AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣದಲ್ಲಿ ಪತ್ತೆ, ಬಯಲಾಯ್ತು ರಹಸ್ಯ!

ವಿಜಯಪುರ: ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣದಲ್ಲಿ ಪತ್ತೆ, ಬಯಲಾಯ್ತು ರಹಸ್ಯ!

ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Jan 16, 2026 | 10:45 AM

Share

ವಿಜಯಪುರದ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಹೊಂದಿದ್ದ ರಣಹದ್ದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ನಂತರ ರಣಹದ್ದನ್ನು ಪೊಲೀಸ್ ಸುಪರ್ದಿಗೆ ಒಪ್ಪಿಸಲಾಗಿದ್ದು, ಸದ್ಯ ಅದು ಮಹಾರಾಷ್ಟ್ರದಿಂದ ಬಂದಿದ್ದೆಂಬುದು ಗೊತ್ತಾಗಿದೆ. ರಣಹದ್ದಿನ ರಹಸ್ಯ ಸಂಬಂಧಿತ ಮಾಹಿತಿ, ವಿಡಿಯೋ ಇಲ್ಲಿದೆ.

ವಿಜಯಪುರ, ಜನವರಿ 16: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಕೊನೆಗೆ ರಹಸ್ಯ ಬಯಲಾಗಿದೆ. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು ತಕ್ಷಣ 112 ಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ 112 ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡು ಬಂದಿದ್ದು, ಇದರಿಂದ ಪಕ್ಷಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ, ಈ ರಣಹದ್ದು ಮಹಾರಾಷ್ಟ್ರದ ನಾಗಪೂರ ಸಮೀಪದ ಮೇಲಘಾಟ ಪ್ರದೇಶದಿಂದ ಬಂದಿರುವುದು ತಿಳಿದುಬಂದಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚರಣೆ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಜಿಪಿಎಸ್ ಮತ್ತು ಟ್ರ್ಯಾಕರ್‌ಗಳ ಭಾರದಿಂದ ರಣಹದ್ದು ಬಸವಳಿದ ಸ್ಥಿತಿಯಲ್ಲಿ ಇದ್ದು, ಅದೇ ಕಾರಣದಿಂದ ಹಾರಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದು ಅಗತ್ಯ ಆರೈಕೆ ನೀಡುತ್ತಿದ್ದಾರೆ.

ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಿ ನೋಡಲಾಗುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಿ ಬಿಡುವ ಕುರಿತು ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರ ಸೂಚನೆಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 16, 2026 10:42 AM