‘ನಮ್ಮ ಜಾತಿ ಹಿಂದೂ ಪಂಚಮಸಾಲಿ. ಆದರೆ ಆರಾಧಿಸುವುದು ಏಸುವನ್ನು’- ಗಂಗಮ್ಮ ಹುಲ್ಲೂರ ಹೇಳಿಕೆ; ಏನಿದು ಪ್ರಕರಣ?
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪ್ಯಾಸ್ಟರ್ ಸೋಮು ಅವರಾದಿ ಬಂಧನದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಸೋದರಿ ಗಂಗಮ್ಮ ಹುಲ್ಲೂರ ಹೇಳಿಕೆ ನೀಡಿದ್ದಾರೆ. ಏನಿದು ಪ್ರಕರಣ? ಸಂಪೂರ್ಣ ಮಾಹಿತಿ ಇಲ್ಲಿದೆ.
ಧಾರವಾಡ: ‘ನಮ್ಮ ಜಾತಿ ಹಿಂದೂ ಪಂಚಮಸಾಲಿ. ಆದರೆ ನಾವು ಆರಾಧಿಸುವುದು ಮಾತ್ರ ಯೇಸುವನ್ನು. ಮುಂದೆಯೂ ಏಸುವನ್ನೇ ಆರಾಧಿಸುತ್ತೇವೆ’ ಎಂದು ಗಂಗಮ್ಮ ಹುಲ್ಲೂರ ಹೇಳಿಕೆ ನೀಡಿದ್ದಾರೆ. ಅವರು ಹುಬ್ಬಳ್ಳಿ ಭೈರಿದೇವರಕೊಪ್ಪ ಮತಾಂತರ ಪ್ರಕರಣದಲ್ಲಿ ಬಂಧಿತ ಫಾಸ್ಟರ್ ಸೋಮು ಅವರಾದಿಯವರ ಸೋದರಿಯಾಗಿದ್ದಾರೆ. ಧಾರವಾಡದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಹಾಗೂ ವೀರಶೈವ ಲಿಂಗಾಯತ ಮಹಸಭಾದ ಅಧ್ಯಕ್ಷರಾಗಿರುವ ಗುರುರಾಜ ಹುಣಸೀಮರದ್, ಸೋಮು ಅವರಾದಿ ಬೆಂಬಲಾರ್ಥವಾಗಿ ಸುದ್ದಿಗೋಷ್ಠಿ ಕರೆದಿದ್ದರು. ಅದರಲ್ಲಿ ಮಾತನಾಡಿದ ಗಂಗಮ್ಮ, ನಮ್ಮ ಜಾತಿ ಹಿಂದೂ ಪಂಚಮಸಾಲಿಯಾಗಿದ್ದು, ನಾವು ಪಂಚಮಸಾಲಿ ಲಿಂಗಾಯತರು. ಆದರೂ ಯೇಸುವನ್ನೇ ಆರಾಧಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ದೇವರ ಆರಾಧಿಸುವ ಹಕ್ಕು ಇಲ್ಲವೇ?’’ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಗಂಗಮ್ಮ, ‘‘ನಮ್ಮ ಪ್ರಾರ್ಥನಾ ಸಭೆಗೆ ಬನ್ನಿ ಎಂದು ನಾವು ಯಾರನ್ನೂ ಕರೆದಿಲ್ಲ. ಮನೆ ಮನೆಗೆ ಹೋಗಿ ಮತಾಂತರವನ್ನೂ ಮಾಡಿಲ್ಲ. ನಾವು ಮುಂದೆಯೂ ಪಂಚಮಸಾಲಿ ಲಿಂಗಾಯತರಾಗಿಯೇ ಇರುತ್ತೇವೆ. ಆರಾಧಿಸುವ ಏಕೈಕ ದೇವರು ಮಾತ್ರ ಏಸು. ನಮ್ಮ ಜೀವನ ಬದಲಾವಣೆ ಮಾಡಿದ ದೇವರು ಏಸು. ಆದ್ದರಿಂದ ಸೋದರ ಸೋಮು ಮತ್ತು ನಾವು ಏಸುವನ್ನೇ ಆರಾಧಿಸುತ್ತೇವೆ. ನಮ್ಮ ಎಲ್ಲ ಕ್ರಿಶ್ಚಿಯನ್ ಸಭೆಗಳಿಗೆ ಭದ್ರತೆ ಬೇಕು. ನಮಗೆ ಸರ್ಕಾರದಿಂದ ಭದ್ರತೆ ಬೇಕು’’ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ‘‘ನಾವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿಲ್ಲ. ಆದರೆ ಮಾನಸಿಕವಾಗಿ ಮತಾಂತರಗೊಂಡಿದ್ದೇವೆ’’ ಎಂದೂ ಹೇಳಿದ್ದಾರೆ.
