ಸರಕಾರದ ಉದಾಸೀನದಿಂದ ದಾವಣಗೆರೆ ಹೈಟೆಕ್ ಮಂಡಕ್ಕಿ ಭಟ್ಟಿ ಸ್ಮಾರ್ಟ್ ಯೋಜನೆ ಇನ್ನೂ ಟೇಕಾಫ್ ಆಗುತ್ತಿಲ್ಲ: ಸಾವಿರಾರು ಕುಟುಂಬಗಳ ಪರದಾಟ
ಸ್ಮಾರ್ಟ್ ಸಿಟಿ ಕಲ್ಪನೆಯಲ್ಲಿ ಮಂಡಕ್ಕಿ ಸಹ ಸೇರಿಕೊಂಡಿದೆ. ಇನ್ನೇನು ಹೈಟೆಕ್ ಭಟ್ಟಿಗಳು ಆಗುತ್ತವೆ ಎಂಬ ನಿರೀಕ್ಷೆ ಬಹುತೇಕರಲ್ಲಿ ಇತ್ತು. ಆದ್ರೆ ಈಗ ಇಲ್ಲಿನ ಮಂಡಕ್ಕಿ ಭಟ್ಟಿಯನ್ನೆ ಬೇರೆ ಕಡೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ದು ಅಚ್ಚರಿಯನ್ನುಂಟು ಮಾಡಿದೆ.
ದಾವಣಗೆರೆ ಜಿಲ್ಲೆಯಲ್ಲಿ 786 ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ (Davanagere smart city) ಆಗುತ್ತಿದೆ. ದಾವಣಗೆರೆ ಬೆಣ್ಣೆ ದೋಸೆಯಷ್ಟೆ ಮಂಡಕ್ಕಿಗೆ (Mandakki) ಸಹ ಪ್ರಸಿದ್ಧಿಯಾಗಿರುವ ಜಿಲ್ಲೆ ಇದು. ಆದ್ರೆ ಇದನ್ನ ತಯಾರಿಸುವ ತಾಣ ಮಾತ್ರ ಭಯಾನಕವಾಗಿದೆ. ಸಾವಿರಾರು ಕುಟುಂಬಗಳ ಕಣ್ಣೀರು ಒರೆಸುವ ಪ್ಲಾನ್ ಇದಾಗಿತ್ತು. ನೂರಾರು ಕೋಟಿ ರೂಪಾಯಿ ಪ್ಲಾನ್ ಮಾಡಿದರೂ ಅನುಷ್ಠಾನಕ್ಕೆ ಮಾತ್ರ ಬರುತ್ತಿಲ್ಲ. ನೀವು ಅಭಿವೃದ್ಧಿ ಕೆಲ್ಸಾ ಮಾಡಿ, ಇಲ್ಲಾ ಬಿಡಿ. ನಮ್ಮನ್ನ ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಇಲ್ಲಿನ ಜನರೇ ಕೇಳುತ್ತಿದ್ದಾರೆ. ಇಲ್ಲಿದೆ ನೋಡಿ ಮಂಡಕ್ಕಿ (Puffed rice) ಫೈಟ್ ಸ್ಟೋರಿ.
ದಾವಣಗೆರೆ ಸ್ಮಾರ್ಟ್ ಸಿಟಿ ಆಗಲಿ, ಬಿಡಲಿ. ಇಲ್ಲಿನ ಧೂಳು ಹಾಗೂ ಮಂಡಕ್ಕಿ ಭಟ್ಟಿಯ ಹೊಗೆ ಕಾಟ ಮಾತ್ರ ತಪ್ಪಿದ್ದಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಇದು ಒಂದು ಅರ್ಥದಲ್ಲಿ ಸತ್ಯವೂ ಹೌದು. ಈ ಹಿಂದೆ ಸಹ ದಾವಣಗೆರೆ ಸ್ಮಾರ್ಟ್ ಸಿಟಿಗಳ ಪಟ್ಟಿಗೆ ಸೇರಿತ್ತು. ಸರ್ಕಾರ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಯುವ ಕಾಮಗಾರಿ ಇಲ್ಲಿನ 786 ಎಕರೆ ಪ್ರದೇಶದಲ್ಲಿ ಇಂತಹ ಕನಸಿನ ಸ್ಮಾರ್ಟ್ ಸಿಟಿ ತಲೆ ಎತ್ತಲಿದೆ. ಆದ್ರೆ ಮಂಡಕ್ಕಿ ಭಟ್ಟಿ ಸ್ಥಿತಿ ಮತ್ತು ಅಲ್ಲಿ ದುಡಿಯುತ್ತಿರುವ ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಆತಂಕ ಮಾತ್ರ ಇದ್ದೇ ಇದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇದಕ್ಕೊಂದು ಪ್ಲಾನ್ ಇದೆ. ಮಂಡಕ್ಕಿ ಹುರಿಯಲು ಅಧುನಿಕ ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಗೆ ಪ್ಲಾನ್ ಮಾಡಲಾಗಿದೆ. ಹೀಗಾಗಿ ಸ್ಮಾರ್ಟ್ ಸಿಟಿಯ ಕಲ್ಪನೆಯಲ್ಲಿ ಮಂಡಕ್ಕಿ ಸಹ ಸೇರಿಕೊಂಡಿದೆ. 376 ಕೋಟಿ ರೂಪಾಯಿ ಪ್ಲಾನ್ ಮಾಡಲಾಗಿತ್ತು. ಇನ್ನೇನು ಹೈಟೆಕ್ ಭಟ್ಟಿಗಳು ಆಗುತ್ತವೆ ಎಂಬ ನಿರೀಕ್ಷೆ ಬಹುತೇಕರಲ್ಲಿ ಇತ್ತು. ಆದ್ರೆ ಈಗ ಇಲ್ಲಿನ ಮಂಡಕ್ಕಿ ಭಟ್ಟಿಯನ್ನೆ ಬೇರೆ ಕಡೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ದು ಅಚ್ಚರಿಯನ್ನುಂಟು ಮಾಡಿದೆ. ಜೊತೆಗೆ ಇಲ್ಲಿನ ಭಟ್ಟಿ ಮಾಲೀಕರೇ ಸರ್ಕಾರದ ನಿರ್ಧಾರಗಳಿಗೆ ಬೇಸತ್ತು, ಬೇಕಿದ್ರೆ ನಮಗೆ ಸ್ಥಳಾಂತರ ಮಾಡಿ ಎಂದು ಕೇಳುತ್ತಿರುವುದಾಗಿ ಮಂಡಕ್ಕಿ ಭಟ್ಟಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಮಹ್ಮದ್ ಮುನ್ನಾ ಹೇಳುತ್ತಾರೆ.
