Nationl Youth Fest: ಯುವಜನೋತ್ಸವ ಅತಿಥಿಗಳಿಗೆ ನೋಂದಣಿ ಕಿಟ್; ಪ್ರಧಾನಿ ಮೋದಿಗಾಗಿ ತಯಾರಾಗಿದೆ ವಿಶೇಷ ರಾಷ್ಟ್ರ ಧ್ವಜ
Hubli-Dharwad Youth festival: ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಅತಿಥಿಗಳಿಗೆ ಕಾಣಿಕೆಯಾಗಿ ನೀಡಲು ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳಲ್ಲಿ ಸುಮಾರು 7,500 ಕ್ಕೂ ಹೆಚ್ಚು ಖಾದಿ ಧ್ವಜ ತಯಾರಾಗುತ್ತಿವೆ.
ಧಾರವಾಡ: ಉತ್ತರ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಧಾರವಾಡದಲ್ಲಿ (Dharwad) ಜನವರಿ 12 ರಿಂದ 16 ರ ವರೆಗೆ ಜರುಗುತ್ತಿರುವ 26 ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ (National Youth Festival) ದೇಶದ ಸುಮಾರು 8 ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ ಯುವ ಪ್ರತಿಭೆಗಳು, ಪ್ರತಿಭಾವಂತ ಕಲಾವಿದರು ಮತ್ತು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಹಿರಿಯ ಕಲಾಜೀವಿಗಳು ಭಾಗವಹಿಸುತ್ತಿದ್ದಾರೆ. ಕರ್ನಾಟಕದ ಭವ್ಯ ಪರಂಪರೆಯನ್ನು ಮತ್ತು ಉತ್ತರ ಕರ್ನಾಟಕದ ವಿಶೇಷತೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಧಾರವಾಡ ಜಿಲ್ಲಾಡಳಿತವು ಅತಿಥಿಗಳನ್ನು ಸ್ವಾಗತಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೆಂಗೇರಿ, ಗರಗನಲ್ಲಿ ತಯಾರಾಗುತ್ತಿವೆ ರಾಷ್ಟ್ರ ಧ್ವಜ
ಧಾರವಾಡ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಅತಿಥಿಗಳು ಮತ್ತು ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ ಸಚಿವರು, ಉನ್ನತ ಅಧಿಕಾರಿಗಳಿಗೆ ಕಾಣಿಕೆಯಾಗಿ ನೀಡಲು ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳಲ್ಲಿ ಸುಮಾರು 7,500 ಕ್ಕೂ ಹೆಚ್ಚು ಖಾದಿ ಧ್ವಜ ತಯಾರಿಸಲಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕಾಣಿಕೆಯಾಗಿ ನೀಡಲು ರಾಷ್ಟ್ರಧ್ವಜ ಇರುವ 12 ಇಂಚು ಉದ್ದ, 18 ಇಂಚು ಅಳತೆಯ ಟಿಕ್‍ವುಡ್ ಫ್ರೇಮ್ ಹೊಂದಿರುವ ನೆನಪಿನ ಕಾಣಿಕೆಯನ್ನು ರೂಪಿಸಲಾಗಿದೆ. ಈ ಕಾಣಿಕೆಯನ್ನು ವಿಶೇಷವಾಗಿ ಯಲ್ಲಾಪುರದ ಕಲಾವಿದರು ರೂಪಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ನೊಂದಣಿ ಕಡ್ಡಾಯ; ಇಲ್ಲಿದೆ ಲಿಂಕ್
ಯುವಜನೋತ್ಸವದ ಅತಿಥಿಗಳಿಗೆ ನೀಡುವ ನೆನಪಿನ ಕಾಣಿಕೆಯು 4×6 ಅಳತೆಯ ರಾಷ್ಟ್ರಧ್ವಜದೊಂದಿಗೆ 6×9 ಅಳತೆ ಹೊಂದಿದೆ. ಇಡೀ ರಾಷ್ಟ್ರದಲ್ಲಿಯೇ ರಾಷ್ಟ್ರಧ್ವಜಗಳನ್ನು ಅಧಿಕೃತವಾಗಿ ರೂಪಿಸಿ ಪೂರೈಸಲು ಅನುಮತಿ ಹೊಂದಿರುವ ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳು ಧಾರವಾಡ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರದಾದ್ಯಂತ ಪಸರಿಸಲು ಈ ಕಾಣಿಕೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಅತಿಥಿಗಳಿಗೆ ನೀಡುವ ನೋಂದಣಿ ಕಿಟ್
ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸುಮಾರು 7,500 ಸ್ಪರ್ಧಾರ್ಥಿಗಳಿಗೆ ಮತ್ತು ಅತಿಥಿಗಳಿಗೆ ನೀಡಲು ವಿಶೇಷವಾದ ನೋಂದಣಿ ಕಿಟ್‍ಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ಈ ಯುವ ಜನೋತ್ಸವವನ್ನು ಹಸಿರು ಯುವಜನೋತ್ಸವವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ನೋಂದಣಿ ಕಿಟ್‍ದಲ್ಲಿನ ವಸ್ತುಗಳು ಮರುಬಳಕೆಯ ವಸ್ತುಗಳಾಗಿವೆ.
