Tesla: ಎಲೆಕ್ಟ್ರಿಕ್ ವಾಹನಗಳ ಆಮದು ಸುಂಕ ಇಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟೆಸ್ಲಾ ಒತ್ತಾಯ
ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಬೇಕು ಎಂದು ಟೆಸ್ಲಾದಿಂದ ಪ್ರಧಾನಮಂತ್ರಿ ಕಾರ್ಯಾಲಯವನ್ನು ಒತ್ತಾಯಿಸಲಾಗಿದೆ.
ಭಾರತದ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಆಮದು ತೆರಿಗೆಯನ್ನು ಕಡಿತಗೊಳಿಸುವಂತೆ ಟೆಸ್ಲಾ ಇಂಕ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಗೆ ಒತ್ತಾಯಿಸಿದೆ ಎಂದು ವಿವಿಧ ಮೂಲಗಳು ತಿಳಿಸಿರುವುದಾಗಿ ಪ್ರಮುಖ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಇದಕ್ಕೆ ಕೆಲವು ಭಾರತೀಯ ವಾಹನ ತಯಾರಕರ ಆಕ್ಷೇಪಣೆಗಳನ್ನು ಎದುರಿಸುತ್ತಿದೆ. ಟೆಸ್ಲಾ ಈ ವರ್ಷ ಭಾರತದಲ್ಲಿ ಆಮದು ಮಾಡಿದ ಕಾರುಗಳನ್ನು ಮಾರಾಟ ಮಾಡಲು ಬಯಸಿದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಭಾರತದಲ್ಲಿ ತೆರಿಗೆಗಳು ಪ್ರಪಂಚದಲ್ಲಿಯೇ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ಕಾರುಗಳ ಆಮದು ಮೇಲಿನ ಸುಂಕ ಕಡಿತ ಮಾಡುವಂತೆ ಟೆಸ್ಲಾ ಮನವಿ ಮಾಡಿದೆ ಎಂದು ಜುಲೈನಲ್ಲಿ ಮೊದಲ ಬಾರಿಗೆ ವರದಿ ಆಗಿತ್ತು. ಇದಕ್ಕೆ ಹಲವಾರು ಸ್ಥಳೀಯ ಕಾರು ತಯಾರಕರಿಂದ ಆಕ್ಷೇಪ ವ್ಯಕ್ತ ಆಗುವಂತೆ ಆಯಿತು. ಅಂತಹ ಕ್ರಮವು ದೇಶೀಯ ಉತ್ಪಾದನೆಯಲ್ಲಿ ಹೂಡಿಕೆಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.
ಟೆಸ್ಲಾ ಕಾರ್ಯನಿರ್ವಾಹಕರು ಸೇರಿ ಭಾರತದ ನೀತಿ ಮುಖ್ಯಸ್ಥ ಮನುಜ್ ಖುರಾನಾ, ಕಳೆದ ತಿಂಗಳು ಮುಚ್ಚಿದ ಬಾಗಿಲಿನ ಸಭೆಯಲ್ಲಿ ಕಂಪೆನಿಯ ಬೇಡಿಕೆಗಳನ್ನು ಮೋದಿ ಸರ್ಕಾರದ ಅಧಿಕಾರಿಗಳ ಬಳಿಗೆ ಒಯ್ದರು. ತೆರಿಗೆಗಳು ತುಂಬಾ ಹೆಚ್ಚಿವೆ ಎಂದು ವಾದಿಸಿದರು, ಎಂದು ಈ ಚರ್ಚೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟೆಸ್ಲಾ ಕಡೆಯಿಂದ ಮಾತನಾಡಿ, ಭಾರತದ ಸುಂಕ ರಚನೆಯು ದೇಶದಲ್ಲಿ ತನ್ನ ವ್ಯವಹಾರವನ್ನು “ಕಾರ್ಯಸಾಧುವಾದ ರೀತಿಯಾಗಿ” ಮಾಡುವುದಿಲ್ಲ ಎಂದು ಹೇಳಿದ್ದಾರೆ. ಭಾರತವು 40,000 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ 60ರಷ್ಟು ಆಮದು ಸುಂಕವನ್ನು ವಿಧಿಸುತ್ತದೆ. ಮತ್ತು 40,000 ಡಾಲರ್ಗಿಂತ ಹೆಚ್ಚಿನ ಬೆಲೆಯ ಮೇಲೆ ಶೇ 100ರಷ್ಟು ಸುಂಕವನ್ನು ವಿಧಿಸುತ್ತದೆ. ಈ ದರದಲ್ಲಿ ಟೆಸ್ಲಾ ಕಾರುಗಳು ಖರೀದಿದಾರರಿಗೆ ತುಂಬಾ ದುಬಾರಿಯಾಗಬಹುದು ಮತ್ತು ಅವುಗಳ ಮಾರಾಟವನ್ನು ಮಿತಿಗೊಳಿಸಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.
