ಹುಬ್ಬಳ್ಳಿ: ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ (Rani Chennamma) ಹೆಸರಿಡಲು ವಿರೋಧ ವ್ಯಕವಾಗಿದ್ದು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಚೇರಿ ಎದುರು AIMIM ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಅಲ್ಲಿಗೆ ಮತ್ತೆ ಈದ್ಗಾ ಮೈದಾನ ವಿವಾದ ಮುನ್ನೆಲೆಗೆ ಬಂದಿದೆ. ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ್ ನೇತೃತ್ವದಲ್ಲಿ ಧರಣಿ ಮಾಡಿದ್ದು, ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹೀಗಿರುವಾಗ ಮೈದಾನದ ಹೆಸರು ಬದಲಾಯಿಸುವುದು ಸರಿಯಲ್ಲ. ರಾಜಕೀಯ ದುರುದ್ದೇಶದಿಂದ ಹೆಸರು ಬದಲಿಸುತ್ತಿದ್ದಾರೆಂದು ಆರೋಪಿಸಿದರು. ಮರುನಾಮಕರಣ ಪ್ರಕ್ರಿಯೆ ಕೈಬಿಡುವಂತೆ ಪ್ರತಿಭಟನಾಕಾರರ ಆಗ್ರಹಿಸಿದರು. ಬಳಿಕ ಮೇಯರ್ ಈರೇಶ್ ಅಂಚಟಗೇರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈದ್ಗಾ ಮೈದಾನವನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ಇಡಲು ಮುಂದಾಗಿದ್ದು, ಇದಕ್ಕೆ ಯಾರಾದರೂ ತಕರಾರು ಇದ್ದರೆ ಮೂವತ್ತು ದಿನಗಳಲ್ಲಿ ತಕರಾರರು ಅರ್ಜಿ ಸಲ್ಲಿಸಲು ಹುಬ್ಬಳ್ಳಿ-ಧಾರವಾಡ ಪಾಲಿಕೆ ಇತ್ತೀಚೆಗೆ ಅರ್ಜಿ ಕೂಡ ಆಹ್ವಾನಿಸಿತ್ತು.
ಇದನ್ನೂ ಓದಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ ಹೈಕೋರ್ಟ್
ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ, ಲಾಠಿ ಚಾರ್ಜ್, ಗೋಲಿವಾರ್ಗಳಂತಹ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿತ್ತು. ಇನ್ನು ಹೈಕೋರ್ಟ್ ಆದೇಶದ ವಿರುದ್ಧ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ಅದು ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆ ಈದ್ಗಾ ಮೈದಾನದಲ್ಲಿ ವರ್ಷಕ್ಕೆ 2 ಬಾರಿ ಮಾತ್ರ ನಮಾಜ್ ಮಾಡಲು ಮುಸ್ಲಿಂ ಬಾಂಧವರಿಗೆ ಅವಕಾಶ ಇದ್ದು, ಉಳಿದಂತೆ ಈ ಮೈದಾನ ಪಾಲಿಕೆಯ ಸ್ವತ್ತಾಗಿರಲಿದೆ.
ಈದ್ಗಾ ಮೈದಾನದಲ್ಲಿ ಭಗವಾ ಧ್ವಜ ಹಾರಾಟ ಮಾಡಲಾಗುತ್ತಿರುವ ರೀತಿ ಎಡಿಟ್ ಮಾಡಿರುವ ವಿಡಿಯೋಗಳು ಸಹ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವಿಡಿಯೋ ಎಡಿಟ್ ಮಾಡಿ ಕಿತ್ತೂರ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಿದ್ದಾರೆಂದು ಸಂದೇಶ ನೀಡುವ ವಿಡಿಯೋ ಅದಾಗಿತ್ತು. ಟಿಪ್ಪು ಜಯಂತಿಗೆ ಅವಕಾಶಕ್ಕೆ ಮನವಿ ಮಾಡಿದ ಬೆನ್ನಲ್ಲೆ ಇಂತಹದೊಂದು ವಿಡಿಯೋ ವೈರಲ್ ಆಗಿದೆ ಎನ್ನಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.