ವೇತನ‌ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ: ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?

ಕರ್ನಾಟಕದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಗೆ ಫೆಬ್ರವರಿ ತಿಂಗಳ ವೇತನ ವಿಳಂಬವಾಗಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಮನೆ ಬಾಡಿಗೆ, ಸಾಲದ ಕಂತುಗಳು ಬಾಕಿ ಉಳಿದಿದ್ದು, ಪೊಲೀಸರು ಪರದಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಬೃಹತ್ ಬಜೆಟ್ ಘೋಷಿಸಿದ ಸರ್ಕಾರಕ್ಕೆ ಪೊಲೀಸ್ ವೇತನ ನೀಡಲು ಹಣವಿಲ್ಲದಿರುವುದು ರಾಜ್ಯದ ಆರ್ಥಿಕ ದಿವಾಳಿತನದ ಸಂಕೇತ ಎಂದು ಟೀಕಿಸಿದ್ದಾರೆ. ಕೂಡಲೇ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ವೇತನ‌ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ: ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?
ಪೊಲೀಸ್​​ ಸಿಬ್ಬಂದಿ (ಸಾಂದರ್ಭಿಕ ಚಿತ್ರ)
Image Credit source: Google
Edited By:

Updated on: Mar 11, 2026 | 12:01 PM

ಹುಬ್ಬಳ್ಳಿ, ಮಾರ್ಚ್​​ 11: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಉದ್ಭವಿಸಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ‌ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್​​ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ ವೇತನ ಬಂದಿಲ್ಲ ಎನ್ನಲಾಗಿದೆ.

ಬಿ.ವೈ. ವಿಜಯೇಂದ್ರ ಕಿಡಿ

Vijayendra Tweet

ವಿಜಯೇಂದ್ರ ಪೋಸ್ಟ್​​

ಪೊಲೀಸ್​​ ಸಿಬ್ಬಂದಿಗೆ ಸರ್ಕಾರ ಇನ್ನೂ ವೇತನ ಪಾವತಿಸದಿರುವ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿರುವ ಅವರು, ಈ ಬಾರಿ 4.48 ಲಕ್ಷ ಕೋಟಿ ರೂ ಗಾತ್ರದ ಅತಿ ದೊಡ್ಡ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ಸದೃಢವಾಗಿದೆ ಎನ್ನುವ ಮರೀಚಿಕೆಯಲ್ಲಿ ವಿಹರಿಸುತ್ತಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆದರೆ ಬಜೆಟ್ ಪುಸ್ತಕದಲ್ಲಿ ನೀವು ಬರೆದುಕೊಂಡ ಅಂಕಿ-ಸಂಖ್ಯೆಗಳ ಆಚೆಗೆ, ವಾಸ್ತವ ಜಗತ್ತಿನ ಕಟುಸತ್ಯವನ್ನು ಮಾಧ್ಯಮ ವರದಿ ಬಯಲು ಮಾಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಯುವ ಪೊಲೀಸ್ ಸಿಬ್ಬಂದಿಗಳಿಗೆ ಹಿಂದಿನ ತಿಂಗಳ ವೇತನ ನೀಡಲು ನಿಮ್ಮ ಕಾಂಗ್ರೆಸ್​​ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ನಿಮ್ಮ ಬಜೆಟ್ ಎಷ್ಟು ಅವಾಸ್ತವಿಕವಾಗಿದೆ ಎಂದು ಬೇರೆ ಹೇಳಬೇಕೇ? ಪೊಲೀಸ್ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಸರ್ಕಾರದ ಬಳಿ ಹಣವಿಲ್ಲ, ಆದರೂ ನಿಮ್ಮ ಒಣ ಪ್ರತಿಷ್ಠೆಯ ಮಾತುಗಳಿಗೆ ಬರವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?; ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ವಿಜಯನಗರ, ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಪೊಲೀಸರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಸುಳ್ಳು ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಗಲಿರುಳು ಶ್ರಮಿಸುವ ನಮ್ಮ ರಕ್ಷಕರಿಗೆ ವೇತನ ನೀಡಲು ಹಣವಿಲ್ಲ. ಇದು ಕೇವಲ ತಾಂತ್ರಿಕ ವಿಳಂಬವಲ್ಲ, ರಾಜ್ಯದ ಆರ್ಥಿಕ ದಿವಾಳಿತನದ ಮತ್ತೊಂದು ಸಾಕ್ಷಿ. ಒಂದು ಕಡೆ ದಾಖಲೆ ಮೊತ್ತದ ಬಜೆಟ್ ಘೋಷಣೆ, ಮತ್ತೊಂದು ಕಡೆ ಸಂಬಳಕ್ಕಾಗಿ ಪೊಲೀಸರ ಪರದಾಟ . ಈ ವೈರುಧ್ಯವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ. ಬಜೆಟ್ ನಲ್ಲಿ ಅಂಕಿ-ಅಂಶಗಳ ಮೂಲಕ ಜನರನ್ನು ಮರಳು ಮಾಡುವ ನಿಮ್ಮ ಅನಗತ್ಯ, ಅವಾಸ್ತವಿಕ ಸರ್ಕಸ್ ಬಯಲಾಗಿದೆ. ಕಾಗದದ ಮೇಲಿನ ಘೋಷಿತ ಅಂಕಿ-ಅಂಶಗಳಿಗಿಂತ, ಜನರ ಸ್ವಾಭಿಮಾನದ ಬದುಕು ಮುಖ್ಯ. ನಿಮ್ಮ ವೈಫಲ್ಯಗಳಿಗೆ ಕಾರಣ ಏನೇ ಇರಲಿ, ಈ ಕೂಡಲೇ ರಾಜ್ಯದ ಪೊಲೀಸ್ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us