ಧಾರವಾಡ, ಡಿ.23: ಉಜ್ವಲ ಯೋಜನೆಯಡಿ ಪ್ರಧಾನಿ 5 ಸಾವಿರ ರೂಪಾಯಿ ನೀಡುತ್ತಾರೆಂಬ ವದಂತಿ ಹಿನ್ನಲೆ ಧಾರವಾಡ(Dharwad) ಜಿಲ್ಲೆಯ ಗ್ಯಾಸ್ ಏಜೆನ್ಸಿ(Gas Agency)ಗಳ ಮುಂದೆ ಗ್ರಾಹಕರು ಜಮಾವಣೆ ಆದ ಘಟನೆ ನಡೆದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣ ನೀಡುತ್ತಾರೆಂದು ವದಂತಿ ಬಿದ್ದಿದ್ದೆ ತಡ, ವಿವಿಧ ಗ್ಯಾಸ್ ಏಜೆನ್ಸಿಗಳ ಮುಂದೆ ನೂರಾರು ಗ್ರಾಹಕರು ಕ್ಯೂ ನಿಂತಿದ್ದಾರೆ. ಇನ್ನು ಗ್ಯಾಸ್ ಸಂಪರ್ಕ ಹೊಂದಿದ ಕುಟುಂಬಗಳ ಕೆವೈಸಿ ಕಡ್ಡಾಯ ಹಿನ್ನೆಲೆ ಡಿ.31 ರಂದು ಕೊನೆ ದಿನವಾಗಿದ್ದರಿಂದ ಏಜೆನ್ಸಿಗಳು ಜಾಗೃತಿ ಮೂಡಿಸಿದ್ದರು. ಆದರೆ, ಗ್ಯಾಸ್ ಗ್ರಾಹಕರಿಗೆ 5 ಸಾವಿರ ರೂ. ನೀಡುತ್ತಿದ್ದಾರೆಂದು ವದಂತಿ ಹರಡಿದೆ.
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹೊಳೆ ಬೀದಿಯಲ್ಲಿನ ಎರಡು ಮನೆಯ ಬೀಗ ಒಡೆದು ಖದೀಮರು ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕಿದ ಕಳ್ಳರು, ತಡರಾತ್ರಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಈ ಹಿನ್ನಲೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರಿಗಾಗಿ ಶೋಧ ಆರಂಭಿಸಿದ್ದು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:Breaking: ವದಂತಿಗಳೆಲ್ಲ ಸುಳ್ಳು; ಗುಜರಾತ್ ತಂಡದಲ್ಲೇ ಉಳಿದ ಹಾರ್ದಿಕ್ ಪಾಂಡ್ಯ
ಬೆಂಗಳೂರು: ಸದಾಶಿವನಗರದ ಅಶ್ವತ್ಥ್ ನಗರದಲ್ಲಿ ಗ್ಯಾಸ್ ಗೀಸರ್ನಿಂದ ಮಹಿಳೆ ಸಾವನ್ನಪ್ಪಿದ್ದು, ಮಗು ಸ್ಥಿತಿ ಗಂಭೀರವಾಗಿದೆ. ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾದ ಹಿನ್ನಲೆ ರಮ್ಯಾ(23) ಸಾವನ್ನಪ್ಪಿದ್ದಾರೆ. 4 ವರ್ಷದ ಮಗುವಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಸ್ನಾನ ಗೃಹದ ಬಾಗಿಲು, ಕಿಟಕಿ ಮುಚ್ಚಿದ್ದರಿಂದ ಗಾಳಿಯಾಡದ ಹಿನ್ನೆಲೆ ಉಸಿರಾಟದ ಸಮಸ್ಯೆಯಾಗಿ ತಾಯಿ ಮತ್ತು ಮಗು ಕುಸಿದು ಬಿದ್ದಿದ್ದರು. ಕೂಡಲೇ ಅಸ್ವಸ್ಥರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಾಯಿ ರಮ್ಯಾ ಮೃತಪಟ್ಟರೆ, ತುರ್ತು ಚಿಕಿತ್ಸಾ ವಿಭಾಗದಲ್ಲಿ 4 ವರ್ಷದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sat, 23 December 23