ಹುಬ್ಬಳ್ಳಿಯಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮ ಐತಿಹಾಸಿಕ ದಾಖಲೆ: ಧಾರವಾಡ ಜಿಲ್ಲೆ ಜನರಿಗೆ ಧನ್ಯವಾದ ಹೇಳಿದ ಜೋಶಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 12, 2023 | 8:39 PM

ಇಂದು (ಜ. 12) ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದು ಹೀಗೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮ ಐತಿಹಾಸಿಕ ದಾಖಲೆ: ಧಾರವಾಡ ಜಿಲ್ಲೆ ಜನರಿಗೆ ಧನ್ಯವಾದ ಹೇಳಿದ ಜೋಶಿ
ಸಚಿವ ಪ್ರಲ್ಹಾದ್ ಜೋಶಿ
Image Credit source: kannadaprabha.com
Follow us on

ಹುಬ್ಬಳ್ಳಿ: ಎಲ್ಲೆಲ್ಲೂ ಕೇಸರಿ. ಎಂಟು ಕಿಲೋ ಮೀಟರ್‌ ಉದ್ದಕ್ಕೂ ಜನ ಸಾಗರ. ದಶದಿಕ್ಕಲ್ಲೂ ಮೋದಿ ಮೋದಿ ಅನ್ನೋ ಘೋಷಣೆ. ಅಷ್ಟಕ್ಕೂ ಇಂದು (ಜ. 12) ಗಂಡುಮೆಟ್ಟಿದ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾ ಮೊಳಗಿತ್ತು ಎಂದು ಹೇಳಬಹುದು. ಜಿಲ್ಲೆಯ ರೈಲ್ವೆ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವಜನೋತ್ಸವ (National Youth Festival 2023) ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿಯಲ್ಲಿ ಪ್ರಧಾನಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇದೊಂದು ಐತಿಹಾಸಿಕ ದಾಖಲೆ. ಕಾರ್ಯಕ್ರಮದಲ್ಲಿ ಸಾಕಷ್ಟು ಯುವಕರು ಭಾಗಿಯಾಗಿದ್ದರು. ಎಲ್ಲಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಅಭಿನಂದಿಸುವೆ. ಜೊತೆಗೆ ಧಾರವಾಡ ಜಿಲ್ಲೆಯ ಜನರಿಗೆ ಧನ್ಯವಾದ. ರೋಡ್‌ಶೋ ವೇಳೆ ಭದ್ರತಾಲೋಪ ಬಗ್ಗೆ ಪರಿಶೀಲನೆ ನಡೆಸುತ್ತಾರೆ ಎಂದು ಹೇಳಿದರು.

ಪ್ರಧಾನಿಗಳ ಆಗಮನದಿಂದ ಯುವಕರಿಗೆ ಹುಮ್ಮಸ್ಸು ಬಂದಿದೆ: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಅತ್ಯಂತ ಜನಪ್ರಿಯ ನಾಯಕರು. ಕರ್ನಾಟಕದ ಜನ ಅವರನ್ನು ಪ್ರೀತಿಸುತ್ತಾರೆ. ಮೋದಿಯವರಿಗೂ ಕರ್ನಾಟಕದ ಬಗ್ಗೆ ಪ್ರೀತಿಯಿದೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿದೆ. ಪ್ರಧಾನಿಗಳ ಆಗಮನದಿಂದ ಯುವಕರಿಗೆ ಹುಮ್ಮಸ್ಸು ಬಂದಿದೆ. ಯುವಕರಿಗೆ ಸ್ಪೂರ್ತಿ ಕೊಡಲು ಮೋದಿಯವರು ಬಂದಿದ್ದರು. ಅವರ ಮಾತು ಬಹಳ ಅದ್ಭುತವಾಗಿತ್ತು. ಪ್ರಧಾನಿಗಳು ಬಂದಿದ್ದರಿಂದ ಯುವಜನೋತ್ಸವ ರಾಷ್ಟ್ರದಾದ್ಯಂತ ಪ್ರಖ್ಯಾತಿಯಾಗಿದೆ ಎಂದರು.

ಇದನ್ನೂ ಓದಿ: PM Modi Security: ಹೇಗಿರುತ್ತೆ ಪ್ರಧಾನಿ ಮೋದಿ ಭದ್ರತೆ? ರಾಜ್ಯ ಭೇಟಿ ವೇಳೆ ಕಾರನ್ನೂ ಕೊಂಡೊಯ್ಯಲಾಗುತ್ತದೆಯೇ?

ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ ರೋಡ್ ಶೋ 

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ನಿಲ್ದಾಣದವರೆಗೆ ರೋಡ್ ಶೋ ನಡೆಸಿದ ಮೋದಿ ಜನಾಕರ್ಷಣೆ ಮಾಡುವುದರಲ್ಲಿ ಭರ್ಜರಿಯಾಗಿಯೇ ಯಶಸ್ವಿಯಾಗಿದ್ದಾರೆ. ಸುಮಾರು ಎಂಟು ಕಿಲೋ ಮೀಟರ್ ನಡೆದ ರೋಡ್ ಶೋ‌ನಲ್ಲಿ ಮೂರು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಜನರು ಪಾಲ್ಗೊಂಡಿದ್ದರು. ಈ ಪೈಕಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ರಾಷ್ಟ್ರೀಯ ಯುವ ದಿನದಂದು ಯುವಕರನ್ನು ಸೆಳೆಯುವ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರೋಡ್‌ಶೋ ವೇಳೆ ಭದ್ರತಾ ಲೋಪ; ಯುವಕನನ್ನು ಸೆರೆಹಿಡಿಯಲು ಬಲೆ ಬೀಸಿದ ಪೊಲೀಸ್

ಜನವರಿ 19 ರಂದು ಕಲಬುರ್ಗಿ ಜಿಲ್ಲೆಗೆ ಪ್ರಧಾನಿ ಮೋದಿ‌ ಭೇಟಿ

ಇನ್ನು ಜನವರಿ 19 ರಂದು ಕಲಬುರ್ಗಿ ಜಿಲ್ಲೆಗೆ ಪ್ರಧಾನಿ ಮೋದಿ‌ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಲಂಬಾಣಿಗಳು, ಗೊಲ್ಲರು, ಕುರುಬರು ಸೇರಿದಂತೆ ವಿವಿಧ ಸಮುದಾಯಗಳಿಗೆ ವಾಸ ಸ್ಥಳದ ಹಕ್ಕು ಪತ್ರ ನೀಡುವ ಮೊದಲ ಹಂತದ ಕಾರ್ಯಕ್ರಮ ಇಂದು ನಡೆಯಿತು. 2000ಕ್ಕೂ ಅಧಿಕ ಪ್ರದೇಶಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ. ನಾಳೆ ಕಂದಾಯ ಸಚಿವ ಆರ್. ಅಶೋಕ್ ಕಾರ್ಯಕ್ರಮದ ಪೂರ್ವ ಸಿದ್ದತೆ ಪರಿಶೀಲನೆ ನಡೆಸಲಿದ್ದು, ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.