ನೋಂದಣಿ ಕಿಟ್‍ನಲ್ಲಿ ಐಡಿ ಕಾರ್ಡ್, ಮರುಬಳಕೆಯ ಸ್ಟೀಲ್ ವಾಟರ್ ಬಾಟಲ್, ಉತ್ತಮ ಗುಣಮಟ್ಟದ ಬ್ಯಾಗ್, ಸುಮಾರು 8 ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳಿರುವ ಸಣ್ಣ ಕಿಟ್, ಯೋಗಾ ಮ್ಯಾಟ್, ಟ್ರ್ಯಾಕ್ ಸೂಟ್, ಯುವಜನೋತ್ಸವ ಮಾಹಿತಿ ಇರುವ ಇವೆಂಟ್ ಮೆನ್ಯೂ, ಕರ್ನಾಟಕ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ, ಅರವಿಂದೊ ಟ್ರಸ್ಟ್ ನೀಡಿರುವ ಯೂಥ್ ಆಫ್ ಇಂಡಿಯಾ ಪುಸ್ತಕ ಹಾಗೂ ಮುಖ್ಯವಾಗಿ ಧಾರವಾಡನ್ನು ನೆನಪಿಸುವ, ಗುರುತಿಸುವ ಧಾರವಾಡ ಫೇಡಾ ಬಾಕ್ಸ್ ಹಾಗೂ ಖಾದಿ ಧ್ವಜದ ನೆನಪಿನ ಕಾಣಿಕೆ ಇರುತ್ತದೆ.
ಇದನ್ನೂ ಓದಿ: ಯುವಜನೋತ್ಸವ ವೇಳೆ ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ಕೈಯಲ್ಲಿ ಬೇಲೂರು ಶಿಲಾಬಾಲಕಿ ಹಿಡಿದು ನಿಂತಿರುವ ಧಾರವಾಡದ ಯುವಕ
ಯುವಜನೋತ್ಸವ ಸಹಾಯ ಕೇಂದ್ರ
ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರ ಜಿಲ್ಲೆ ಹಾಗೂ ಅಂತರರಾಜ್ಯಗಳಿಂದ ಅತಿಥಿಗಳು ಆಗಮಿಸುವುದರಿಂದ ಅವರಿಗೆ ಸಾರಿಗೆ, ವಸತಿ, ನೋಂದಣಿ ಸ್ಥಳ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ನೀಡಿ, ತಕ್ಷಣಕ್ಕೆ ಸಹಾಯ ಮಾಡಲು ಅನುಕೂಲವಾಗುವಂತೆ ಸ್ವಾಗತ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದಿದೆ.
ಮುಖ್ಯವಾಗಿ ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಹಾಯ ಕೇಂದ್ರಕ್ಕೆ ಆಗಮಿಸುವ ಅತಿಥಿಗಳನ್ನು ನಿಲ್ದಾಣದಿಂದಲೇ ಸ್ವಾಗತಿಸಲು ಕಲಾ ತಂಡಗಳನ್ನು ಸಹ ನೇಮಿಸಲಾಗಿದೆ.
ಸಹಾಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ದಿನದ 24 ಗಂಟೆಯೂ ಸಹಾಯ ಕೇಂದ್ರದಲ್ಲಿದ್ದು, ಬರುವ ಅತಿಥಿಗಳಿಗೆ ಅವರು ಸಹಾಯ ನೀಡಲಿದ್ದಾರೆ.
ವರದಿ-ನರಸಿಂಹಮೂರ್ತಿ ಪ್ಯಾಟಿ ಟಿವಿ-9 ಧಾರವಾಡ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Mon, 9 January 23