ಧಾರವಾಡ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿವೆ. ಜೆಡಿಎಸ್ ಪಂಚರತ್ನಯಾತ್ರೆ ಮಾಡುತ್ತಿದ್ದರೆ, ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಸಿದೆ. ಇನ್ನು ಬಿಜೆಪಿ ಈಗಾಗಲೇ ಜನ ಸಂಕಲ್ಪ ಯಾತ್ರೆ ಮುಗಿಸಿದ್ದು, ಇದೀಗ ವಿಜಯ ಸಂಕಲ್ಪ ಯಾತ್ರೆ ನಡೆಸಲು ತೀರ್ಮಾನಿಸಿದೆ. ಇದರಿಂದ ಚುನಾವಣೆ ಕಣಗಳು ರಂಗೇರಿದೆ. ಇದರ ಮಧ್ಯೆ ಸರ್ವೋದಯ ಕರ್ನಾಟಕ ಪಕ್ಷವೂ ಚುನಾವಣಾ ಅಖಾಡಕ್ಕೆ ಇಳಿಯಲು ತೀರ್ಮಾನಿಸಿದ್ದು, 4 ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಇಂದು(ಫೆಬ್ರವರಿ) ಧಾರವಾಡದಲ್ಲಿ ಮಾತನಾಡಿದ ಸರ್ವೋದಯ ಕರ್ನಾಟಕ ಪಕ್ಷದ ಸಂಸ್ಥಾಪಕ ಚಾಮರಸ ಮಾಲಿಪಾಟೀಲ್, ವಿಧಾನಸಭಾ ಎಲೆಕ್ಷನ್‌ನಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧೆ ಮಾಡಲಿದೆ. 4 ಜಿಲ್ಲೆಗಳ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯ, ಮೇಲುಕೋಟೆ, ಬೆಳ್ತಂಗಡಿ, ವಿರಾಜಪೇಟೆ, ಬೀಳಗಿ ಸೇರಿದಂತೆ 4 ಜಿಲ್ಲೆಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧೆಗೆ ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಹಲವಾರು ಸಮಸ್ಯೆಗಳ ಬಗೆಹರಿಸಲು ವಿಫಲವಾಗಿವೆ ಎಂದು ಆರೋಪಿಸಿರುವ ಚಾಮರಸ ಮಾಲಿ ಪಾಟೀಲ್, ಸಮಸ್ಯೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಹಿಸಿ ಕೇವಲ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿವೆ ಎಂದು ರಾಜಕೀಯ ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಲಕ್ಷ್ಯ ವಹಿಸಿದ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿವೆ. ಇದರಿಂದಾಗಿ ನಿರ್ಲಕ್ಷಕ್ಕೆ ಒಳಗಾಗಿರುವ ರಾಜ್ಯ ಉತ್ತಮ ಆಡಳಿತ ಕೊಡುವ ನಿಟ್ಟಿನಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧೆ ಮಾಡಲಿದೆ ಎಂದರು.