ಧಾರವಾಡ, ಏಪ್ರಿಲ್ 05: ಜಿಲ್ಲೆಯಲ್ಲಿ ಉದ್ಭವಿಸಿರುವ ಜಲಕ್ಷಾಮದ ಎಫೆಕ್ಟ್ ಈಗ ಇಲ್ಲಿನ ಜಿಲ್ಲಾ ಆಸ್ಪತ್ರೆಗೂ ತಟ್ಟಿದೆ. ನಿತ್ಯ L&T ಕಂಪನಿಯ ಸರಬರಾಜು ವ್ಯವಸ್ಥೆಯಿಂದ ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಈಗ ಧಾರವಾಡ ಜಿಲ್ಲಾ ಆಸ್ಪತ್ರೆ (Dharwad District Hospital) ಖಾಸಗಿ ಟ್ಯಾಂಕರ್ಗಳಿಗೆ ಮೊರೆ ಹೋಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಧಾರವಾಡ ಜಿಲ್ಲೆಯಲ್ಲಿ ಸದ್ಯ ಜಲಕ್ಷಾಮ ಉದ್ಭವಿಸಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ ಮಲಪ್ರಭಾ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟವೂ ಕುಸಿಯುತ್ತಿದೆ. ಬೊರವೆಲ್ಗಳು ಬತ್ತಿ ಹೋಗುತ್ತಿವೆ. ಇದರ ಪರಿಣಾಮವಾಗಿ ಅವಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಪರದಾಟ ನಡೆದಿದೆ. ಈ ನೀರು ಕೊರತೆಯ ಪರಿಣಾಮವೀಗ ಧಾರವಾಡ ಜಿಲ್ಲಾ ಆಸ್ಪತ್ರೆಯ ಮೇಲಾಗಿದೆ. ನೀರು ಸರಬರಾಜು ವ್ಯವಸ್ಥೆಯಿಂದ ಬರುತ್ತಿರುವ ನೀರು ಆಸ್ಪತ್ರೆಯ ಬೇಡಿಕೆಗೆ ತಕ್ಕಷ್ಟು ಸಿಗುತ್ತಿಲ್ಲವಂತೆ. ಹೀಗಾಗಿ ಅವಳಿ ನಗರದ ನೀರು ಸರಬರಾಜು ವ್ಯವಸ್ಥೆ ನೋಡಿಕೊಳ್ಳುವ L&T ಕಂಪನಿ ನಿತ್ಯ ಎರಡು ಟ್ಯಾಂಕರ್ ನೀರನ್ನು ಉಚಿತವಾಗಿ ಆಸ್ಪತ್ರೆಗೆ ಕೊಡುತ್ತಿದ್ದರೂ ಸಾಲುತ್ತಿಲ್ಲ. ಹೀಗಾಗಿ ಈಗ ಜಿಲ್ಲಾ ಆಸ್ಪತ್ರೆ ಖಾಸಗಿ ಟ್ಯಾಂಕರ್ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ನೀರಿಗಾಗಿ ಹಾಹಾಕಾರ: ಟ್ಯಾಂಕರ್ ಮೂಲಕ ಮನೆ-ಮನೆಗೆ ನೀರು ನೀಡ್ತಿರುವ ಯುವಕರು
ಈ ಜಿಲ್ಲಾ ಆಸ್ಪತ್ರೆ ಧಾರವಾಡ ಜಿಲ್ಲೆಗೆ ಮಾತ್ರವಲ್ಲ, ಉತ್ತರ ಕನ್ನಡ ಜಿಲ್ಲೆಯ ಎರಡು ಹಾಗೂ ಬೆಳಗಾವಿ ಜಿಲ್ಲೆಯ ಮೂರು ತಾಲೂಕಿನ ಜನತೆಗೆ ಆರೋಗ್ಯ ಆಸರೆಯಾಗಿದೆ. ಇಲ್ಲಿ ಹೊಸದಾಗಿ ನಿರ್ಮಿಸಿರುವ ತಾಯಿ ಮಗು ಆರೈಕೆಯ ಹೆರಿಗೆ ಆಸ್ಪತ್ರೆ ಬಡವರಿಗೆ ಉತ್ತಮ ಸೌಕರ್ಯ ನೀಡುತ್ತಿದೆ. ಹೀಗಾಗಿ ಬಹುತೇಕರು ಇಲ್ಲಿಯೆ ಹೆರಿಗೆಗೆ ಬರುತ್ತಾರೆ. ಹೆರಿಗೆ ವಿಭಾಗಕ್ಕೆ ಹೆಚ್ಚಿನ ನೀರು ಸಹ ಬೇಕಾಗುತ್ತದೆ. ಆದರೆ ಬೇಡಿಕೆಗೆ ತಕ್ಕಂತೆ ನೀರೇ ಇಲ್ಲ. ಹೀಗಾಗಿ ನಿತ್ಯ 10 ರಿಂದ 15 ಟ್ಯಾಂಕರ್ ನೀರು ತರಿಸುತ್ತಿದ್ದಾರಂತೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಬೊರವೆಲ್ಗಳ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ ಅನೇಕ ಕಡೆ ನೀರಿನ ಸಮಸ್ಯೆ ಆಗಿದೆ. ಜಿಲ್ಲಾ ಆಸ್ಪತ್ರೆ ಆವರಣದ ಬೊರವೆಲ್ನಲ್ಲೂ ಕೂಡ ನೀರು ಕಡಿಮೆಯಾಗಿದೆ. ಹೀಗಾಗಿ ರೋಗಿಗಳಿಗೆ ಸಮಸ್ಯೆಯಾಗದಂತೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
ಒಟ್ಟಾರೆಯಾಗಿ ಸರ್ಕಾರದ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಯೇ ಈಗ ಖಾಸಗಿ ಟ್ಯಾಂಕರ್ಗಳಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದ್ದು, ನೋಡಿದರೆ ಬರ ಇನ್ನಷ್ಟು ಬೆಂಡು ಮಾಡುತ್ತೆ ಆ ದೇವರೆ ಬಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