ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಅಲರ್ಟ್ ಸಿಸ್ಟಂ; ರಿಲಾಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ
NHAI plans for highway safety system: ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಬರಬಹುದಾದ ರಸ್ತೆ ಅಪಾಯಗಳ ಬಗ್ಗೆ ಅಲರ್ಟ್ ಮೆಸೇಜ್ಗಳು ಅಥವಾ ಕರೆಗಳು ಬರಬಹುದು. ಇಂಥದ್ದೊಂದು ಅಲರ್ಟ್ ಸಿಸ್ಟಂ ಜಾರಿಗೆ ರಿಲಾಯನ್ಸ್ ಜಿಯೋ ಜೊತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿದೆ. ಸದ್ಯ ಜಿಯೋ ಬಳಕೆದಾರರಿಗೆ ಈ ಸಿಸ್ಟಂ ಇರುತ್ತದೆ. ಮುಂದಿನ ದಿನಗಳಲ್ಲಿ ಇತರ ಟೆಲಿಕಾಂ ಕಂಪನಿಗಳೊಂದಿಗೂ ಪ್ರಾಧಿಕಾರ ಒಪ್ಪಂದ ಮಾಡಿಕೊಳ್ಳಬಹುದು.

ನವದೆಹಲಿ, ಡಿಸೆಂಬರ್ 2: ದೇಶಾದ್ಯಂತ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಎದುರಾಗಬಹುದಾದ ವಿವಿಧ ಅಪಾಯಗಳ ಮುನ್ಸೂಚನೆ ನೀಡುವಂತಹ ಅಲರ್ಟ್ ಸಿಸ್ಟಂ (Highway alert system) ಅನ್ನು ಜಾರಿಗೆ ತರಲು ರಿಲಾಯನ್ಸ್ ಜಿಯೋ (Reliance Jio) ಸಂಸ್ಥೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI- National Highways Authority of India) ಎಂಒಯು ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆ ಪ್ರಕಾರ, ಮೊಬೈಲ್ ಮೂಲಕ ಈ ಅಲರ್ಟ್ ಮೆಸೇಜ್ಗಳು ಪ್ರಯಾಣಿಕರಿಗೆ ಮುಂಚಿತವಾಗಿ ಹೋಗುತ್ತವೆ.
ಹೆದ್ದಾರಿಗಳಲ್ಲಿ ಹೋಗುವಾಗ ಮುಂದೆ ಆಕ್ಸಿಡೆಂಟ್ ಝೋನ್ ಇದ್ದರೆ, ಅಥವಾ ಬೀಡಾಡಿ ದನಗಳ ಸಂಚಾರ ಹೆಚ್ಚಾಗಿದ್ದರೆ, ದಟ್ಟ ಮಂಜು ಕವಿದ ಪ್ರದೇಶವಿದ್ದರೆ, ಅಥವಾ ತುರ್ತು ತಿರುವು ಇದ್ದರೆ ಅಂಥ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮುಂಚಿತವಾಗಿ ಅಲರ್ಟ್ ಮೆಸೇಜ್ಗಳನ್ನು ಕಳುಹಿಸುವ ಉದ್ದೇಶ ಈ ಯೋಜನೆಯಲ್ಲಿದೆ.
ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್
ಮುನ್ನೆಚ್ಚರಿಕೆಯ ಸಂದೇಶಗಳನ್ನು ವಿವಿಧ ರೀತಿಯಲ್ಲಿ ಕಳುಹಿಸಲಾಗಬಹುದು. ಎಸ್ಸೆಮ್ಮೆಸ್ ಮೂಲಕ ಹೋಗಬಹುದು, ವಾಟ್ಸಾಪ್ ಮೂಲಕ ಹೋಗಬಹುದು. ಅಥವಾ ಹೈ ಪ್ರಯಾರಿಟಿ ಕಾಲ್ಗಳ ಮೂಲಕ ಅಲರ್ಟ್ ಕಳುಹಿಸಲಾಗಬಹುದು. ಈ ಮೆಸೇಜ್ಗಳನ್ನು ನೋಡಿ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸಾಧ್ಯವಾಗಬಹುದು.
ರಾಜಮಾರ್ಗ ಯಾತ್ರಾ ಮೊಬೈಲ್ ಆ್ಯಪ್, ಎಮರ್ಜೆನ್ಸಿ ಸಹಾಯವಾಣಿ 1022 ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ವಿವಿಧ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಕ್ರಮೇಣವಾಗಿ ಈ ಅಲರ್ಟ್ ಸಿಸ್ಟಂ ಅನ್ನು ಜೋಡಿಸಲಾಗುವ ಉದ್ದೇಶ ಇದೆ.
ಇದನ್ನೂ ಓದಿ: ಗಿಫ್ಟ್ ಡೀಡ್ ಮಾಡಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಾ? ಕೋರ್ಟ್ ನೀಡಿದ ಮಹತ್ವದ ತೀರ್ಪಿದು
ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಎಲ್ಲಾ ಜಿಯೊ ಬಳಕೆದಾರರ ಮೊಬೈಲ್ಗಳಲ್ಲಿ ಈ ಆಟೊಮೇಟೆಡ್ ಸಿಸ್ಟಂ ಕೆಲಸ ಮಾಡುತ್ತದೆ. ದೇಶಾದ್ಯಂತ ಇರುವ ಜಿಯೋದ 4ಜಿ ಮತ್ತು 5ಜಿ ನೆಟ್ವರ್ಕ್ಗಳು ಈ ಅಡ್ವಾನ್ಸ್ಡ್ ಸಿಸ್ಟಂ ಜಾರಿಗೆ ಸಹಾಯಕವಾಗಿವೆ. ಇದೇ ವೇಳೆ, ಎನ್ಎಚ್ಎಐ ಇತರ ಟೆಲಿಕಾಂ ಕಂಪನಿಗಳೊಂದಿಗೂ ಇದೇ ರೀತಿ ಒಪ್ಪಂದಕ್ಕೆ ಮುಂದಾಗಲಿದೆ. ಏರ್ಟೆಲ್ ಹಾಗೂ ಇತರ ಟೆಲಿಕಾಂ ಬಳಕೆದಾರರಿಗೂ ಈ ಸೇವೆ ಮುಂದಿನ ದಿನಗಳಲ್ಲಿ ಲಭ್ಯವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




