ರಾಜ್ಯ ಸರಕಾರಕ್ಕೆ ಕೇಂದ್ರ ಸರ್ಕಾರದಿಂದ ಸ್ಮಾರ್ಟ್ ಸಿಟಿ (Smart city) ಕಾಮಗಾರಿಗೆ ಸಾವಿರಾರು ಕೋಟಿ ಅನುದಾನ ಹೊಳೆಯಾಗಿ ಹರಿಯುತ್ತಿದೆ. ಆದರೆ ಅನುದಾನದ ಸದ್ಬಳಕೆ ಮಾತ್ರ ನಿರೀಕ್ಷೆಯಂತೆ ಆಗ್ತಿಲ್ಲ. ಯದ್ವಾತದ್ವಾ ದುಂದು ವೆಚ್ಚ ಮಾಡಿ ಹಣ ಹೇಗೆಲ್ಲಾ ದುರ್ಬಳಕೆ ಆಗ್ತಿದೆ ಗೊತ್ತಾ? ಹುಬ್ಬಳ್ಳಿ (Hubballi) ಧಾರವಾಡ (Dharwad) ಮಹಾನಗರದಲ್ಲಿ ಸ್ಮಾರ್ಟ್ ಸಿಟಿ (Hubballi Dharwad Smart City) ಕಾಮಗಾರಿ ನಡೆಯುತ್ತಿದೆ.. ಹೆಚ್ಚು ಕಡಿಮೆ ಒಂದೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅವಳಿ ನಗರದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಯಾವುದೂ ನೆಟ್ಟಗೆ ಆಗಲಿಲ್ಲ.. ಯಾವುದಕ್ಕೂ ಸರಿಯಾದ ಲೆಕ್ಕಾಚಾರ ಇಲ್ಲ ಅಂತ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಶೀತಲ ಸಮರ ನಡೆದಿತ್ತು.. ಖುದ್ದು ಪಾಲಿಕೆಯ ಮೇಯರ್ ಈರೇಶ್ ಅಂಚಟಗೇರಿ ಸ್ಮಾರ್ಟ್ ಸಿಟಿ ಎಂ. ಡಿ. ಗೆ ಪತ್ರ ಬರೆದು ವಿವರ ಕೋರಿದ್ರು. ಯಾವುದಕ್ಕೂ ಎಂ.ಡಿ. ಉತ್ತರ ಕೊಡಲು ಮುಂದಾಗಲಿಲ್ಲ.. ಹೀಗಾಗಿ ಸಮರ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಸ್ಮಾರ್ಟ್ ಸಿಟಿ ಎಂ.ಡಿ. ಶಕೀಲ್ ಅಹ್ಮದ್ ತಲೆದಂಡ (Transfer) ಪಡೆದಿದೆ ಸರಕಾರ.. ಅವರ ಜಾಗಕ್ಕೆ ಹೊಸ ಎಂ.ಡಿ. ಐಎಎಸ್ ಅಧಿಕಾರಿ ಪ್ರಿಯಾಂಕರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ..
ಹುಬ್ಬಲ್ಲಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ನೂತನ ವ್ಯವಸ್ಥಾಪಕ:
ನಿರ್ದೇಶಕರನ್ನಾಗಿ ಐಎಎಸ್ ಅಧಿಕಾರಿ ಪ್ರಿಯಾಂಕ ಎಂ. ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಈ ಹುದ್ದೆಯಲ್ಲಿದ್ದ ಶಕೀಲ್ ಅಹ್ಮದ್‌ರನ್ನು ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ. ಪ್ರಿಯಾಂಕಾ ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದರು. ಶಕೀಲ್ ಅಹ್ಮದ್ ಅವರ ಕಾರ್ಯನಿರ್ವಹಣೆ ಬಗ್ಗೆ ಜನಪ್ರತಿನಿಧಿಗಳಿಂದ ಸಾಕಷ್ಟು ಆಕ್ಷೇಪಣೆಗಳು ಕೇಳಿ ಬಂದಿದ್ದವು.
ಇದನ್ನೂ ಓದಿ:
ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಇತ್ತೀಚೆಗೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವಾರ್ಷಿಕ ಸಭೆಯಲ್ಲಿ ಲೆಕ್ಕ ಪರಿಶೋಧನೆಯ ವರದಿಯ ಬಗ್ಗೆ ಬಹಿರಂಗವಾಗಿ ಸಂಶಯ ವ್ಯಕ್ತಪಡಿಸಿದ್ದರು. ಪೂರ್ಣಗೊಂಡಿರುವ ಯಾವೊಂದು ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸದಿರುವುದು, ಕಳಪೆ ಕಾಮಗಾರಿ, ಇತ್ಯಾದಿ ಲೋಪದೋಷಗಳನ್ನು ಅವರು ಪಟ್ಟಿ ಮಾಡಿದ್ದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಹ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅವಳಿ ನಗರಕ್ಕೆ ಕೇಂದ್ರ ಸರ್ಕಾರ ಅಷ್ಟೊಂದು ಅನುದಾನ ನೀಡುತ್ತಿದ್ರು ಪ್ರಯೋಜನ ಮಾತ್ರ ಶೂನ್ಯ ವಾಗಿತ್ತು ಎನ್ನುತ್ತಾರೆ ಬಸವರಾಜ್ ತೇರದಾಳ, ಎಎಪಿ ನಾಯಕ.
ತೊಳನಕೆರೆ ಮತ್ತು ಇಂದಿರಾ ಗ್ಲಾಸ್ ಹೌಸ್ ನವೀಕರಣ ಮತ್ತು ಹೆಗ್ಗೆರಿಯ ತರಕಾರಿ ಮಾರುಕಟ್ಟೆ ಬಿಟ್ರೆ ಬೇರೆ ಯಾವ ಕಾಮಗಾರಿ ಕೂಡ ಸಂಪೂರ್ಣವಾಗಿಲ್ಲ. ಮುಗಿದಿರುವ ಕಾಮಗಾರಿಗೆ ಬಳಕೆಯಾದ ಅನುದಾನ ಬಗ್ಗೆ ಅನುಮಾನ ಇದ್ದು ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಎಎಪಿ ಪಾರ್ಟಿ ಲೋಕಾಯುಕ್ತರಿಗೆ ದೂರು ನೀಡಿದೆ. ಇನ್ನು ಎಂ.ಡಿ ತಲೆ ದಂಡದಿಂದ ಇನ್ನಾದರೂ ಸ್ಮಾರ್ಟ್ ಸಿಟಿ ಕಾಮಗಾರಿ ಸರಿ ದಾರಿಗೆ ಬರುವುದೋ ಅಂತ ಕಾಡು ನೋಡಬೇಕಾಗಿದೆ.
ವರದಿ: ರಹಮತ್ ಕಂಚಗಾರ್ ಟಿವಿ9 ಹುಬ್ಬಳ್ಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