ಧಾರವಾಡ: ರಾಜಕಾರಣಿಗಳಿಗೆ ಈ ಅಸೆಂಬ್ಲಿ ಕ್ಷೇತ್ರದ ಗ್ರಾಮವೊಂದಕ್ಕೆ ಪ್ರಚಾರಕ್ಕೆ ಹೋಗಲು ಆಗುತ್ತಲೇ ಇಲ್ಲ, ಕಾರಣ ಸೋಜಿಗವಾಗಿದೆ!

|

Updated on: May 01, 2023 | 9:56 AM

Dharwad Village Fair: ಯಾವುದೇ ಕಾರಣಕ್ಕೂ ಜಾತ್ರೆ ಮುಗಿಯೋವರೆಗೂ ಗ್ರಾಮಕ್ಕೆ ಬರಬಾರದು. ಒಂದು ವೇಳೆ ಬಂದರೂ ದೇವಿಗೆ ನಮಸ್ಕರಿಸಿ ಹೋಗಬಹುದೇ ವಿನಃ ಯಾರೂ ಪ್ರಚಾರ ಮಾಡುವಂತಿಲ್ಲ.

ಧಾರವಾಡ: ರಾಜಕಾರಣಿಗಳಿಗೆ ಈ ಅಸೆಂಬ್ಲಿ ಕ್ಷೇತ್ರದ ಗ್ರಾಮವೊಂದಕ್ಕೆ ಪ್ರಚಾರಕ್ಕೆ ಹೋಗಲು ಆಗುತ್ತಲೇ ಇಲ್ಲ, ಕಾರಣ ಸೋಜಿಗವಾಗಿದೆ!
ರಾಜಕಾರಣಿಗಳಿಗೆ ಈ ಅಸೆಂಬ್ಲಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲು ಆಗುತ್ತಲೇ ಇಲ್ಲ!
Follow us on

ಸದ್ಯ ಚುನಾವಣೆಯ (Karnataka Assembly Elections 2023) ಪ್ರಚಾರದ (canvas) ಕಾವು ಜೋರು ಪಡೆದುಕೊಂಡಿದೆ. ಆಯಾ ಕ್ಷೇತ್ರದ ಅಭ್ಯರ್ಥಿಗಳು ಸಣ್ಣ ಪುಟ್ಟ ಏರಿಯಾವನ್ನೂ ಬಿಡದೆ ಹುಡುಕಿ ಹುಡುಕಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಕ್ಷೇತ್ರವೊಂದರ ಗ್ರಾಮಕ್ಕೆ ಮಾತ್ರ ಪ್ರಚಾರಕ್ಕೆ ಹೋಗಲು ಆಗುತ್ತಲೇ ಇಲ್ಲ. ಏಕೆಂದರೆ ಆ ಊರವರೇ ನಮ್ಮೂರಿಗೆ ಎಲೆಕ್ಷನ್ ಪ್ರಚಾರಕ್ಕೆ ಬರಬೇಡಿ ಅಂತಾ ನಿಷೇಧ ಹೇರಿದ್ದಾರೆ! ಅಷ್ಟಕ್ಕೂ ಹೀಗೇಕೆ ಅಂತೀರಾ? ಬನ್ನಿ ನೋಡೋಣ… ಇದು ಧಾರವಾಡ (Dharwad) ತಾಲೂಕಿನ ಕುರುಬಗಟ್ಟಿ ಗ್ರಾಮ. ಈ ಗ್ರಾಮದಲ್ಲಿ 23 ವರ್ಷಗಳ ಬಳಿಕ ಕರಿಯಮ್ಮ ದೇವಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ಕಾರಣಕ್ಕೆ ಗ್ರಾಮದಲ್ಲಿ ಇದೀಗ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಏಪ್ರಿಲ್ 25 ರಿಂದ 9 ದಿನಗಳ ಕಾಲ ಜಾತ್ರೆ ನಡೆಯುತ್ತಿದೆ. ಹೀಗೆ ಜಾತ್ರೆ ಹಮ್ಮಿಕೊಂಡಿರೋ (Village Fair) ವೇಳೆಯಲ್ಲಿಯೇ ವಿಧಾನಸಭಾ ಚುನಾವಣೆಯೂ ಬಂದಿದೆ. ಹೀಗಾಗಿ ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳು ಗ್ರಾಮಕ್ಕೆ ಬರುತ್ತಾರೆ. ಇದರಿಂದಾಗಿ ಗ್ರಾಮದಲ್ಲಿ ರಾಜಕಾರಣ ಶುರುವಾಗಿ, ಪರಸ್ಪರ ಜನರ ಮಧ್ಯೆ ಅಸಮಾಧಾನ, ಮನಸ್ತಾಪ ಶುರುವಾಗುತ್ತದೆ. ಇದೇ ಕಾರಣಕ್ಕೆ ಗ್ರಾಮಸ್ಥರು ರಾಜಕಾರಣಿಗಳಿಗೆ ಬಹಿಷ್ಕಾರ ಹಾಕಿದ್ದಾರೆ.

