PM Modi Hubballi Visit: ಜ. 12ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿ

| Updated By: ಸುಷ್ಮಾ ಚಕ್ರೆ

Updated on: Jan 10, 2023 | 10:19 AM

ಕರ್ನಾಟಕಕ್ಕೆ 2 ಬಾರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಮೊದಲ ಭೇಟಿಯಲ್ಲಿ ಮೋದಿ ಅವರು ಜನವರಿ 12ರಂದು ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲಿದ್ದಾರೆ.

PM Modi Hubballi Visit: ಜ. 12ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿ
ಪ್ರಧಾನಿ ನರೇಂದ್ರ ಮೋದಿ
Image Credit source: Twitter
Follow us on

ಧಾರವಾಡ: ಪ್ರಧಾನಿ ನರೇಂದ್ರ ಮೋದಿ (Narendra Modi) ಈ ತಿಂಗಳಲ್ಲಿ 2 ಬಾರಿ ಕರ್ನಾಟಕಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ವೇಳೆ ಅವರು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜ. 12ರಂದು ಹುಬ್ಬಳ್ಳಿಗೆ (Hubli) ಭೇಟಿ ನೀಡಲಿರುವ ಪ್ರಧಾನಿ ಮೋದಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮಾಹಿತಿ ನೀಡಿದ್ದಾರೆ.

ಕರ್ನಾಟಕಕ್ಕೆ 2 ಬಾರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಮೊದಲ ಭೇಟಿಯಲ್ಲಿ ಮೋದಿ ಅವರು ಜನವರಿ 12ರಂದು ಧಾರವಾಡದಲ್ಲಿ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಜನವರಿ 16ರವರೆಗೆ 7 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರ ಪ್ರಾಂತ್ಯಗಳ ಯುವಕರು ಭಾಗವಹಿಸಲಿದ್ದಾರೆ. ಅದೇ ದಿನ ಮೋದಿ ದೆಹಲಿಗೆ ವಾಪಸಾಗಲಿದ್ದಾರೆ.

ಕರ್ನಾಟಕಕ್ಕೆ ಪ್ರಧಾನಿಯವರ 2ನೇ ಭೇಟಿ ಬಹುತೇಕ ಜನವರಿ 19ರಂದು ಇರಲಿದೆ. ನಾರಾಯಣಪುರ ಅಣೆಕಟ್ಟಿಗೆ ಭೇಟಿ ನೀಡುವ ಮೋದಿ ಅದರ ಆಧುನೀಕರಿಸಿದ ಎಡದಂಡೆ ಕಾಲುವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಾರಾಯಣಪುರ ಅಣೆಕಟ್ಟು ಕಾಲುವೆಯ ಆಧುನೀಕರಣ ಮತ್ತು ಯಾಂತ್ರೀಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣವನ್ನು ಬಳಸಿಕೊಂಡು ಪೂರ್ಣಗೊಳಿಸಲಾಗಿದೆ. ಅದೇ ದಿನ ಕಲಬುರಗಿಯಲ್ಲಿ ನಡೆಯಲಿರುವ ಬಂಜಾರರ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡುವ ಸಾಧ್ಯತೆ ಇದೆ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಯಾದಾಗಿನಿಂದ ವೈದ್ಯಕೀಯ ವೆಚ್ಚಕ್ಕೆ ಸರ್ಕಾರದಿಂದ ಒಂದು ಪೈಸೆ ಹಣವನ್ನೂ ತೆಗೆದುಕೊಂಡಿಲ್ಲವಂತೆ ಮೋದಿ!

ಧಾರವಾಡದಲ್ಲಿ ಜನವರಿ 12ರಿಂದ 16ರ ವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಯುವ ಜನೋತ್ಸವದಲ್ಲಿ ಭಾಗಿಯಾಗಲು ಎಲ್ಲರಿಗೂ ಅವಕಾಶವಿಲ್ಲ. ಈ ರಾಷ್ಟ್ರೀಯ ಯುವ ಜನೋತ್ಸವ ವೀಕ್ಷಿಸಲು ಈಗಾಗಲೇ 15 ಸಾವಿರ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಒಟ್ಟು 7,500 ಮಂದಿ ಯುವ ಪ್ರತಿನಿಧಿಗಳು ಪಾಲ್ಗೊಳ್ಳಲು ಅವಕಾಶವಿದ್ದು, 75,000 ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರೀಯ ಯುವ ಜನೋತ್ಸವವನ್ನು ಆಯೋಜಿಸಲಾಗಿದೆ.

ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿಯೊಂದು ರಾಜ್ಯಕ್ಕೆ ಆಯಾ ಕೇಂದ್ರ ಸಂಸ್ಥೆಯಿಂದ ನಿರ್ದಿಷ್ಟ ಕೋಟ ನಿಗದಿ ಮಾಡಲಾಗುತ್ತದೆ. ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡರೆ ರಾಷ್ಟ್ರೀಯ ಯುವ ಜನೋತ್ಸವವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಲಿಂಕ್​ ಕೂಡ ಬಿಡುಗಡೆ ಮಾಡಲಾಗಿದೆ. ಯುವಜನೋತ್ಸವದಲ್ಲಿ 60ಕ್ಕೂ ಹೆಚ್ಚು ಹೆಸರಾಂತ ತಜ್ಞರು ವಿಶೇಷ ಯುವ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜಿ20 ಮತ್ತು ವೈ20 ಕಾರ್ಯಕ್ರಮಗಳ ಕುರಿತು 5 ವಿಷಯಗಳ ಬಗ್ಗೆ ಸಮಗ್ರ ಚರ್ಚೆಗಳು ನಡೆಯಲಿವೆ.

ಇದನ್ನೂ ಓದಿ: Nationl Youth Fest: ಯುವಜನೋತ್ಸವ ಅತಿಥಿಗಳಿಗೆ ನೋಂದಣಿ ಕಿಟ್; ಪ್ರಧಾನಿ ಮೋದಿಗಾಗಿ ತಯಾರಾಗಿದೆ ವಿಶೇಷ ರಾಷ್ಟ್ರ ಧ್ವಜ

5 ದಿನಗಳ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯವಾಗಿದೆ. ದೇಶಾದ್ಯಂತ ನೊಂದಣಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ವೆಬ್​ಸೈಟ್ ಅ​ನ್ನು ರಚಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು ಇತ್ತೀಚೆಗೆ https://nyfhubballidharwad2023.in/ ವೆಬ್ ಸೈಟ್ ಉದ್ಘಾಟಿಸಿದ್ದರು. ಪ್ರವಾಸಿ ವಿವರಗಳ ಜೊತೆಗೆ ಕಾರ್ಯಕ್ರಮದ ಪಟ್ಟಿ, ಕ್ಷಣ ಕ್ಷಣಕ್ಕೂ ಅಪ್ ಲೋಡ್ ಮಾಡುವ ಸಕಾಲಿಕ ಮಾಹಿತಿ ಲಭ್ಯವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