ಧಾರವಾಡ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ‘ಕೈ’ ನಾಯಕರಿಗೆ ಸಮನ್ಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಜುಲೈ 26ರಂದು ಮತ್ತೆ ಪ್ರತಿಭಟನೆ(Congress Protest) ನಡೆಸುತ್ತೇವೆ ಎಂದು ಧಾರವಾಡದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್(Saleem Ahmed) ತಿಳಿಸಿದ್ದಾರೆ. ಸೋನಿಯಾ ಗಾಂಧಿ(Sonia Gandhi), ರಾಹುಲ್ ಗಾಂಧಿ(Rahul Gandhi)ಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಜುಲೈ 26ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರಕ್ಕೆ ನಾಚಿಕೆಯಾಗಬೇಕು. ಮುಗಿದು ಹೋದ ಪ್ರಕರಣವನ್ನು ಮತ್ತೆ ಹೊರಗೆ ತೆಗೆದಿದ್ದಾರೆ. ಅವರಾರೂ ಇದಕ್ಕೆಲ್ಲಾ ಹೆದರೋದಿಲ್ಲ. ಇಬ್ಬರಿಗೂ ತೊಂದರೆ ಕೊಟ್ಟರೆ ನೀವು ಸರ್ವನಾಶ ಆಗ್ತೀರಾ. ನಾವೆಲ್ಲರೂ ಅವರೊಂದಿಗೆ ಇದ್ದೇವೆ. ಜುಲೈ 26ರಂದು ಮತ್ತೆ ಬೆಂಗಳೂರಿನಲ್ಲಿ ಪ್ರತಿಭಟನೆ ಇಟ್ಟುಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವ ಸಂಕಲ್ಪ ಚಿಂತನಾ ಶಿಬಿರ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಲೀಂ ಅಹ್ಮದ್ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಕ್ಲೀನ್‌ಚಿಟ್ ವಿಚಾರಕ್ಕೆ ಸಂಬಂಧಿಸಿ ಕೆ.ಎಸ್.ಈಶ್ವರಪ್ಪ ವಿರುದ್ಧ ಮತ್ತೆ ಹೋರಾಟ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಸಂತೋಷ್ ಆತ್ಮಹತ್ಯೆ ನಂತರ ಕೇಸ್ ದಾಖಲಿಸಲು ಆಗ್ರಹಿಸಿದ್ದೆವು. K.S.ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸದೆ ಕ್ಲೀನ್‌ಚಿಟ್ ನೀಡಿದ್ದಾರೆ. ಮತ್ತೆ ಸಚಿವ ಸ್ಥಾನ ಪಡೆಯಲು ಕೆ.ಎಸ್.ಈಶ್ವರಪ್ಪ ಸಿದ್ಧರಾಗಿದ್ದಾರೆ. ಇವರಿಗೆಲ್ಲಾ ಅಧಿಕಾರದ ಆಸೆ, ಇದೊಂದು ನಿರ್ಜೀವ ಸರ್ಕಾರ. ಹೀಗಾಗಿ ಈಶ್ವರಪ್ಪ ವಿರುದ್ಧ ಮತ್ತೆ ಹೋರಾಟ ನಡೆಸಲು ನಿರ್ಧಾರ ಮಾಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಬಿಜೆಪಿಯವ್ರು ಸಮಾಜ ಒಡೆಯುವ ಕೆಲಸ ಮಾಡಿದರು
ಬಿಜೆಪಿಗೆ ಸೋಲಾಗುತ್ತೆಂದು ಇಂಟಲಿಜೆನ್ಸ್ ರಿಪೋರ್ಟ್ ಸಿಕ್ಕಿತ್ತು. ಬಿಜೆಪಿಗೆ ಕೇವಲ 60 ಸೀಟು ಸಿಗುತ್ತೆ ಅನ್ನೋ ಮಾಹಿತಿ ಬಂತು. ಹೀಗಾಗಿ ಬಿಜೆಪಿಯವ್ರು ಸಮಾಜ ಒಡೆಯುವ ಕೆಲಸ ಮಾಡಿದರು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ಬಿಜೆಪಿಗೆ ಸೋಲಾಗುತ್ತೆಂದು ತಿಳಿದೇ ಜಿ.ಪಂ, ತಾ.ಪಂ ಚುನಾವಣೆ ನಡೆಸುತ್ತಿಲ್ಲ. ನಮ್ಮ ಸರ್ವೆ ಪ್ರಕಾರ 130 ಸೀಟ್ ಪಡೆದು ‘ಕೈ’ ಅಧಿಕಾರಕ್ಕೆ ಬರುತ್ತೆ. ನಾಯಕ ರಾಹುಲ್ ಗಾಂಧಿ 150 ಸೀಟ್ ಟಾರ್ಗೆಟ್ ನೀಡಿದ್ದಾರೆ ಎಂದರು.