ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಪ್ರಧಾನಿ ಮಧ್ಯ ಪ್ರವೇಶ ಅಗತ್ಯವಿಲ್ಲ -ಸಚಿವ ಪ್ರಲ್ಹಾದ್ ಜೋಶಿ
Maharashtra Karnataka Border Dispute: ನಾವು-ಚೀನಾ ಪಾಕಿಸ್ತಾನ ಜೊತೆ ಬಡಿದಾಡಬೇಕು ವಿನಃ ಅದು ಬಿಟ್ಟು ಕರ್ನಾಟಕ-ಮಹಾರಾಷ್ಟ್ರ ಅಂತ ಬಡಿದಾಡುವುದು ಅತ್ಯಂತ ದೌರ್ಭಾಗ್ಯದ ಸಂಗತಿ ಎಂದು ಸಚಿವ ಪ್ರಲ್ಹಾದ್ ಜೋಶಿ ಮಾರ್ಮಿಕವಾಗಿ ಹೇಳಿದರು.
ಧಾರವಾಡ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ (Maharashtra Karnataka Border Dispute) ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೇರಿದಂತೆ ಯಾರೂ ಮಧ್ಯೆ ಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ ಜೋಶಿ (Pralhad Joshi) ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, “ಯಾರ ಮಧ್ಯ ಪ್ರವೇಶದ ಅಗತ್ಯ ಇಲ್ಲ. ಏಕೆಂದರೆ ಈ ವಿವಾದ ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು, ಅಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ಆದ್ದರಿಂದ ಈ ಕುರಿತು ಅನಗತ್ಯವಾದ ಗೊಂದಲ ಬೇಡ, ಸುಪ್ರೀಂ ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುತ್ತದೆ. ಅದರಲ್ಲಿ ಅನುಮಾನ ಬೇಡ ಎಂದ ಅವರು ಕರ್ನಾಟಕದ ಒಂದಿಂಚು ಭೂಮಿ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಮಹಾರಾಷ್ಟ್ರದ ಒಂದಿಂಚು ಭೂಮಿ ನಮಗೆ ಬರೋದಿಲ್ಲ’’ ಎಂದು ಅವರು ತಿಳಿಸಿದರು.
ಗಡಿ ಗಲಾಟೆಯ ಹಿನ್ನೆಲೆಯಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದ್ದು, ಆ ವಿಚಾರ ಈಗಾಗಲೇ ಇತ್ಯರ್ಥವಾಗಿರುವಂಥದ್ದು. ಈಗ ಅದನ್ನು ಯಾರೂ ಪ್ರಸ್ತಾಪ ಮಾಡುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ನಲ್ಲಿ ನುರಿತ ಕಾನೂನು ತಜ್ಞರಿದ್ದಾರೆ. ಗಡಿ ವಿಚಾರಗಳ ಬಗ್ಗೆ ಅವರು ಸಮರ್ಥವಾಗಿ ವಾದ ಮಾಡುತ್ತಾರೆ ಎಂದರು.
“ಈಗಾಗಲೇ ಮಹಾರಾಷ್ಟ್ರದವರು ಹೇಳಿಕೆ ಕೊಟ್ಟಿದ್ದಾರೆ ಎಂದು ನಾವೂ ಕೂಡ ಅನಗತ್ಯ ಹೇಳಿಕೆಗಳನ್ನು ಕೊಡುವುದು ಬೇಡ ಎಂದಿರುವ ಅವರು, ಆ ಕುರಿತಂತೆ ಎಲ್ಲ ಪಕ್ಷದ ನಾಯಕರಲ್ಲಿ ನಾವು ಆಗ್ರಹ ಮಾಡುತ್ತೇವೆ. ನಮ್ಮ ಭಾರತೀಯ ಜನತಾ ಪಾರ್ಟಿಯ ನಾಯಕರಿಗೂ ನಾವು ಮನವಿ ಮಾಡುತ್ತೇವೆ. ಪ್ರಚೋದನಾತ್ಮಕ ಹೇಳಿಕೆಯಿಂದ ಏನೂ ಆಗುವುದಿಲ್ಲ, ಅದು ಸರಿಯಲ್ಲ. ಈಗ ಕನ್ನಡ-ಮರಾಠಿಗಳು ನೆಮ್ಮದಿಯಿಂದ ಇದ್ದಾರೆ. ಆದ ಕಾರಣ, ನಮ್ಮ ರಾಜ್ಯದಲ್ಲಿ ಮರಾಠಿಗರಿದ್ದರೂ ನೆಮ್ಮದಿಯಿಂದ ಇದ್ದಾರೆ” ಎಂದು ಹೇಳಿದರು.
“ನಾವು-ಚೀನಾ ಪಾಕಿಸ್ತಾನ ಜೊತೆ ಬಡಿದಾಡಬೇಕು ವಿನಃ ಅದು ಬಿಟ್ಟು ಕರ್ನಾಟಕ-ಮಹಾರಾಷ್ಟ್ರ ಅಂತ ಬಡಿದಾಡುವುದು ಅತ್ಯಂತ ದೌರ್ಭಾಗ್ಯದ ಸಂಗತಿ ಎಂದು ಅವರು ಮಾರ್ಮಿಕವಾಗಿ ಹೇಳಿದರು. ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು ಮಹಾರಾಷ್ಟ್ರ ಸುಪ್ರೀಂಕೋರ್ಟ್‌ಗೆ ಹೋಗಬಾರದಿತ್ತು” ಎಂದೂ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
Also Read:
ಮಹಾರಾಷ್ಟ್ರ ಗಡಿ ವಿವಾದ : ಸಿಎಂ ಬೊಮ್ಮಾಯಿ ನೇತೃತ್ವದ ಸಭೆ ಅಂತ್ಯ, ಸರ್ವ ಪಕ್ಷ ಸಭೆ ಬಳಿಕ ಅಂತಿಮ ನಿರ್ಧಾರ
Also Read:
ಕರ್ನಾಟಕ ನಮಗೆ ಪಾಠ ಮಾಡುವ ಅಗತ್ಯವಿಲ್ಲ: ಬೊಮ್ಮಾಯಿ ಸರ್ಕಾರದ ವಿರುದ್ಧ ಮಹಾ ಸಿಎಂ ಏಕನಾಥ್ ಶಿಂಧೆ ವಾಗ್ದಾಳಿ