ಯಾವುದೇ ಕಾರಣಕ್ಕೂ ಜಾತ್ರೆ ಮುಗಿಯೋವರೆಗೂ ಗ್ರಾಮಕ್ಕೆ ಬರಬಾರದು. ಒಂದು ವೇಳೆ ಬಂದರೂ ದೇವಿಗೆ ನಮಸ್ಕರಿಸಿ ಹೋಗಬಹುದೇ ವಿನಃ ಯಾರೂ ಪ್ರಚಾರ ಮಾಡುವಂತಿಲ್ಲ. ಜಾತ್ರೆಯ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಅನ್ನೋದೇ ಈ ನಿರ್ಧಾರದ ಹಿಂದಿರೋ ಉದ್ದೇಶ. ಏಕೆಂದರೆ ಈ ಗ್ರಾಮ ಧಾರವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈ ಬಾರಿ ಈ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರ ಅಂತಾ ಗುರುತಿಸಿಕೊಂಡಿದೆ. ಇಲ್ಲಿ ಬಿಜೆಪಿಯಿಂದ ಅಮೃತ ದೇಸಾಯಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ನಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪರ್ಧಿಸಿದ್ದಾರೆ. ಇದೇ ಕಾರಣಕ್ಕೆ ಯಾವುದೇ ರಗಳೆಗಳು ಆಗೋದೇ ಬೇಡ ಅಂತಾ ಗ್ರಾಮಸ್ಥರು ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಜಾತ್ರೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಡೊಳ್ಳು ಕುಣಿತ, ಕರಡಿ ಮಜಲು, ಭಂಡಾರದಾಟ ಕೂಡ ಹಮ್ಮಿಕೊಳ್ಳಲಾಗಿದೆ. ಊರಿನ ಹೆಣ್ಣು ಮಕ್ಕಳೆಲ್ಲರೂ ತಾಯಿಗೆ ಉಡಿ ತುಂಬಲು ಜಾತ್ರೆಗೆ ಬರುತ್ತಿದ್ದಾರೆ. ಇನ್ನು ಈ ಜಾತ್ರೆಯನ್ನು ಆರೇಳು ತಿಂಗಳ ಮುಂಚಿತವಾಗಿಯೇ ದಿನಾಂಕ ನಿಗದಿ ಮಾಡಲಾಗಿತ್ತು. ವಾಡಿಕೆಯಂತೆ ಗ್ರಾಮದ ಆಂಜನೇಯ ಸ್ವಾಮಿಯ ರಥೋತ್ಸವ ಮುಗಿದ 20 ದಿನದಲ್ಲಿ ಈ ಜಾತ್ರೆ ಮಾಡಬೇಕು. ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಜಾತ್ರೆಯ ದಿನಾಂಕ ‌ ನಿಗದಿಯಾಗಿ ಸಿದ್ದತೆಗಳೂ ನಡೆದಿದ್ದವು. ಆಗಲೇ ಚುನಾವಣೆ ದಿನಾಂಕ ಘೋಷಣೆಯಾಗಿ ಬಿಟ್ಟಿತು. ಇನ್ನು ಗ್ರಾಮದಲ್ಲಿ ಈ ದಿನಗಳಲ್ಲಿ ಯಾರೂ ಮನೆಯಲ್ಲಿ ಅಡುಗೆಯನ್ನೇ ಮಾಡೋದಿಲ್ಲ. ಎಲ್ಲರಿಗೂ ದೇವಸ್ಥಾನದ ಬಳಿಯೇ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಜಾತ್ರೆ ಮುಗಿಯೋವರೆಗೆ ಯಾರು ಕೂಡ ಗ್ರಾಮದಲ್ಲಿ ಚಪ್ಪಲಿ ಧರಿಸೋದೇ ಇಲ್ಲ. ಇಷ್ಟೊಂದು ವರ್ಷಗಳ ಬಳಿಕ ನಡೆಯುತ್ತಿರೋ ಜಾತ್ರೆಯಿಂದಾಗಿ ಸ್ಥಳೀಯರು ಭಾರೀ ಖುಷಿಯಾಗಿದ್ದಾರೆ.

