ರೈತರ ಪಹಣಿಯಲ್ಲಿ ವಕ್ಫ್ ಹೆಸರು: ಪ್ರಧಾನಿ ಮೋದಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ ಧಾರವಾಡ ಸಾಮಾಜಿಕ ಕಾರ್ಯಕರ್ತ
ಧಾರವಾಡದ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು ಕಳೆದ ವರ್ಷವೇ ಈ ಸಮಸ್ಯೆಯ ಬಗ್ಗೆ ತಿಳಿಸಿರುವುದು ಈಗ ಬೆಳಕಿಗೆ ಬಂದಿದೆ.
ಧಾರವಾಡ, ಅಕ್ಟೋಬರ್ 31: ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವ ವಿಚಾರವಾಗಿ ವರ್ಷದ ಹಿಂದೆಯೇ ಧಾರವಾಡದ ಉಪ್ಪಿನಬೆಟಗೇರಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಧಾನಿ ಗಮನ ಸೆಳೆಯುವ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ. ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಕೃಷ್ಣಪ್ಪ ಬುದ್ನಿ, ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗುವುದನ್ನು ತಡೆಯಲು ಆಗ್ರಹಿಸಿದ್ದರು. ಯಾವ ಮಾನದಂಡದ ಮೇಲೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. 2023ರ ನವೆಂಬರ್ 28ರಂದು ಪ್ರಧಾನಿಗೆ ಪತ್ರ ಕಳುಹಿಸಿದ್ದರು. 2023ರ ಡಿಸೆಂಬರ್ 2ರಂದು ತಲುಪಿದ್ದ ಪತ್ರ ಪ್ರಧಾನಿ ಕಚೇರಿ ತಲುಪಿತ್ತು. ಬಳಿಕ ಡಿಸೆಂಬರ್ 8ರಂದು ಕೃಷ್ಣಪ್ಪಗೆ ಪ್ರಧಾನಿ ಕಾರ್ಯಾಲಯದಿಂದ ಫೋನ್ ಕರೆ ಬಂದಿತ್ತು. ಪತ್ರ ಬರೆದು, ದೂರು ಕೊಡುತ್ತಿರುವುದು ನೀವೇನಾ ಎಂದು ಕೇಳಿ ಪಿಎಂಒ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದರು. ಅಲ್ಲದೆ, ನಿಮ್ಮ ದೂರನ್ನು ಪ್ರಧಾನಿ ಗಮನಕ್ಕೆ ತರುವುದಾಗಿಯೂ ಹೇಳಿದ್ದರು.
ಕಳೆದ ವರ್ಷವೇ ಶುರುವಾಗಿತ್ತು ಹೋರಾಟ
ಉಪ್ಪಿನ ಬೆಟಗೇರಿ ಗ್ರಾಮದ ಅನೇಕರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದ್ದು ಕಳೆದ ವರ್ಷವೇ ತಿಳಿದುಬಂದಿತ್ತು. ಇದಕ್ಕಾಗಿ ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರು. ಕೊನೆಗೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಕೃಷ್ಣಪ್ಪ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.
ಗಮನ ಸೆಳೆಯಿತು ವಿಜಯಪುರ ರೈತರ ಸಮಸ್ಯೆ
ಧಾರವಾಡದಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದ ವಿಚಾರ ಕಳೆದ ವರ್ಷವೇ ಬೆಳಕಿಗೆ ಬಂದಿದ್ದರೂ, ಆ ಬಗ್ಗೆ ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ವಿಜಯಪುರದಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಭಾರಿ ಪ್ರತಿಭಟನೆಗೆ ಕಾರಣವಾಗಿದ್ದರಿಂದ ರಾಜ್ಯದ ಇತರ ಜಿಲ್ಲೆಗಳ ವಿಚಾರವೂ ಬೆಳಕಿಗೆ ಬಂದಿದೆ. ಅದರಂತೆ ಧಾರವಾಡದ ರೈತರ ಪಹಣಿ ವಿಚಾರವೂ ಮುನ್ನೆಲೆಗೆ ಬಂದಿದೆ.
ಪರಿಹಾರವೇನು?
ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ ಅವರಿಗೆ ಸಾಲ ಪಡೆಯುವುದು ಸೇರಿದಂತೆ ವಿವಿಧ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ತೊಡಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಅವರ ಪಹಣಿಯಲ್ಲಿರುವ ವಕ್ಫ್ ಉಲ್ಲೇಖ ತೆರವಾಗಬೇಕು.
ಇದನ್ನೂ ಓದಿ: ಧಾರವಾಡ ರೈತರಿಗೂ ಶುರುವಾಯ್ತು ವಕ್ಫ್ ನಡುಕ: ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಉಲ್ಲೇಖ
ವಿಜಯಪುರದಲ್ಲಿ ರೈತರ ಭಾರಿ ಪ್ರತಿಭಟನೆಯ ಬಳಿಕ ಕಂದಾಯ ಇಲಾಖೆ ರೈತರ ಜಮೀನುಗಳಿಂದ ವಕ್ಫ್ ಹೆಸರು ತೆರವುಗೊಳಿಸುವ ಕೆಲಸ ಆರಂಭಿಸಿದೆ. ಇದು ರೈತರಿಗೆ ದೊರೆತ ಮೊದಲ ಹಂತದ ಜಯ ಎಂದೇ ಬಣ್ಣಿಸಲಾಗುತ್ತಿದೆ. ಸದ್ಯ ಧಾರವಾಡದ ರೈತರು ಸಮಸ್ಯೆಯಿಂದ ಬಚಾವಗಬೇಕಾದರೂ ಇದೇ ಪರಿಹಾರ. ಅಂದರೆ, ಕಂದಾಯ ಇಲಾಖೆ ರೈತರ ಪಹಣಿಗಳಿಂದ ವಕ್ಫ್ ಹೆಸರು ತೆರವುಗೊಳಿಸಬೇಕು. ಹಾಗಿದ್ದರಷ್ಟೇ ಪರಿಹಾರ ಸಾಧ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:52 am, Thu, 31 October 24