
ಧಾರವಾಡ, ಜನವರಿ 08: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (Karnatak University) ಹೊಸದೊಂದು ಕ್ರಾಂತಿಗೆ ಮುಂದಾಗಿದೆ. ಮುಂಚೆಯಿಂದಲೂ ಉನ್ನತ ಶಿಕ್ಷಣ ನೀಡುವಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ವಿಶ್ವವಿದ್ಯಾಲಯ ಇದೀಗ ಕೃತಕ ಬುದ್ಧಿಮತ್ತೆಯಲ್ಲಿ (AI) ಕ್ರಾಂತಿಯನ್ನು ಮಾಡಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಈ ಕೃತಕ ಬುದ್ಧಿಮತ್ತೆಯನ್ನು ಎಲ್ಲ ಕೋರ್ಸ್‌ಗಳಲ್ಲಿ ಕಲಿಸಲು ನಿರ್ಧರಿಸಲಾಗಿದೆ.
ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಕೋರ್ಸ್‌ಗಳು ಕೂಡ ಬದಲಾಗಬೇಕು. ಅದರಲ್ಲೂ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೆಜ್ಜೆ ಇಡುತ್ತಿದೆ. ಬಿಎ, ಬಿಎಸ್ಸಿ, ಬಿಕಾಂ ನಂತಹ ಸಾಂಪ್ರದಾಯಿಕ ಕೋರ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯದ ಕೌಶಲ್ಯ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ನೀಡಲು ವಿವಿ ಮುಂದಾಗುತ್ತಿದೆ.
ಇದನ್ನೂ ಓದಿ: ನೂರಾರು ಎಕರೆಯ ಧಾರವಾಡ ಕರ್ನಾಟಕ ವಿವಿ ಜಮೀನು ರಕ್ಷಣೆಗೆ ದಿಟ್ಟ ಹೆಜ್ಜೆ: ಕುಲಪತಿ ನಡೆಗೆ ಮೆಚ್ಚುಗೆ
ಇನ್ನು ಬಿಸಿಎ ಎಐ ಅಥವಾ ಬಿಸಿಎ ಸೈಬರ್ ಸೆಕ್ಯುರಿಟಿ ಅಥವಾ ಬಿಸಿಎ ಡೇಟಾ ಸೈನ್ಸ್, ಮಿಷನ್ ಲರ್ನಿಂಗ್ ಅಂತಹ ಕೋರ್ಸ್‌ಗಳನ್ನು ಪರಿಚಯಿಸುವ ಚಿಂತನೆ ನಡೆಸಿದೆ. ಈ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಲು ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡುವ ಮೂಲಕ ಕವಿವಿ ವಿದ್ಯಾರ್ಥಿಗಳಿಗೆ ಪದವಿ ಮುಗಿದ ತಕ್ಷಣ ಗೌರವಯುತ ಉದ್ಯೋಗಗಳು ಸಿಗುವಂತೆ ನೋಡಿಕೊಳ್ಳುವ ಗುರಿಯನ್ನು ಕೂಡ ಇಟ್ಟುಕೊಳ್ಳಲಾಗಿದೆ. ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಂಡಿರುವ ಕುಲಪತಿ ಪ್ರೊ. ಎ.ಎಂ. ಖಾನ್, ಕರ್ನಾಟಕ ವಿಶ್ವವಿದ್ಯಾಲಯದ ಬಹುತೇಕ ಕೋರ್ಸ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್ನ್ನು ಕೂಡ ಸೇರಿಸಲು ನಿರ್ಧರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನಿವಾರ್ಯವೆನ್ನುವಂತಾಗಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಎಐ ತನ್ನ ಛಾಪನ್ನು ಮೂಡಿಸುತ್ತಾ ಸಾಗುತ್ತಿದೆ. ಒಂದು ವೇಳೆ ವಿದ್ಯಾರ್ಥಿಗಳು ಹಿಂದಿನ ವರ್ಷಗಳಂತೆ ಈಗಲೂ ಅದೇ ಹಳೆಯ ವಿಷಯಗಳನ್ನು ವ್ಯಾಸಂಗ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಾಗೋದಿಲ್ಲ ಅಂತಾ ಅರಿತಿರುವ ಕುಲಪತಿಗಳು ಇದೀಗ ಹೊಸದೊಂದು ಹೆಜ್ಜೆಯನ್ನು ಇಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Guest Lecturer Jobs: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?
ತಂತ್ರಜ್ಞಾನ ಬೆಳೆದಂತೆಲ್ಲಾ ಬದಲಾವಣೆ ಆಗಲೇಬೇಕು. ಅದಕ್ಕಾಗಿ ಎಐ ತಂತ್ರಜ್ಞಾನದ ಬಗ್ಗೆ ಜ್ಞಾನ ಇರುವ ನುರಿತ ಪ್ರಾಧ್ಯಾಪಕರಿಂದ ಈ ಕೋರ್ಸ್ ಪಾಠ ವಿದ್ಯಾರ್ಥಿಗಳಿಗೆ ಮಾಡಬೇಕಿದೆ. ಅದಕ್ಕಾಗಿ ತರಬೇತಿ ನೀಡಿ ಪ್ರಾಧ್ಯಾಪಕರಿಗೆ ಎಐ ಕಲಿಸುವ ಜವಾಬ್ದಾರಿಯನ್ನು ಕೂಡ ನೀಡಬೇಕಿದೆ.
ಒಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿವಿ ಹೊಸದೊಂದು ಹೆಜ್ಜೆ ಇಡಲು ಹೊರಟಿದೆ. ಅದಕ್ಕೆ ರಾಜ್ಯ ಸರ್ಕಾರ ಕೂಡ ಬೆಂಬಲಿಸಿದೆ. ಇದು ಕರ್ನಾಟಕ ವಿವಿ ಮತ್ತು ಈ ಭಾಗದ ವಿದ್ಯಾರ್ಥಿಗಳಿಗೆ ಸಂತಸದ ವಿಷಯವೇ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.