ಮೋದಿ ಜತೆಗಿನ ಸಭೆಗೆ ಕೋರಿಕೆ ಟೆಸ್ಲಾ ಪ್ರತ್ಯೇಕವಾಗಿ ತನ್ನ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಮತ್ತು ಮೋದಿ ಮಧ್ಯೆ ಸಭೆಗಾಗಿ ಕೋರಿಕೆಯನ್ನು ಕೂಡ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ಅವರ ಕಚೇರಿ ಮತ್ತು ಟೆಸ್ಲಾ ಹಾಗೂ ಅದರ ಕಾರ್ಯನಿರ್ವಾಹಕ ಖುರಾನಾ ಅವರು ಕೋರಿಕೆಗೆ ಪ್ರತಿಕ್ರಿಯಿಸಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಕಾರ್ಯಾಲಯದಿಂದ ನಿರ್ದಿಷ್ಟವಾಗಿ ಟೆಸ್ಲಾಗೆ ಏನು ಹೇಳಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೂಲಗಳು ತಿಳಿಸಿರುವಂತೆ, ಸರ್ಕಾರಿ ಅಧಿಕಾರಿಗಳ ಅಭಿಪ್ರಾಯವು ಅಮೆರಿಕ ವಾಹನ ತಯಾರಕರ ಬೇಡಿಕೆಗಳ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಕೆಲವು ಅಧಿಕಾರಿಗಳು ಹೇಳುವಂತೆ, ಯಾವುದೇ ಆಮದು ತೆರಿಗೆ ವಿನಾಯಿತಿಗಳನ್ನು ಸರ್ಕಾರ ಪರಿಗಣಿಸುವ ಮೊದಲು ಕಂಪೆನಿಯು ಸ್ಥಳೀಯ ಉತ್ಪಾದನೆಗೆ ಬದ್ಧರಾಗಬೇಕೆಂದು ಬಯಸುತ್ತಾರೆ.
ಸ್ಥಳೀಯ ವಾಹನ ಉದ್ಯಮದ ಮೇಲೆ ಪರಿಣಾಮ ಬೀರುವ ಬಗ್ಗೆ ಕೂಡ ಸರ್ಕಾರ ಆಲೋಚನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಕಂಪೆನಿಗಳಾದ ಟಾಟಾ ಮೋಟಾರ್ಸ್ (TAMO.NS)ನಂತಹದ್ದು ಸ್ಥಳೀಯವಾಗಿ ಎಲೆಕ್ಟ್ರಿಕ್ ವಾಹನ (EV) ಉತ್ಪಾದನೆಯನ್ನು ಹೆಚ್ಚಿಸಲು TPG ಸೇರಿದಂತೆ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಸಂಗ್ರಹಿಸಿದೆ. ಟೆಸ್ಲಾಗೆ ರಿಯಾಯಿತಿಗಳನ್ನು ನೀಡುವುದರಿಂದ ಭಾರತದ ದೇಶೀಯ EV ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಗಳಿಗೆ ವಿರುದ್ಧವಾಗುತ್ತದೆ ಎನ್ನಲಾಗಿದೆ. ಸರ್ಕಾರದ ಆಲೋಚನೆಯ ಬಗ್ಗೆ ಗೊತ್ತಿರುವ ಮೂಲಗಳ ಪ್ರಕಾರ, “ಟೆಸ್ಲಾ ಕಂಪೆನಿಯೊಂದೇ ಎಲೆಕ್ಟ್ರಿಕ್ ವಾಹನ ತಯಾರಕ ಆಗಿದ್ದರೆ ಸುಂಕ ಕಡಿಮೆ ಮಾಡುಬಹುದಾಗಿತ್ತು. ಆದರೆ ಬೇರೆ ಕಂಪೆನಿಗಳು ಸಹ ಇವೆ,” ಎನ್ನಲಾಗಿದೆ.
