- Kannada News Photo gallery Cricket photos IPL 2024: Shane Watson sent his sincere apologies to RCB fans
RCB 2016 ರಲ್ಲೇ ಕಪ್ ಗೆಲ್ಲಬೇಕಿತ್ತು… ನನ್ನನ್ನು ಕ್ಷಮಿಸಿ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಆರ್ಸಿಬಿ ತಂಡವು ಮೂರು ಬಾರಿ ಫೈನಲ್ಗೆ ಪ್ರವೇಶಿಸಿದೆ. 2009 ರಲ್ಲಿ ಚೊಚ್ಚಲ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದ ಆರ್ಸಿಬಿ ಇದಾದ ಬಳಿಕ 2011 ರಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಆ ಬಳಿಕ 2016 ರಲ್ಲಿ ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ ಆರ್ಸಿಬಿ ಫೈನಲ್ ಆಡಿತ್ತು. ಇದಾಗ್ಯೂ ಆರ್ಸಿಬಿಗೆ ಒಮ್ಮೆಯೂ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ.
Updated on: Apr 17, 2024 | 2:22 PM

ಅದು 2016... ಐಪಿಎಲ್ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ SRH ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡವು 16.2 ಓವರ್ಗಳಲ್ಲಿ 150 ರನ್ ಕಲೆಹಾಕಿತು. ಈ ಹಂತದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಆರ್ಸಿಬಿ ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮ 19 ಓವರ್ಗಳ ಮುಕ್ತಾಯದ ವೇಳೆ ಎಸ್ಆರ್ಹೆಚ್ ತಂಡದ ಸ್ಕೋರ್ 184 ರನ್ಗಳು.

ಆದರೆ ಕೊನೆಯ ಓವರ್ನಲ್ಲಿ ಬೆನ್ ಕಟ್ಟಿಂಗ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಶೇನ್ ವಾಟ್ಸನ್ ಎಸೆದ ಅಂತಿಮ ಓವರ್ನಲ್ಲಿ 4, 6, 6, 1, 1, 6 ಸಿಡಿಸುವ ಮೂಲಕ ಕಟ್ಟಿಂಗ್ ಬರೋಬ್ಬರಿ 24 ರನ್ ಕಲೆಹಾಕಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.

209 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 10.3 ಓವರ್ಗಳಲ್ಲಿ 114 ರನ್ ಕಲೆಹಾಕಿತು. ಈ ಹಂತದಲ್ಲಿ ಕ್ರಿಸ್ ಗೇಲ್ (76) ಔಟಾದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (54) ಕೂಡ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಎಬಿ ಡಿವಿಲಿಯರ್ಸ್ (5) ಹಾಗೂ ಕೆಎಲ್ ರಾಹುಲ್ (11) ಬಂದ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದರು.

ಇದಾಗ್ಯೂ 15.3 ಓವರ್ಗಳಲ್ಲಿ ಆರ್ಸಿಬಿ 160 ರನ್ ಗಳಿಸಿತ್ತು. ಹೀಗಾಗಿ ಆರ್ಸಿಬಿಗೆ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಬೌಲಿಂಗ್ನಲ್ಲಿ ದುಬಾರಿಯಾಗಿದ್ದ ಶೇನ್ ವಾಟ್ಸನ್ ಬ್ಯಾಟಿಂಗ್ನಲ್ಲೂ ವಿಫಲರಾದರು. ಕೇವಲ 11 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಹೊರ ನಡೆದರು. ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ಗಳಿಸಿ 8 ರನ್ಗಳಿಂದ ಸೋಲೊಪ್ಪಿಕೊಂಡಿತು.

ಈ ಮೂಲಕ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಆರ್ಸಿಬಿ ಕೇವಲ 8 ರನ್ಗಳಿಂದ ಕೈಚೆಲ್ಲಿಕೊಂಡಿತು. ಈ ಸೋಲಿನ ಬಗ್ಗೆ ಈಗಲೂ ಪಶ್ಚಾತಾಪ ಪಡುತ್ತಿರುವುದಾಗಿ ಆರ್ಸಿಬಿ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶೇನ್ ವಾಟ್ಸನ್, ಆರ್ಸಿಬಿ ತಂಡವು 2016 ರಲ್ಲೇ ಕಪ್ ಗೆಲ್ಲಬೇಕಿತ್ತು. ಆದರೆ ಅಂದು ನಾನು 4 ಓವರ್ಗಳಲ್ಲಿ 61 ರನ್ ನೀಡಿದ್ದೆ. ಕೊನೆಯ ಓವರ್ನಲ್ಲಿ 24 ರನ್ ನೀಡಿದ್ದು ಆರ್ಸಿಬಿ ಪಾಲಿಗೆ ದುಬಾರಿಯಾಯಿತು. ಅಲ್ಲದೆ ಬ್ಯಾಟಿಂಗ್ನಲ್ಲೂ ವಿಫಲನಾದೆ.

ಅವತ್ತು ನನ್ನ ಕಳಪೆ ಪ್ರದರ್ಶನಿಂದಾಗಿ ಆರ್ಸಿಬಿ ತಂಡ ಚೊಚ್ಚಲ ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿತು. ಅಂತಹದೊಂದು ಅವಕಾಶವನ್ನು ಕೈ ತಪ್ಪಿಸಿದಕ್ಕಾಗಿ ನಾನು ಆರ್ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಶೇನ್ ವಾಟ್ಸನ್ ತಿಳಿಸಿದ್ದಾರೆ.



















