ಸಿತಾರ್‌ ರತ್ನ ರಹಿಮತ್‌ ಖಾನ್‌ 68ನೇ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಡಿ.2ರಿಂದ ಸಂಗೀತ ಕಾರ್ಯಕ್ರಮ

ಸಿತಾರ್‌ ರತ್ನ ರಹಿಮತ್‌ ಖಾನ್‌ ಅವರ 68ನೇ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಸಂಗೀತ ಪ್ರೇಮಿಗಳಿಗೆ ಮೂರು ದಿನಗಳ ಕಾಲ ಸಂಗೀತ ಔತಣ ಕಾರ್ಯಕ್ರಮ ಡಿ.2ರಿಂದ ಆರಂಭವಾಗಲಿದೆ.

ಸಿತಾರ್‌ ರತ್ನ ರಹಿಮತ್‌ ಖಾನ್‌ 68ನೇ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಡಿ.2ರಿಂದ ಸಂಗೀತ ಕಾರ್ಯಕ್ರಮ
ಸಿತಾರ್‌ ರತ್ನ ರಹಿಮತ್‌ ಖಾನ್‌ 68ನೇ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದಲ್ಲಿ ಡಿ.2ರಿಂದ ಸಂಗೀತ ಕಾರ್ಯಕ್ರಮ
Follow us
TV9 Web
| Updated By: Rakesh Nayak Manchi

Updated on:Dec 01, 2022 | 12:56 PM

ಧಾರವಾಡ: ಧಾರವಾಡ ಘರಾಣಾ ಸಂಸ್ಥಾಪಕ ಸಿತಾರ್‌ ರತ್ನ ರಹಿಮತ್‌ ಖಾನ್‌ (Sitar Ratna Rahimat Khan) ಅವರ 68ನೇ ಪುಣ್ಯಸ್ಮರಣೆ (Death anniversary) ಅಂಗವಾಗಿ ಧಾರವಾಡದ ಸೃಜನಾ ಆಡಿಟೋರಿಯಂನಲ್ಲಿ ಡಿ.2ರಿಂದ ಮೂರು ದಿನಗಳ ಕಾಲ ಸಂಗೀತ ಔತಣ ಕಾರ್ಯಕ್ರಮ (Music Program) ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಶುಕ್ರವಾರ ಸಂಜೆ 5.30ಕ್ಕೆ ಓಂಕಾರ್ ನಾಗರಾಜರಾವ್ ಹವಾಲದಾರ್ ಅವರ ಹಿಂದೂಸ್ತಾನಿ ಗಾಯನದೊಂದಿಗೆ ತೆರೆ ಕಾಣಲಿದೆ. ತಬಲಾ ವಾದಕ ಶ್ರೀಧರ ಮಾಂಡ್ರೆ ಹಾಗೂ ಹಾರ್ಮೋನಿಯಂ ವಾದಕ ಸಮೀರ್ ಹವಾಲ್ದಾರ್ ಸಾಥ್ ನೀಡಲಿದ್ದಾರೆ. ರಾಜೇಂದ್ರ ಕುಲಕರ್ಣಿ ಅವರು ರಘುನಾಥ್ ನಾಕೋಡ್ ತಬಲಾ ವಾದನದೊಂದಿಗೆ ಕೊಳಲು ವಾದನದ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.

ಶನಿವಾರ ಸಂಜೆ 5.30ಕ್ಕೆ ಹಿಂದೂಸ್ತಾನಿ ಗಾಯಕಿ ಶಾಶ್ವತಿ ಚೌಹಾಣ್ (ಪುಣೆ) ಅವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂನಲ್ಲಿ ಬಸವರಾಜ ಹಿರೇಮಠ ಅವರು ಸಾಥ್ ನೀಡಲಿದ್ದಾರೆ. ನಂತರ ವಿದ್ವಾನ್ ನಾಗರಾಜ್ ಮತ್ತು ಮಂಜುನಾಥ್ ಅವರಿಂದ ಪಿಟೀಲು ಜುಗಲ್ಬಂದಿ ನಡೆಯಲಿದೆ. ವಿದ್ವಾನ್ ಜಯಚಂದ್ರರಾವ್ ಮೃದಂಗದಲ್ಲಿ ಮತ್ತು ರಾಜೇಂದ್ರ ನಾಕೋಡ್ ತಬಲಾದಲ್ಲಿ ದ್ವಂದ್ವ ವಾದನ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನ ಸ್ವಚ್ಛ ಮಹಾನಗರವಾಗಿಸಲು ಬಂದಿದ್ದ ಸ್ಮಾರ್ಟ್‌ ಸಿಟಿ ಯೋಜನೆ ಯಾವ ಕಸದ ಬುಟ್ಟಿ ಸೇರಿತೋ ಬಲ್ಲವರು ಯಾರು?

