
ಧಾರವಾಡ/ಹಾಸನ, ಜನವರಿ 09: ರೈತರಿಗೆ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಲಯದ ಆದೇಶದ ಅನ್ವಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ಕಚೇರಿ ಜಪ್ತಿ ಮಾಡಲಾಗಿದೆ. ರೈತರಿಗೆ ನೀಡಬೇಕಿದ್ದ 10 ಕೋಟಿ ರೂ. ಬಡ್ಡಿ ಹಣ ಪಾವತಿ ಮಾಡದ ಕಾರಣ, ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಷ್ಟ್ರೀಯ ಹೆದ್ದಾರಿ 63ಕ್ಕೆಂದು 2012ರಲ್ಲಿ ಗದಗ ನಗರದ ಹೊರಭಾಗದಲ್ಲಿನ ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಸ್ವಾಧೀನಪಡಿಸಿಕೊಂಡಿದ್ದ ಕೃಷಿಯೇತರ ಜಮೀನಿನ ಪ್ರತಿ ಚದರ್ ಮೀಟರ್‌ಗೆ 1,800 ರೂ. ದರವನ್ನು ನಿಗದಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ 20 ರೈತರು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಪ್ರತಿ ಚದರ್ ಮೀಟರ್‌ಗೆ 3,400 ರೂ. ನೀಡುವಂತೆ ಆದೇಶಿಸಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಆದೇಶವನ್ನು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರೂ ಕೋರ್ಟ್, ಡಿಸಿ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಕೋರ್ಟ್ ಆದೇಶದ ಅನ್ವಯ ಹೆದ್ದಾರಿ ಪ್ರಾಧಿಕಾರ ಪರಿಹಾರದ ಹಣವನ್ನು ನೀಡಿದ್ದರೂ 2012ರಿಂದ ಬಡ್ಡಿ ಹಣ ನೀಡಲು ಹಿಂದೇಟು ಹಾಕಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ರೈತರು ಮತ್ತೆ ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಹಳೆ ವಾಹನ ಹೊಂದಿರುವವರಿಗೆ ಶಾಕ್ ಕೊಟ್ಟ ಸಾರಿಗೆ ಸಚಿವರು; 15 ವರ್ಷ ಮೀರಿದ ವೆಹಿಕಲ್ಸ್ ಜಪ್ತಿ
ಜಪ್ತಿ ಮಾಡಲಾದ ಕಾರು
ಇತ್ತ ಹಾಸನದಲ್ಲೂ ಭೂ ಪರಿಹಾರ ನೀಡದ ಹಿನ್ನೆಲೆ ಹಿರಿಯ ಸಿವಿಲ್ ನ್ಯಾಯಾಧೀಶರ ಆದೇಶದಂತೆ ಜಿಲ್ಲಾಧಿಕಾರಿ ಅವರ ಕಾರು ಜಪ್ತಿ ಮಾಡಲಾಗಿದೆ. ಸುಮಾರು 20 ವರ್ಷಗಳ ಹಿಂದೆ ಯಗಚಿ ನಾಲೆಗಾಗಿ ಕಳೆದುಕೊಂಡಿದ್ದ ಭೂಮಿಗೆ 11 ಲಕ್ಷ 22 ಸಾವಿರ ಪರಿಹಾರದ ಮೊತ್ತ ಬಾಕಿ ಇರುವ ಕಾರಣ, ಸಂತ್ರಸ್ತರು ಕೋರ್ಟ್ ಮೆಟ್ಟಿಲೇರಿದ್ದರು. ಗುಂಟೆಗೆ 40 ಸಾವಿರದಂತೆ 10.5 ಗುಂಟೆಗೆ ಪರಿಹಾರ ನಿಗದಿಯಾಗಿತ್ತು. ಪರಿಹಾರ ನೀಡುವಂತೆ 2 ವರ್ಷದ ಹಿಂದೆಯೇ ಕೋರ್ಟ್ ಆದೇಶಿಸಿದ್ದರೂ ಹಣ ನೀಡದ ಹಿನ್ನೆಲೆ ಡಿಸಿ ಕಾರು ಜಪ್ತಿ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:22 pm, Fri, 9 January 26