ಬೀಜ ಮಾರಾಟ ಕಂಪನಿಯಿಂದ ಮೋಸ; ಸೌತೆಕಾಯಿ ಬೆಳೆದ ಹುಬ್ಬಳ್ಳಿ ರೈತ ಕಂಗಾಲು

ಹುಬ್ಬಳಿಯ ರೈತ ರಾಮು ಜಿಂದಾಲ್ ಕಂಪನಿಯ ಸೌತೆ ಬೀಜವನ್ನು ತಮ್ಮ ಹೊಲದಲ್ಲಿ ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಿದ್ದರು. ಪಕ್ಕದ ಹೊಲದಿಂದ ನೀರನ್ನು ಬಾಡಿಗೆಗೆ ಪಡೆದು ಬಿತ್ತನೆ ಮಾಡಿದ್ದರು 45 ದಿನಗಳಲ್ಲಿ ಹೇಳಿಕೊಳ್ಳುವಂತಹ ಇಳುವರಿ ಬಂದಿಲ್ಲ.

  • ರಹಮತ್ ಕಂಚಗಾರ್
  • Published On - 22:40 PM, 14 Apr 2021
ಬೀಜ ಮಾರಾಟ ಕಂಪನಿಯಿಂದ ಮೋಸ; ಸೌತೆಕಾಯಿ ಬೆಳೆದ ಹುಬ್ಬಳ್ಳಿ ರೈತ ಕಂಗಾಲು
ಸೌತೆಕಾಯಿ

ಹುಬ್ಬಳ್ಳಿ: ಇತ್ತೀಚೆಗೆ ರೈತರಿಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇವೆ. ಬೆಳೆ ಚೆನ್ನಾಗಿ ಬಂದರೆ ಬೆಲೆ ಇಲ್ಲ, ಬೆಲೆ ಚೆನ್ನಾಗಿ ಬಂದರೆ ಬೆಳೆ ಇಲ್ಲ ಎನ್ನುವಂತಾಗಿದೆ. ಇನ್ನು ಇದಕ್ಕೆ ನಿದರ್ಶನ ಎನ್ನುವಂತೆ ಹುಬ್ಬಳ್ಳಿಯ ರೈತರೊಬ್ಬರ ಸ್ಥಿತಿ ಉಂಟಾಗಿದ್ದು, ಸಾಲ ಮಾಡಿ ರೈತ ಬೆಳೆದ ಬೆಳೆ ಸರಿಯಾಗಿ ಇಳುವರಿ ಬರದೆ ಕಂಗಾಲಾಗಿದ್ದಾರೆ.

ಹುಬ್ಬಳಿಯ ರೈತ ರಾಮು ಜಿಂದಾಲ್ ಕಂಪನಿಯ ಸೌತೆಬೀಜವನ್ನು ತಮ್ಮ ಹೊಲದಲ್ಲಿ ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಿದ್ದರು. ಪಕ್ಕದ ಹೊಲದಿಂದ ನೀರನ್ನು ಬಾಡಿಗೆಗೆ ಪಡೆದು ಬಿತ್ತನೆ ಮಾಡಿದ್ದರು. 45 ದಿನಗಳಲ್ಲಿ ಹೇಳಿಕೊಳ್ಳುವಂತಹ ಇಳುವರಿ ಬರಲಿಲ್ಲ. ಬಂದ ಅಲ್ಪ ಸ್ವಲ್ಪ ಬೆಳೆ ಕೂಡ ರಾಮು ಅವರನ್ನು ಚಿಂತೆಗೀಡು ಮಾಡಿದೆ. ಇದಕ್ಕೆ ಕಾರಣ ಇಳುವರಿ ಬಂದ ಎಲ್ಲಾ ಸೌತೆಕಾಯಿ ಕಹಿ ರುಚಿ ಹೊಂದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೇಟದೂರಿನ ರೈತ ರಾಮು ಮೊದಲೇ ಗೋವಿನ ಜೋಳ ಬೆಳೆದು ಬೆಳೆ ಬಾರದೇ ಸಾಲದ ಶೂಲಕ್ಕೆ ಗುರಿಯಾಗಿದ್ದರು. ಈಗ ಸೌತೆ ಬೆಳೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 30000 ರೂಪಾಯಿ ಸೌತೆ ಬೆಳೆಗಾಗಿ ಖರ್ಚು ಮಾಡಿರುವ ರಾಮುಗೆ ಮುಂದೆ ಜೀವನ ಹೇಗೆ ಎಂಬ ಆತಂಕ ಮನೆ ಮಾಡಿದೆ.

ಕಳಪೆ ಬೀಜ ಮಾರಾಟ ಮಾಡಿದ್ದ ಹುಬ್ಬಳ್ಳಿಯ ರಸಗೊಬ್ಬರ ಅಂಗಡಿಯ ಮಾಲೀಕರನ್ನು ಈ ಕುರಿತು ವಿಚಾರಿಸಿದಾಗ ಅವರು ಕೈಚೆಲ್ಲಿದ್ದಾರೆ. ಕಳಪೆ ಬೀಜ ವಿತರಣೆ ಮಾಡಿ ನಾವು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ರೀತಿಯ ಕಳಪೆ ಬೀಜದಿಂದ ಸಾಲ ಮಾಡಿ ಬೆಳೆದ ಬೆಳೆ ಕೈಸೇರದಂತಾಗಿದೆ ಎಂದು ವಂಚನೆಗೊಳಗಾದ ರೈತ ರಾಮು ಹೇಳಿದ್ದಾರೆ.

fake seeds

ರೈತ ರಾಮು

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಮಾರುಕಟ್ಟೆಯಲ್ಲಿ ಹೇರಳವಾಗಿ ಕಳಪೆ ಬೀಜ ಮಾರಾಟ ನಡೆಯುತ್ತಿದೆ. ಎಲ್ಲಿಯವರೆಗೂ ಇಂತಹ ಕಳಪೆ ಗುಣಮಟ್ಟದ ಬೀಜ ಮಾರಾಟ ನಿಲ್ಲವುದಿಲ್ಲವೋ ಅಲ್ಲಿಯವರೆಗೂ ರಾಮು ಅವರಂತಹ  ರೈತರ ತೊಳಲಾಟ ನಿಲ್ಲುವುದಿಲ್ಲ ಎನ್ನುವುದು ಮಾತ್ರ ಸತ್ಯ.

ಇದನ್ನೂ ಓದಿ:

ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು

ಬಿತ್ತನೆಗೂ ಸೈ, ಕುಂಟೆ ಹೊಡೆಯೋದ್ದಕ್ಕೂ ಜೈ; ಯಾದಗಿರಿಯ 70ರ ಇಳಿವಯಸ್ಸಿನ ವೃದ್ಧೆಯ ಕೃಷಿ ಕಾಯಕ ಇತರರಿಗೆ ಮಾದರಿ

(Seeds company sells fake seeds and farmers facing huge loss and angry on seeds company in Hubli)