಗಾಢವಾದ ಬದ್ಧತೆಗೆ ನಿದರ್ಶನವಾಗಿವೆ. ಅವರು ಯಾವಾಗಲೂ ಏಕತೆ ಮತ್ತು ದಯೆಯ ಮಹತ್ವವನ್ನು ಎತ್ತಿ ತೋರಿಸಿದರು. ಅವರ ಆದರ್ಶಗಳನ್ನು ಈಡೇರಿಸಲು ನಾವು ಸದಾ ಶ್ರಮಿಸುತ್ತೇವೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಎಂಬ ಪುಟ್ಟ ಗ್ರಾಮದಲ್ಲಿ 1836 ರಲ್ಲಿ ರಾಮನವಮಿಯಂದು ದೇವಮಲ್ಲಮ್ಮ ಮತ್ತು ಗುರುಶಾಂತಪ್ಪರ ಪುಣ್ಯ ಗರ್ಭದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಸಿದ್ದ.
ಶ್ರೀ ಸಿದ್ಧಾರೂಢರು 6 ವರ್ಷದವರಿದ್ದಾಗಲೇ ಮನೆಯನ್ನು ತೊರೆದು ದೇಶ ಸಂಚಾರಕ್ಕೆ ಹೊರಟರು. ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಗುರುಗಳಾದ ಪೂಜ್ಯಶ್ರೀ ಗಜದಂಡ ಶಿವಯೋಗಿಗಳು ಶ್ರೀ ಸಿದ್ಧಾರೂಢರಿಗೆ ಸಿದ್ಧಾರೂಢ ಭಾರತಿ ಎಂದು ನಾಮಕರಣ ಮಾಡಿದರು.
ಮುಂದೆ ಶ್ರೀ ಸಿದ್ಧಾರೂಢರು ಹುಬ್ಬಳ್ಳಿಗೆ ಬಂದು ನೆಲಸಿದರು. ಹುಬ್ಬಳ್ಳಿಯಲ್ಲಿ ಮಠವನ್ನು ಕಟ್ಟಿ ನಿತ್ಯ ಮಠಕ್ಕೆ ಬರುವ ಭಕ್ತರಿಗೆ ಪ್ರವಚ ಹೇಳುತ್ತಾ ಅಧ್ಯಾತ್ಮದ ಪಥಕ್ಕೆ ಹಚ್ಚಿದರು. ಶ್ರೀ ಸಿದ್ಧಾರೂಢರು ಪವಾಡ ಪುರುಷರಾಗಿದ್ದು, ಇಂದಿಗೂ ಕೂಡ ಮಠದಲ್ಲಿ ಪವಾಡಗಳು ನಡೆಯುತ್ತವೆ ಎಂಬುವುದು ಭಕ್ತರ ನಂಬಿಕೆ.
ಶ್ರೀ ಸಿದ್ಧಾರೂಢರ ಜನ್ಮದಿನ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮಠದಲ್ಲಿ ಸ್ವಾಮೀಜಿಯವರ ಮೂರ್ತಿಯನ್ನು ತೊಟ್ಟಿಲಿನಲ್ಲಿ ಕೂರಿಸಿ ನಾಮಕರಣ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಶಿವರಾತ್ರಿಗೆ ರಥೋತ್ಸ ಜರಗುತ್ತದೆ. ಮತ್ತು ಶ್ರಾವಣ ಮಾಸದ ಕೊನೆಯ ದಿನ ತೆಪ್ಪೋತ್ಸವ ನಡೆಯುತ್ತದೆ.
ಶ್ರೀ ಸಿದ್ಧಾರೂಢ ಮಠದಲ್ಲಿ ಭಕ್ತರಿಗೆ ನಿರಂತರ ದಾಸೋಹವಿರುತ್ತದೆ. ಸಿದ್ಧಾರೂಢರ ಮಠಕ್ಕೆ ಪ್ರತಿನಿತ್ಯ ಅಸಂಖ್ಯೆ ಭಕ್ತರು ಬರುತ್ತಾರೆ.
Published On - 12:58 pm, Wed, 17 April 24