ಉಸ್ತಾದ್ ರಯೀಸ್ ಬಾಲೇಖಾನ್ (ಪುಣೆ) ಅವರು ಭಾನುವಾರ ಬೆಳಿಗ್ಗೆ 9.30ಕ್ಕೆ ಉದಯ್ ಕುಲಕರ್ಣಿ (ತಬಲಾ) ಮತ್ತು ಗುರುಪ್ರಸಾದ್ ಹೆಗ್ಡೆ (ಹಾರ್ಮೋನಿಯಂ) ಅವರೊಂದಿಗೆ ಗಾಯನ ವಾದನವನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ ಬೆಂಗಳೂರಿನ ವಿದುಷಿ ಪ್ರಿಯಾ ಗಣೇಶ್, ವಿದ್ವಾನ್ ಅನಿಲ್‌ಕುಮಾರ್, ಅವನಿ ಮತ್ತು ಶಾಲೋಮಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಸಂಜೆ 5 ಗಂಟೆಗೆ ಶಿವಮೊಗ್ಗದ ನೌಶಾದ್ ಮತ್ತು ನಿಶಾರ್ ಹರ್ಲಾಪುರ ಅವರ ಗಾಯನ ಜುಗಲ್ಬಂದಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಉಸ್ತಾದ್ ನಿಸ್ಸಾರ್ ಅಹಮದ್ ತಬಲಾ ವಾದನ ಮತ್ತು ಬಸವರಾಜ ಹಿರೇಮಠ ಹಾರ್ಮೋನಿಯಂ ವಾದನ ನಡೆಸಿಕೊಡಲಿದ್ದಾರೆ. ಇದಾದ ನಂತರ ಉಸ್ತಾದ್ ರಫೀಕ್ ಖಾನ್ (ಮಂಗಳೂರು) ಮತ್ತು ಸತ್ಯೇಂದ್ರ ಸೋಲಂಕಿ (ಭೋಪಾಲ್) ಅವರು ರಾಜೇಂದ್ರ ನಾಕೋಡ್ ತಬಲಾ ವಾದನದೊಂದಿಗೆ ಸಿತಾರ್ ಮತ್ತು ಸಂತೂರ್ ಜುಗಲ್ಬಂದಿ ನಡೆಸಿಕೊಟ್ಟು ಸಂಗೀತ ಪ್ರಿಯರನ್ನು ಮನರಂಜಿಸಲಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕನ್ನಡ ಬಾವುಟ ಹಾರಿಸಿದ್ದಕ್ಕೆ ಸಹಪಾಠಿಗಳು ಹೊಡೆದರು, ಠಾಣೆಗೆ ಕರೆದೊಯ್ದ ಡಿಸಿಪಿ ಬೂಟಗಾಲಿಂದ ಒದ್ದರು ಎಂದ ವಿದ್ಯಾರ್ಥಿ

ಮುಂಬೈನ ಪಂಡಿತ್ ಕೃಷ್ಣ ಭಟ್ ಅವರು ಗಾಯನ ಪ್ರಸ್ತುತಪಡಿಸುವ ಮೂಲಕ ಮೂರು ದಿನಗಳ ಸಂಭ್ರಮಕ್ಕೆ ತೆರೆ ಬೀಳಲಿದೆ. ರಘುನಾಥ ನಾಕೋಡ್ (ತಬಲಾ) ಮತ್ತು ಗುರುಪ್ರಸಾದ್ ಹೆಗ್ಡೆ (ಹಾರ್ಮೋನಿಯಂ) ಅವರು ಇವರಿಗೆ ಸಾಥ್ ನೀಡಲಿದ್ದಾರೆ. 1932 ರಲ್ಲಿ ಸಿತಾರ್ ರತ್ನ ರಹಿಮತ್ ಖಾನ್ ಅವರಿಂದ ಸ್ಥಾಪಿಸಲ್ಪಟ್ಟ ಭಾರತೀಯ ಸಂಗೀತ ವಿದ್ಯಾಲಯವು ಈ ಪ್ರದೇಶದಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದೆ.

ಸಾವಿರಾರು ಯುವಕರಿಗೆ ತರಬೇತಿ ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಸಿತಾರ್ ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಮತ್ತು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಕೇಂದ್ರವಾದ ಧಾರವಾಡದ ಶ್ರೀಮಂತ ಸಂಗೀತ ಸಂಪ್ರದಾಯವನ್ನು ಭಾರತೀಯ ಸಂಗೀತ ವಿದ್ಯಾಲಯವು ಉಳಿಸಿಕೊಂಡಿದೆ. ಇದು ಮೇರು ಕಲಾವಿದರಿಗೆ ಮಾತ್ರವಲ್ಲದೆ ಕಿರಿಯರಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Thu, 1 December 22