ಬೀದಿ ನಾಯಿ ಅಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿತು ಸಾಕು ನಾಯಿ ಜಗಳ! ಅಸಲಿಗೆ ಆಗಿದ್ದೇನು ಗೊತ್ತೇ?

ಬೀದಿ ನಾಯಿಗಳ ಉಪಟಳದಿಂದ ಜನ ಕಂಗಾಲಾಗಿರುವುದನ್ನು ಕೇಳಿದ್ದೇವೆ. ಆದರೆ, ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಹುಬ್ಬಳ್ಳಿಯ ಗುರುದೇವ ನಗರ ನಿವಾಸಿಗಳಲ್ಲಿ ಸಾಕು ನಾಯಿಗಳ ಬಗ್ಗೆಯೇ ಆತಂಕ ಉಂಟಾಗಿದ್ದು, ಸಂಬಂಧಿತ ಜಗಳವೊಂದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ! ಹಾಗಾದರೆ ಏನಿದು ಪ್ರಕರಣ? ಇಲ್ಲಿದೆ ವರದಿ.

ಬೀದಿ ನಾಯಿ ಅಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿತು ಸಾಕು ನಾಯಿ ಜಗಳ! ಅಸಲಿಗೆ ಆಗಿದ್ದೇನು ಗೊತ್ತೇ?
ಸಾಂದರ್ಭಿಕ ಚಿತ್ರ
Edited By:

Updated on: Jan 16, 2026 | 12:33 PM

ಹುಬ್ಬಳ್ಳಿ, ಜನವರಿ 16: ಬೀದಿ ನಾಯಿ (Stray Dog) ವಿಚಾರ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ವಿಚಾರಣೆಗೆ ಬಂದಿರುವುದು ನಮಗೆಲ್ಲ ಗೊತ್ತೇ ಇದೆ. ಬೀದಿ ನಾಯಿ ಕಾಟದ ವಿಚಾರ ಸದಾ ಚರ್ಚೆಗೆ ಒಳಗಾಗುತ್ತಿದೆ. ಆದರೆ, ಅಚ್ಚರಿಯೆಂಬಂತೆ ಹುಬ್ಬಳ್ಳಿಯಲ್ಲಿ ಸಾಕು ನಾಯಿ (Pet Dog) ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹುಬ್ಬಳ್ಳಿ (Hubballi) ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಅಲ್ಲದೆ, ಸಾಕು ನಾಯಿ ಉಪಟಳ ವಿಚಾರ ಹುಬ್ಬಳ್ಳಿಯ ಗುರುದೇವ ನಗರ ನಿವಾಸಿಗಳಲ್ಲಿ ಆತಂಕ ಮೂಡಿದೆ.

ಗುರುದೇವ ನಗರ ನಿವಾಸಿ ಪರಶುರಾಮ ಎಂಬವರು ಸಾಕು ನಾಯಿ ವಿಚಾರವಾಗಿ ವಿಲ್ಸನ್ ಹಾಗೂ ವೈಷ್ಣವಿ ಎಂಬ ದಂಪತಿ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅವರ ದೂರಿನ ಪ್ರಕಾರ, ವಿಲ್ಸನ್ ಹಾಗೂ ವೈಷ್ಣವಿ ದಂಪತಿ ಸಾಕಿರುವ ರಾಟ್‌ ವೀಲರ್ ನಾಯಿ ಮದನ ಎಂಬ ಬಾಲಕನಿಗೆ ಕಚ್ಚಿದೆ. ಈ ವೇಳೆ ಬಾಲಕನನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪರಶುರಾಮ ಮೇಲೆಯೇ ಆರೋಪಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮ ನಾಯಿಗೆ ಹೊಡೆದಿದ್ದೀರಿ’ ಎಂದು ಆರೋಪಿಸಿ ಪರಶುರಾಮ ಮೇಲೆ ವಿಲ್ಸನ್ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ವಿಲ್ಸನ್ ಮನೆಗೆ ಬಂದು ಹಲ್ಲೆ ಮಾಡಿ ಹೋಗಿದ್ದಾರೆ ಎಂಬ ಆರೋಪವೂ ಮಾಡಲಾಗಿದೆ. ಈ ಘಟನೆ ಜನವರಿ 13ರಂದು ರಾತ್ರಿ ನಡೆದಿದ್ದು,  ಜನವರಿ 14 ರಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕು ನಾಯಿಗಳ ಅಟ್ಟಹಾಸದಿಂದಾಗಿ ಗುರುದೇವ ನಗರ ನಿವಾಸಿಗಳು ಕಂಗಾಲಾಗಿದ್ದು, ಈ ಹಿಂದೆ ಕೂಡ ಸಾಕು ನಾಯಿಯಿಂದ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಶುರಾಮ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣದಲ್ಲಿ ಪತ್ತೆ, ಬಯಲಾಯ್ತು ರಹಸ್ಯ!

ದೂರು ಸ್ವೀಕರಿಸಿರುವ ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಖಲೆಗಳು ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಸಾಕು ನಾಯಿಗಳ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆ ಕುರಿತು ಹುಬ್ಬಳ್ಳಿಯಲ್ಲಿ ಮತ್ತೆ ಚರ್ಚೆ ಶುರುವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:57 am, Fri, 16 January 26