ಪ್ರಕರಣವೇನು? ಮತಾಂತರ ನಡೆಸಲಾಗುತ್ತಿದೆ ಎಂಬ ಆರೋಪಿಸಿ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯ ತಾತ್ಕಾಲಿಕ ಚರ್ಚ್‌ಗೆ ಬಲವಂತವಾಗಿ ಪ್ರವೇಶಿಸಿ ಪ್ರತಿಭಟನೆಯ ರೂಪದಲ್ಲಿ ಭಜನೆ ಮಾಡಿದ್ದರು. ನಂತರ ಸ್ಥಳೀಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಪಾದ್ರಿ ಸೋಮು ಅವರದ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಚರ್ಚ್ ಸದಸ್ಯರು ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪರಸ್ಪರ ಆರೋಪಿಸಿಕೊಂಡಿದ್ದರು. ಇದೀಗ ಪ್ರಕರಣದ ಕುರಿತಂತೆ ಪಾದ್ರಿ ಸೋಮು ಅವರಾದಿಯವರ ಸೋದರಿ ಗಂಗಮ್ಮ ಹೇಳಿಕೆ ನೀಡಿದ್ದಾರೆ.
ತುಮಕೂರು ಬಂದ್ಗೆ ಸಹಕಾರ ಕೋರಿದ ಬಿಜೆಪಿ ಶಾಸಕ ಜ್ಯೋತಿ ಗಣೇಶ್: ತುಮಕೂರು: ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್ ಹೇಳಿಕೆ ನೀಡಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘‘ನಾಳೆ ತುಮಕೂರು ನಗರ ಬಂದ್ ಗೆ ಎಲ್ಲರೂ ಸಹಕಾರ ಕೊಡಬೇಕು. ಇಡೀ ವಿಶ್ವದಲ್ಲಿ ಹಿಂದುಗಳಿಗೆ ಮುಕ್ತವಾಗಿರೋದು ಭಾರತ ದೇಶ ಮಾತ್ರ. ಇಲ್ಲೂ ನಮಗೆ ಭದ್ರತೆ ಇಲ್ಲ ಅಂದರೆ ನಾವು ಎಲ್ಲಿ ಹೋಗಬೇಕು. ಹೀಗೆ ಆದರೆ ಹಿಂದುಗಳನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕಾಗುತ್ತದೆ. ಬಾಂಗ್ಲಾದೇಶ, ಅಪ್ಘಾನಿಸ್ತಾನ್, ಪಾಕಿಸ್ತಾನದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಅನ್ನೋದು ನಾವೆಲ್ಲ ನೋಡಬೇಕು. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಬಂದ್ ಆಚರಣೆ ಮಾಡಿ ಘಟನೆಯನ್ನು ಖಂಡಿಸಬೇಕು. ಜಿಲ್ಲಾ ಬಿಜೆಪಿ ಕೂಡ ಬಂದ್ ಗೆ ಬೆಂಬಲ ಕೊಡುತ್ತದೆ’’ ಎಂದು ಜ್ಯೋತಿ ಗಣೇಶ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
‘ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ; ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ’: ಸಚಿವ ಆರ್.ಅಶೋಕ್
Tesla: ಎಲೆಕ್ಟ್ರಿಕ್ ವಾಹನಗಳ ಆಮದು ಸುಂಕ ಇಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟೆಸ್ಲಾ ಒತ್ತಾಯ