ಇದನ್ನೂ ಓದಿ:

Karnataka Assembly Elections 2023: ರಾಜ್ಯದಲ್ಲಿಂದು ಬಿಜೆಪಿ-ಕಾಂಗ್ರೆಸ್ ರಾಷ್ಟ್ರ ನಾಯಕರ ಅಬ್ಬರದ ಪ್ರಚಾರ, ಕಂಪ್ಲೀಟ್ ಮಾಹಿತಿ ಇಲ್ಲಿದೆ

ಈ ಮಧ್ಯೆ ತಮ್ಮೂರಿನ ಜಾತ್ರೆಗಾಗಿ ರಾಜಕೀಯ ಪಕ್ಷಗಳನ್ನ ಗ್ರಾಮಸ್ಥರು ಹೊರಗಿಟ್ಟಿದ್ದು ಸಾಕಷ್ಟು ಗಮನ ಸೆಳೆಯುತ್ತಿದೆ. ಏಕೆಂದರೆ ಜಾತ್ರೆಗಳೆಂದ ಕೂಡಲೇ ಎಲ್ಲ ರಾಜಕಾರಣಿಗಳು ಓಡೋಡಿ ಬರುತ್ತಾರೆ. ಹೀಗೆ ಬಂದವರು ಸಾಕಷ್ಟು ಪ್ರಮಾಣಕ್ಕೆ ಆರ್ಥಿಕ ಸಹಾಯವನ್ನೂ ಮಾಡುತ್ತಾರೆ. ಆದರೆ ಇದ್ಯಾವುದರ ಗೊಡವೆಯೇ ಇಲ್ಲದಂತೆ ಗ್ರಾಮಸ್ಥರೇ ಮುಂದೆ ನಿಂತು ಜಾತ್ರೆ ಮಾಡುತ್ತಿದ್ದಾರೆ. ಅಲ್ಲದೇ ಗ್ರಾಮದಲ್ಲಿರೋ ವಿವಿಧ ರಾಜಕೀಯ ಮುಖಂಡರು ಕೂಡ ಜಾತ್ರೆ ಮುಗಿಯೋವರೆಗೆ ತಟಸ್ಥವಾಗಿರಲು ನಿರ್ಧರಿಸಿದ್ದಾರೆ. ಹೀಗಾಗಿ ಮೇ 5ರ ಬಳಿಕ ಮಾತ್ರವೇ ಈ ಗ್ರಾಮಕ್ಕೆ ರಾಜಕೀಯ ಪಕ್ಷಗಳಿಗೆ ಎಂಟ್ರಿ ಸಿಗಲಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ 

Published On - 9:53 am, Mon, 1 May 23