ಬೆಂಗಳೂರು, ಫೆಬ್ರವರಿ 22: ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ (Power tariff hike) ಪರಿಹಾರವಲ್ಲ. ವಿದ್ಯುತ್ ಸರಬರಾಜು ಕಂಪನಿಗಳು ಇತರೆ ಮೂಲಗಳಿಂದ ಆದಾಯ ಗಳಿಸಿ ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಅಧ್ಯಕ್ಷ ಪಿ.ರವಿಕುಮಾರ್ ಸಲಹೆ ನೀಡಿದ್ದಾರೆ. ಹುಬ್ಬಳ್ಳಿಯ ನವನಗರದಲ್ಲಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕೆಇಆರ್‌ಸಿ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿಕುಮಾರ್, ಹೆಸ್ಕಾಂ 0.57 ದರ ಏರಿಕೆ ಪ್ರಸ್ತಾವನೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ನಾವು ದರ ಹೆಚ್ಚಿಸಿದರೆ, ಅದು ಗ್ರಾಹಕರಿಗೆ ದೊಡ್ಡ ಹೊರೆಯಾಗುತ್ತದೆ. ಹೆಸ್ಕಾಂ ವಿತರಣಾ ನಷ್ಟವನ್ನು ತಡೆಯಬೇಕು, ಅನಗತ್ಯ ವೆಚ್ಚಗಳನ್ನು ನಿರ್ಬಂಧಿಸಬೇಕು ಮತ್ತು ಆ ಮೂಲಕ ನಷ್ಟವನ್ನು ತಡೆಯಬೇಕು. ಅದರ ಬದಲು ನಿಯಮಿತವಾಗಿ ದರವನ್ನು ಹೆಚ್ಚಿಸಬಾರದು ಎಂದು ಅವರು ಹೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಜತೆಗೆ, ಶೀಘ್ರದಲ್ಲೇ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ‘ಗ್ರಾಹಕರ ಹಿತರಕ್ಷಣಾ ವೇದಿಕೆ’ ಪ್ರಾರಂಭಿಸುವ ಭರವಸೆ ನೀಡಿದ್ದಾರೆ.
ವಿದ್ಯುತ್ ಉತ್ಪಾದಿಸಲು ಸೋಲಾರ್ ರೂಫ್ ಟಾಪ್ ಫೋಟೋ ವೋಲ್ಟಾಯಿಕ್ (ಎಸ್‌ಆರ್‌ಟಿಪಿವಿ) ಹೊಂದಿದ್ದು, ಅದನ್ನು ಹೆಸ್ಕಾಂಗೆ ನಿಡುತ್ತೇವೆ ಎಂದು ಅನೇಕ ಗ್ರಾಹಕರು ಹೇಳಿದರು. ಬಳಸುವುದಕ್ಕಿಂತ ಹೆಚ್ಚಿನ ಯುನಿಟ್ಗಳನ್ನು ಉತ್ಪಾದಿಸಿದರೂ, ಹೆಸ್ಕಾಂ ನಿರಂತರವಾಗಿ ದರ ಮತ್ತು ಸ್ಥಿರ ಶುಲ್ಕವನ್ನು (ಎಫ್‌ಸಿ) ಹೆಚ್ಚಿಸುತ್ತಿರುವುದರಿಂದ ಎಸ್‌ಆರ್‌ಟಿಪಿವಿಗಳಿಂದ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ಈ ಮಧ್ಯೆ, ಬಿಲ್ ಸಮಸ್ಯೆ ಬಗ್ಗೆ ಒಪ್ಪಿಕೊಂಡ ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್, ಬಿಲ್ ಸ್ವರೂಪಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸುವಂತೆ ಹೆಸ್ಕಾಂಗೆ ಸೂಚಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅನೇಕ ಗ್ರಾಹಕರು ತಾವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಹೆಚ್ಚಿದ ವಿದ್ಯುತ್ ದರದ ಬಗ್ಗೆ ಧ್ವನಿಯೆತ್ತಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) ಕೈಗಾರಿಕಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಯಲಿಗಾರ್, ಭಾರಿ ವಿದ್ಯುತ್ ದರದಿಂದಾಗಿ ರಾಜ್ಯದಲ್ಲಿ ಹೂಡಿಕೆ ಮಾಡಲು ಅನೇಕ ಕೈಗಾರಿಕೆಗಳು ಮುಂದೆ ಬರುತ್ತಿಲ್ಲ ಮತ್ತು ಅವು ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುತ್ತಿವೆ. ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಕೈಗಾರಿಕೆಗಳು ಅಗ್ಗದ ದರದಲ್ಲಿ ವಿದ್ಯುತ್ ಪಡೆಯುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮೆಸ್ಕಾಂ ನಿರ್ಲಕ್ಷ್ಯಕ್ಕೆ ಬಿಗ್ಗನಹಳ್ಳಿ ಗ್ರಾಮದ 6 ಎಕರೆ ಕಾಫಿತೋಟ ಭಸ್ಮ
ವಿದ್ಯುಚ್ಛಕ್ತಿಯು ಎಲ್ಲಾ ಕೈಗಾರಿಕೆಗಳಿಗೆ ಪ್ರಮುಖ ಕಚ್ಚಾ ವಸ್ತುವಾಗಿದೆ. ಕೈಗಾರಿಕೆಗಳು ಒಟ್ಟು ವೆಚ್ಚದ ಶೇ 15-20 ರಷ್ಟನ್ನು ವಿದ್ಯುತ್ಗಾಗಿ ಖರ್ಚು ಮಾಡುತ್ತಾರೆ. ಆದ್ದರಿಂದ, ಎಸ್ಕಾಂಗಳು ವಿದ್ಯುತ್ ದರವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ, ಅಸ್ತಿತ್ವದಲ್ಲಿರುವ ಕೈಗಾರಿಕೆಗಳು ಸಹ ಇತರ ರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