ಧಾರವಾಡ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು: 20ಕ್ಕೂ ಹೆಚ್ಚು ರೈತರಿಂದ ಆಕ್ರೋಶ

| Updated By: ಗಣಪತಿ ಶರ್ಮ

Updated on: Nov 01, 2024 | 8:11 AM

ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ವಿಚಾರ ಈಗ ಕರ್ನಾಟಕದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಧಾರವಾಡ, ವಿಜಯಪುರ, ಕಲಬುರಗಿ ಸೇರಿ ಅನೇಕ ಜಿಲ್ಲೆಗಳ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಂ ರೈತರ ಪಹಣಿಯಲ್ಲೂ ಈಗ ವಕ್ಫ್ ಹೆಸರು ನಮೂದಾಗಿದೆ.

ಧಾರವಾಡ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು: 20ಕ್ಕೂ ಹೆಚ್ಚು ರೈತರಿಂದ ಆಕ್ರೋಶ
ಮುಸ್ಲಿಂ ರೈತನ ಆಸ್ತಿ ದಾಖಲೆಯಲ್ಲಿಯೂ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದು
Follow us on

ಧಾರವಾಡ, ನವೆಂಬರ್ 1: ಧಾರವಾಡ ಜಿಲ್ಲೆಯ ಅನೇಕ ಹಿಂದೂ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜಿಲ್ಲೆಯ ಅನೇಕ ಮುಸ್ಲಿಂ ರೈತರ ಆಸ್ತಿ ಪಹಣಿಯಲ್ಲಿಯೂ ವಕ್ಫ್ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ. ಹಿಂದೂ ಆಯ್ತು ಈಗ ಮುಸ್ಲಿಂ ರೈತರ ಜಮೀನಿನ ಮೇಲೂ ವಕ್ಫ್ ಕಣ್ಣು ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.

ಧಾರವಾಡದ ನವಲಗುಂದದ 20ಕ್ಕೂ ಹೆಚ್ಚು ಮುಸ್ಲಿಂ ರೈತರ ಆಸ್ತಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಮುಸ್ಲಿಂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಣ್ಣೆಹಳ್ಳದ ಅಕ್ಕಪಕ್ಕದ ರೈತರ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿದ್ದು, ಸುಮಾರು 40 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ.

ದಶಕಗಳ ಹಿಂದೆ ಖರೀದಿ ಮಾಡಿದ್ದ ಜಮೀನು

ಹಲವಾರು ದಶಕಗಳ ಹಿಂದೆ ಖರೀದಿ ಮಾಡಿದ ಜಮೀನು ಇದಾಗಿದೆ. 2018 ರಿಂದ ಹಂತ ಹಂತವಾಗಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗುತ್ತಿದೆ. ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದಾಗಲೂ ಪಹಣಿಯಲ್ಲಿ ವಕ್ಫ್ ಹೆಸರು ಎಂಟ್ರಿಯಾಗಿದೆ. ಹುನಗುಂದ ಕುಟುಂಬದ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಅಣ್ಣ-ತಮ್ಮಂದಿರ ಮಧ್ಯೆ ಇದ್ದ ಜಮೀನು ವ್ಯಾಜ್ಯ ವಿಚಾರಣೆ ನಡೆಯುತ್ತಿತ್ತು. ಆದಾಗ್ಯೂ, ಅದೇ ಸಂದರ್ಭದಲ್ಲಿ ನಿಯಮ ಮೀರಿ ವಕ್ಪ್ ಹೆಸರು ಎಂಟ್ರಿ ಮಾಡಲಾಗಿತ್ತು. ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವ್ಯಾಜ್ಯ ಮುಗಿದ ಬಳಿಕ ಪಹಣಿ ನೋಡಿದ ಮಾಲಿಕರಿಗೆ ಶಾಕ್ ಆಗಿದೆ. ಆಗ ವಕ್ಫ್ ಹೆಸರು ಇರುವುದು ಬಯಲಿಗೆ ಬಂದಿದೆ.

ಕಾನೂನು ಹೋರಾಟಕ್ಕೆ ಮುಂದಾದ ರೈತರು

ಈಗ ವಕ್ಫ್ ವಿರುದ್ಧ ಧಾರವಾಡ ಜಿಲ್ಲೆಯ ರೈತರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ತಹಶೀಲ್ದಾರ್‌ಗೂ ಮನವಿ ಸಲ್ಲಿಕೆ ಮಾಡಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರೈತರ ಪಹಣಿಯಲ್ಲಿ ವಕ್ಫ್ ಹೆಸರು: ಪ್ರಧಾನಿ ಮೋದಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ ಧಾರವಾಡ ಸಾಮಾಜಿಕ ಕಾರ್ಯಕರ್ತ

ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ರೈತರಿಗೆ ವಕ್ಫ್ ಭಯ ಹೆಚ್ಚಾಗಿದೆ. ಈ ಬಗ್ಗೆ ಕಳೆದ ವರ್ಷವೇ ಧಾರವಾಡದ ರೈತರ ಅರಿವಿಗೆ ಬಂದಿತ್ತು. ಆದರೆ, ರೈತರ ಸಮಸ್ಯೆಗೆ ಯಾರೂ ಕಿವಿಯಾಗಿರಲೇ ಇಲ್ಲ. ಇದೀಗ ವಿಜಯಪುರ ಸೇರಿದಂತೆ ಇತರ ಕಡೆಗಳಲ್ಲಿ ವಿವಾದ ದೊಡ್ಡದಾಗುತ್ತಿದ್ದಂತೆಯೇ ಧಾರವಾಡದ ವಕ್ಫ್ ಗೊಂದಲ ವಿಚಾರವೂ ಮುನ್ನೆಲೆಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