ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 12 ರಿಂದ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನ ಉತ್ಸವದ ಲೋಗೋ ಮತ್ತು ಮ್ಯಾಸ್ಕಟ್ ಅನ್ನು ಇಂದು ಬಿಡುಗಡೆ ಮಾಡಿದರು. ಈ ವರ್ಚುವಲ್ ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಮತ್ತು ಖ್ಯಾತ ನಟಿ ತಾರಾ ಅನೂರಾಧ ಭಾಗವಹಿಸಿದ್ದರು.
ರಾಜ್ಯದಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟ ಆಯೋಜನೆ ಹಾಗೂ ಇದೀಗ ಈ ವರ್ಷ ಯುವಜನ ಉತ್ಸವ ಆಯೋಜನೆಗೆ ಅವಕಾಶ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. ಹಾಗೂ ಯುವಜನ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಯುವ ಜನಪ್ರತಿನಿಧಿಗಳ ಗೋಷ್ಠಿ:
ಈ ಸಂದರ್ಭದಲ್ಲಿ ಯುವಜನ ಉತ್ಸವ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಇದಲ್ಲದೆ ಯುವಜನ ಮೇಳದಲ್ಲಿ ಯುವ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸುವ ಯುವಜನರಿಗೆ ರೈಲ್ವೆ ವಿಶೇಷ ಬೋಗಿ ಅಳವಡಿಸುವ ಕುರಿತು, ರೈಲ್ವೆ ಮಂಡಳಿಯು ಒಪ್ಪಿಗೆ ನೀಡಿತು.
ಜನರ ಭಾಗೀದಾರಿಕೆಗೆ ಕೇಂದ್ರ ಸಚಿವರ ಮೆಚ್ಚುಗೆ
ಸ್ವಾಮಿ ವಿವೇಕಾನಂದರ ಜನ್ಮಜಯಂತಿಯ ಪ್ರಯುಕ್ತ ಜನವರಿ 12ರಿಂದ 16ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಲಾಂಛನವನ್ನು ವರ್ಚುವಲ್ ಮೂಲಕ ಕೇಂದ್ರ ಯುವ ಸಬಲೀಕರಣ ಸಚಿವರಾದ ಶ್ರೀ @ianuragthakur ಹಾಗೂ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರೊಂದಿಗೆ ಇಂದು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಯಿತು#NationalYouthFestival pic.twitter.com/zoi84puWrr
— Pralhad Joshi (@JoshiPralhad) January 7, 2023
ಉತ್ಸವದ ಲೋಗೋ ಮತ್ತು ಮ್ಯಾಸ್ಕಟ್ ವಿನ್ಯಾಸವನ್ನು ಸ್ಪರ್ಧೆ ಆಯೋಜಿಸುವ ಮೂಲಕ ರೂಪಿಸಿದ ಕುರಿತು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು. ಒಡಿಶಾದ ಬನ್ಸಿಲಾಲ್ ಕೇತ್ಕಿ ರೂಪಿಸಿದ ಲೋಗೋವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ 50 ಸಾವಿರ ರೂ. ಗಳ ಬಹುಮಾನ ದೊರೆಯಲಿದೆ. ಈ ಲೋಗೋ ಭಾರತದ ರಾಷ್ಟ್ರೀಯ ಪುಷ್ಪ ತಾವರೆಯಿಂದ ಪ್ರೇರೇಪಿತವಾಗಿದ್ದು, ರಾಷ್ಟ್ರೀಯತೆ, ನಿಸ್ವಾರ್ಥ ಸೇವೆ ಮತ್ತು ವೈವಿಧ್ಯತೆಯ ನಡುವೆಯೂ ಇರುವ ಏಕತೆ ಹಾಗೂ ಸಹಕಾರವನ್ನು ಪ್ರತಿನಿಧಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ, ವಿದೇಶಾಂಗ ವ್ಯವಹಾರದಲ್ಲಿ ಹಾಗೂ ಸೇನಾಬಲದಲ್ಲಿ ಭಾರತದ ಉನ್ನತಿಯನ್ನು ಬಿಂಬಿಸುವ ಜೊತೆಗೆ, ಜಿ20 ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಸಹ ಅಭಿವ್ಯಕ್ತಪಡಿಸುತ್ತದೆ.
‘ಚಂಪಿ ಚಿಕ್ಕ’ ಮ್ಯಾಸ್ಕಟ್
ಅಂತೆಯೇ ಬೆಂಗಳೂರಿನ ಇನ್ಬಂ ಅವರು ರೂಪಿಸಿದ ಚಂಪಿ ಚಿಕ್ಕ ಮ್ಯಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ 50 ಸಾವಿರ ರೂ. ಗಳ ಬಹುಮಾನ ದೊರೆಯಲಿದೆ. ಇದು ಆನೆಯ ವಿನ್ಯಾಸವನ್ನು ಹೊಂದಿದ್ದು, ಕರ್ನಾಟದಲ್ಲಿ ಅತಿ ಹೆಚ್ಚಿರುವ ಆನೆಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ, ವಿಶ್ವ ಶಾಂತಿಯ ಜೊತೆಗೆ ಕ್ರೀಡೆ, ಸ್ಟಾರ್ಟಪ್, ನಾವಿನ್ಯತೆ, ಶಿಕ್ಷಣ ಸೇರಿಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿರುವ ಯುವ ಮತ್ತು ಆಧುನಿಕ ಭಾರತವನ್ನು ಬಿಂಬಿಸುತ್ತದೆ.
ವಿಕಸಿತ್ ಯುವ- ವಿಕಸಿತ್ ಭಾರತ್
‘ವಿಕಸಿತ್ ಯುವ- ವಿಕಸಿತ್ ಭಾರತ್’ ಎಂಬ ವಿಷಯದಡಿ ನಡೆಯುತ್ತಿರುವ ಈ ಯುವಜನ ಉತ್ಸವದಲ್ಲಿ ದೇಶದ ಎಲ್ಲೆಡೆಯಿಂದ ಸುಮಾರು ೭೫೦೦ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಜನವರಿ ೧೨ರಂದು ಹುಬ್ಬಳ್ಳಿಯಲ್ಲಿ ಈ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಮೀತಾ ಆರ್. ಲೋಚನ್, ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Sat, 7 January 23