ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲೂ ರಾಜಕೀಯ; ಕಾಂಗ್ರೆಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕಣಕ್ಕೆ
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಲೋಕಸಭಾ ಚುನಾವಣೆ ಮಾಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಾಗಿ ಈ ಪಕ್ಷಗಳ ಮಧ್ಯದಲ್ಲಿ ಒಪ್ಪಂದ ಇದ್ದೇ ಇರುತ್ತೆ. ಆದರೆ, ಇದೀಗ ಜುಲೈ. 21 ಕ್ಕೆ ನಡೆಯಲಿರುವ ಧಾರವಾಡ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಇದಕ್ಕಿಂತಲೂ ವಿಚಿತ್ರ ರೀತಿಯ ಮೈತ್ರಿ ಕಂಡು ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಒಂದಾಗಿ ಜೆಡಿಎಸ್ ಮುಖಂಡನ ವಿರುದ್ಧ ಅಭ್ಯರ್ಥಿಯನ್ನ ಕಣದಲ್ಲಿ ಇಳಿಸಿದ್ದಾರೆ. ಹೀಗಾಗಿ ಈ ಬಾರಿಯ ಮಹಾಸಭಾದ ಚುನಾವಣೆ ಸಾಕಷ್ಟು ರಂಗೇರಿದೆ.

ಧಾರವಾಡ, ಜು.19: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಮಾಡಿದ್ದವು. ಆದರೆ, ಧಾರವಾಡ(Dharwad)ದ ವೀರಶೈವ ಲಿಂಗಾಯತ ಮಹಾಸಭಾ(Veerashaiva Lingayat Mahasabha)ದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಶಾಸಕರು ಒಂದಾಗಿ, ಈಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಜೆಡಿಎಸ್ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ, ಈ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ಅಭ್ಯರ್ಥಿ ವಿರುದ್ಧ ಕಣದಲ್ಲಿದ್ದಾರೆ.
ಇದೇ ಜುಲೈ 21 ರಂದು ಧಾರವಾಡ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸ್ಥಾನ, 20 ಸಾಮಾನ್ಯ ಸ್ಥಾನ ಹಾಗೂ 10 ಮಹಿಳಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಗುರುರಾಜ್ ಹುಣಶಿಮರದ ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿ ಇಳಿದಿದ್ದಾರೆ. ಮತ್ತೊಂದು ಕಡೆ ಧಾರವಾಡ ಶಾಸಕ ವಿನಯ ಕುಲಕರ್ಣಿ ಹಾಗೂ ಅರವಿಂದ ಬೆಲ್ಲದ ಬೆಂಬಲಿತ ಅಭ್ಯರ್ಥಿ ಪ್ರದೀಪಗೌಡ ಪಾಟೀಲ್ ಕಣದಲ್ಲಿ ಇಳಿದಿದ್ದಾರೆ. ಹೀಗಾಗಿ ಈ ಚುನಾವಣೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ಇದನ್ನೂ ಓದಿ:4 ವರ್ಷದಿಂದ ಉದ್ಘಾಟನೆ ಭಾಗ್ಯ ಸಿಗದೇ ಅನಾಥವಾದ ಬಸವಣ್ಣನ ಪ್ರತಿಮೆ; ವೀರಶೈವ ಲಿಂಗಾಯತ ಮಹಾಸಭಾ ಅಸಮಾಧಾನ
ಈ ಸಂಘಕ್ಕೆ ಒಟ್ಟು 2800 ಸದಸ್ಯರಿದ್ದಾರೆ. ಇವರಲ್ಲಿ ಇಬ್ಬರು ಮಾಜಿ ಸಿಎಂಗಳು, ನಾಲ್ಕು ಶಾಸಕರು ಹಾಗೂ 10 ಕ್ಕೂ ಹೆಚ್ಚು ಮಾಜಿ ಶಾಸಕರಿದ್ದಾರೆ ಎನ್ನೋದು ವಿಶೇಷ. ಹೀಗಾಗಿ ಈ ಬಾರಿ ಈ ಚುನಾವಣೆ ತುರುಸು ಪಡೆದುಕೊಂಡಿದೆ. ಕಳೆದ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದ ಗುರುರಾಜ ಹುಣಸಿಮರದ್, ಈ ಬಾರಿ ಮತ್ತೆ ಆಯ್ಕೆ ಬಯಸಿ ಕಣ್ಣಕ್ಕಿಳಿದಿದ್ದಾರೆ. ತಮ್ಮ ವಿರುದ್ಧ ಕೈ ಮತ್ತು ಕಮಲ ಪಾಳಯದ ಶಾಸಕರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ, ಇದು ರಾಜಕೀಯವೇ ಅಲ್ಲ ಎಂದು ಗುರುರಾಜ್ ಹುಣಸಿಮರದ್ ಎನ್ನುತ್ತಿದ್ದಾರೆ.
ಇನ್ನು ಈ ಲಿಂಗಾಯತ ಮಹಾಸಭಾದ ಚುನಾವಣೆ ಕಳೆದ 2014 ರಲ್ಲಿ ನಡೆದಿತ್ತು. ಅದಾದ ನಂತರ ಕಳೆದ 2019 ರಲ್ಲಿ ಅವಿರೋಧ ಆಯ್ಕೆ ಮಾಡುವ ಮೂಲಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆದಿತ್ತು. ಆಗ ಗುರುರಾಜ್ ಹುಣಶಿಮರದ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಬೇಕೆಂಬ ನಿರ್ಧಾರವಾಗಿತ್ತು. ಆದರೆ, ಗುರುರಾಜ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲೇ ಇಲ್ಲ. ಹೀಗಾಗಿ ಈ ಬಾರಿ ಚುನಾವಣೆ ಅನಿವಾರ್ಯವಾಗಿದೆ ಎಂದು ಅವರ ಎದುರಾಳಿ ಪ್ರದೀಪ ಗೌಡ ಪಾಟೀಲ್ ಅವರ ಅಭಿಪ್ರಾಯವಾಗಿದೆ.
ಇಷ್ಟು ದಿನ ಹೊಂದಾಣಿಕೆ ಮೇಲೆಯೇ ನಡೆದುಕೊಂಡು ಬಂದಿದ್ದ ಧಾರವಾಡ ಲಿಂಗಾಯತ ಮಹಾಸಭಾದ ಅಧ್ಯಕ್ಷರ ಆಯ್ಕೆ, ಈ ಬಾರಿ ಬೇರೆ ತಿರುವು ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಈ ಬಾರಿಯ ಚುನಾವಣೆ ಭಾರೀ ತುರುಸು ಪಡೆದಿದೆ. ಒಟ್ಟಿನಲ್ಲಿ ಈ ಬಾರಿ ಕೈ-ಕಮಲ ಬೆಂಬಲಿತ ಅಭ್ಯರ್ಥಿ ಗೆಲ್ಲುತ್ತಾರೋ ಅಥವಾ ಜೆಡಿಎಸ್ನ ಮುಖಂಡ ಗೆಲ್ಲುತ್ತಾರೋ ಎನ್ನೋದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