ಆಮದು ವಾಹನಗಳ ಜತೆಗೆ ಪ್ರಯೋಗ ಟೆಸ್ಲಾ ಭಾರತದಲ್ಲಿ ಮೇಡ್ ಇನ್ ಚೀನಾ ಕಾರುಗಳನ್ನು ಮಾರಾಟ ಮಾಡಬಾರದು ಮತ್ತು ಅದರ ಬದಲಿಗೆ ಸ್ಥಳೀಯವಾಗಿ ತಯಾರಿಸಬೇಕು ಎಂದು ಈ ತಿಂಗಳು ಸಾರಿಗೆ ಸಚಿವರು ಹೇಳಿದ್ದರು. ಆದರೆ ಟೆಸ್ಲಾ ಮೊದಲು ಆಮದು ಮೂಲಕ ಪ್ರಯೋಗ ನಡೆಸಲು ಬಯಸಿದೆ ಎಂದಿದೆ. ಮಸ್ಕ್ ಜುಲೈನಲ್ಲಿ ಟ್ವಿಟ್ಟರ್ನಲ್ಲಿ, “ಟೆಸ್ಲಾ ಆಮದು ಮಾಡಿದ ವಾಹನಗಳಲ್ಲಿ ಯಶಸ್ವಿಯಾಗಲು ಸಾಧ್ಯವಾದರೆ ಭಾರತದಲ್ಲಿ ಕಾರ್ಖಾನೆ ತೆರೆಯುವ ಸಾಧ್ಯತೆ ಇದೆ,” ಎಂದು ಹೇಳಿದ್ದರು. ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳಿಗೆ ಭಾರತೀಯ ಮಾರುಕಟ್ಟೆಯು ಇನ್ನೂ ಬಾಲ್ಯಾವಸ್ಥೆಯಲ್ಲಿದೆ ಮತ್ತು ಮೂಲಸೌಕರ್ಯ ವಿರಳವಾಗಿದೆ. ಕಳೆದ ವರ್ಷ ಭಾರತದಲ್ಲಿ ಮಾರಾಟವಾದ 2.4 ಮಿಲಿಯನ್ ಕಾರುಗಳಲ್ಲಿ ಕೇವಲ 5,000 ಮಾತ್ರ ಎಲೆಕ್ಟ್ರಿಕ್ ವಾಹನಗಳು.
ಟೆಸ್ಲಾ ಭಾರತದ ಪ್ರವೇಶಕ್ಕೆ ಹಾದಿ ಸುಗಮಗೊಳಿಸುವುದಕ್ಕಾಗಿ ಸೀಮಿತ ಅವಧಿಗೆ ಸುಂಕವನ್ನು ಕಡಿತಗೊಳಿಸುವುದರಿಂದ “ಭಾರತದ ಹೂಡಿಕೆದಾರರ ಸ್ನೇಹಪರ ಇಮೇಜ್ ಮತ್ತು ಹಸಿರು ವಿಶ್ವಾಸಾರ್ಹತೆ ಹೆಚ್ಚಿಸಬಹುದು” ಮತ್ತು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Tesla: ಸುಂಕ ಕಡಿತ ಇಲ್ಲ, ಮೇಕ್ ಇನ್ ಇಂಡಿಯಾ ‘ಟೆಸ್ಲಾ’ ಮಾಡಿ ಎಂದ ಕೇಂದ್ರ ಸರ್ಕಾರ