ಧಾರವಾಡ: ಹಾಜರಾತಿ ಕಡಿಮೆ ಆಗಿದ್ದಕ್ಕೆ ಸರ್ಕಾರಿ ಶಾಲೆಗಳನ್ನು ಬಂದ್ ಮಾಡೋದು ಸಾಮಾನ್ಯ. ಕೊರೊನಾ ಬಂದ ಬಳಿಕ ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಕಡಿಮೆಯಾಗಿದ್ದರೆ, ಇತ್ತ ಸಾಕಷ್ಟು ಖಾಸಗಿ ಶಾಲೆಗಳಲ್ಲಿನ ಹಾಜರಾತಿಯೂ ಗಣನೀಯ ಇಳಿಕೆಯಾಗಿದೆ. ಇಂಥ ಖಾಸಗಿ ಶಾಲೆಗಳನ್ನೇ ಬಂದ್ ಮಾಡೋ ಪರಿಸ್ಥಿತಿ ಬಂದಿದೆ. ಇಂಥ ಶಾಲೆಗಳಿಗೆ ಧಾರವಾಡದಲ್ಲಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಧಾರವಾಡ ಅಂದ್ರೆ ವಿದ್ಯಾಕಾಶಿ, ಶಿಕ್ಷಣದ ನಗರಿ ಅಂತಾನೇ ಹೆಸರುವಾಸಿ. ಏಕೆಂದರೆ ರಾಜ್ಯದಲ್ಲಿ ಬೆಂಗಳೂರು ಹೊರತಾಗಿ ಯಾವ ಜಿಲ್ಲಾ ಕೇಂದ್ರದಲ್ಲಿಯೂ ಇಲ್ಲದಷ್ಟು ಶಿಕ್ಷಣ ಸಂಸ್ಥೆಗಳು ಧಾರವಾಡದಲ್ಲಿವೆ. ಆದರೆ ಇದೀಗ ಆ ಶಿಕ್ಷಣ ಸಂಸ್ಥೆಗಳೇ ಹಾಜರಾತಿ ಸಮಸ್ಯೆ ಎದುರಿಸುವಂತಾಗಿದೆ. ಅನೇಕ ಖಾಸಗಿ ಮತ್ತು ಅನುದಾನಿತ ಶಾಲೆಗಳ ಮೇಲೆ ಅನುಮತಿ ರದ್ದಾಗುವ ತೂಗುಗತ್ತಿ ಓಡಾಡುತ್ತಿದೆ.
ಹೌದು, ಸರ್ಕಾರದ ನಿಯಮಾವಳಿಗಳ ಪ್ರಕಾರ ಹಾಜರಾತಿ ನಿರ್ವಹಣೆ ಆಗದೇ ಹೋದಲ್ಲಿ ಅಂತಹ ಶಾಲೆಗಳ ಅನುಮತಿ ರದ್ದು ಮಾಡುವ ಅಧಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇರುತ್ತದೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಬಳಿಕ ಸಾಕಷ್ಟು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದು, ಇದರ ಪರಿಣಾಮದಿಂದಾಗಿ 36 ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂಥ ಶಾಲೆಗಳಿಗೆ ಇದಗ ಧಾರವಾಡ ಡಿಡಿಪಿಐ ಕಾರಣ ಕೇಳಿ ನೋಟಿಸ್ ನೀಡದ್ದಾರೆ.
ಸರ್ಕಾರದ ನಿಯಮಾವಳಿ ಪ್ರಕಾರ ಪ್ರತಿ ತರಗತಿಯಲ್ಲಿ ಕನಿಷ್ಠ 30 ಶೇಕಡಾ ಹಾಜರಾತಿ ಇರಲೇಬೇಕು. ಆದರೆ ಇತ್ತೀಚಿನ ಎರಡು ವರ್ಷಗಲ್ಲಿ ಅನೇಕ ಮಕ್ಕಳು ಖಾಸಗಿ ಮತ್ತು ಅನುದಾನಿತ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿದ್ದರಿಂದ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಅಂದಾಜು ಶೇಕಡಾ 25ರಷ್ಟು ಹಾಜರಾತಿ ಹೆಚ್ಚಾಗಿದೆ.
ಆದರೆ ಈ ಕಡೆ ಖಾಸಗಿ ಶಾಲೆಗಳಲ್ಲಿ ಹಾಜರಾತಿ ಕ್ಷೀಣಿಸುತ್ತ ಹೋಗಿದ್ದರಿಂದ ಅಂತಹ ಎಲ್ಲ ಶಾಲೆಗಳೆಗೂ ಈಗ ಡಿಡಿಪಿಐ ನೋಟೀಸ್ ಜಾರಿ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಪಾಲಕರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣವನ್ನು ಗಮನಿಸಿ, ಡಿಡಿಪಿಐ ಅವರು ಮಾನ್ಯತೆ ಕ್ರಮ ಕೈಗೊಳ್ಳೋ ನಿರ್ಧಾರವನ್ನು ಕೈಬಿಡಬೇಕು ಅನ್ನೋದು ಸ್ಥಳೀಯರ ಆಗ್ರಹ.
ಖಾಸಗಿ ಶಾಲೆಗಳು ಅಂದ್ರೆ ಸಾಕಷ್ಟು ಬಂಡವಾಳ ಹಾಕಿ ಅನೇಕ ಹೈಟೆಕ್ ಸೌಲಭ್ಯ ಎಲ್ಲ ಕಲ್ಪಿಸಲಾಗಿರುತ್ತೆ. ಅದಕ್ಕಾಗಿಯೇ ಅನೇಕ ಸಂಸ್ಥೆಗಳ ಸಾಲವನ್ನೂ ಮಾಡಿ ಶಾಲೆಗಳನ್ನು ನಡೆಸುತ್ತಿರುತ್ತವೆ. ಸೌಲಭ್ಯಗಳ ಜೊತೆಗೆ ಒಳ್ಳೆ ಕಲಿಕೆ ನೀಡೋ ಕಾರಣಕ್ಕೆ ಎಲ್ಲರೂ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದರಿಂದ ಎಷ್ಟೋ ಕಡೆ ಸರ್ಕಾರಿ ಶಾಲೆಗಳನ್ನೆ ಮುಚ್ಚುತ್ತಿದ್ದರು. ಆದರೀಗ ಕೊರೊನಾ ಅದೆಲ್ಲವನ್ನೂ ಉಲ್ಟಾ ಹೊಡೆಸಿದ್ದು, ಖಾಸಗಿ ಶಾಲೆಗಳೇ ಬಾಗಿಲು ಹಾಕೋ ಸ್ಥಿತಿ ಬಂದಿದೆ. ಇದು ವಿಪರ್ಯಾಸವಾದರೂ ಸತ್ಯ.
ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ
ಇದನ್ನೂ ಓದಿ: ಪರಿಸರಕ್ಕೆ ಮಾರಕವಾಗುವ ವಸ್ತುವಿನಿಂದ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಧಾರವಾಡ ಯುವಕ; ದೇಶದಲ್ಲೇ ಇದು ಮೊದಲ ಪ್ರಯತ್ನ
ಇದನ್ನೂ ಓದಿ: ಪೇರಲೆ ಎಲೆಯಿಂದ ಆದಾಯ ಗಳಿಸುತ್ತಿರುವ ಧಾರವಾಡ ರೈತರು, ಅದು ಹೇಗೆ?