ಸುಮಾರು ಒಂದು ಸಾವಿರ ಕುಟುಂಬಗಳು ಮಂಡಕ್ಕಿ ಭಟ್ಟಿಯ ಮೇಲೆ ಅವಲಂಭಿತವಾಗಿವೆ. ಮಂಡಕ್ಕಿ ಹುರಿಯಲು ಹಳೇ ಟೈಯರ್ ಗಳು ಮತ್ತು ವಿಷಕಾರಕ ಜಾಲಿ ಮರದ ಕಟ್ಟಿಗೆಗಳನ್ನ ಬಳಸುತ್ತಾರೆ. ಇದರಿಂದ ಭಾರೀ ಪ್ರಮಾಣದ ಹೊಗೆ ಬರುತ್ತದೆ. ಇಡೀ ನಗರದ ವಾತಾವರಣ ಕಲುಷಿತ ಗೊಳಿಸುತ್ತದೆ. ಮೇಲಾಗಿ ಇಲ್ಲಿನ ಕಾರ್ಮಿಕರ ಆರೋಗ್ಯದ ಮೇಲೆಯೂ ಪರಿಣಾಮವಾಗುತ್ತದೆ.
ಆದರೆ ಈಗ ಸ್ಮಾರ್ಟ್ ಸಿಟಿಯಲ್ಲಿ 24 ಗಂಟೆ ವಿದ್ಯುತ್, ವೈದ್ಯಕೀಯ ಸೇವೆ, ನೀರು ಪೂರೈಕೆ ಹಾಗೂ ಗುಣ ಮಟ್ಟದ ರಸ್ತೆಗಳು ನಿರ್ಮಾಣ ಆಗುತ್ತವೆ. ಇಲ್ಲಿನ ಸ್ಥಳೀಯ ಅದ್ಯತೆ ಇಟ್ಟುಕೊಂಡು ಪ್ಲಾನ್ ಮಾಡಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆ ಬಂದು ಎಷ್ಟೊ ವರ್ಷವಾಯಿತು. ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ.
ಈ ಬಗ್ಗೆ ಹಿಂದೆ ಸರ್ವೇ ಮಾಡಿಸಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಇಲ್ಲಿನ ಜನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು. ಟೈರ್ ಸುಟ್ಟು ಮಂಡಕ್ಕಿ ಮಾಡುವುದಕ್ಕೆ ಬ್ರೇಕ್ ಹಾಕಿದ್ದರು ಮಲ್ಲಿಕಾರ್ಜುನ. ಬಿಜೆಪಿ ಸರ್ಕಾರ ಸ್ಥಳಾಂತರದ ಬಗ್ಗೆ ಆಗಲಿ, ಜೊತೆಗೆ ಇಲ್ಲಿನ ಅಭಿವೃದ್ಧಿ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಕೆಲ್ಸ ಮಾಡಿಲ್ಲ ಎಂಬುದು ಎಸ್ ಎಸ್ ಮಲ್ಲಿಕಾರ್ಜುನ ಅವರ ಆರೋಪ.
ದಾವಣಗೆರೆಗೆ ಬಂದ ಬಹುತೇಕ ರಾಜಕಾರಣಿಗಳು ಇಲ್ಲಿ ಬಂದು ಭೇಟಿ ನೀಡಿ ಹೋಗುವುದು ಒಂದು ನಿಯಮ ಆದಂತಾಗಿದೆ. ಕಾರಣ ಇದಕ್ಕೆ ಹೈಟೆಕ್ ಸ್ಪರ್ಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದರು. ಹೀಗೆ ಒಂದಿಲ್ಲೊಂದು ಕಾರಣಕ್ಕೆ ಬೆಂಗಳೂರನ್ನ ಬಿಟ್ಟರೆ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ ದಾವಣಗೆರೆ. ಹೀಗಾಗಿ ಸ್ಥಳೀಯ ಅಂಶಗಳಿಗೆ ಆದ್ಯತೆ ನೀಡಿದ್ದರಿಂದ ನಿಜಕ್ಕೂ ಇದೊಂದು ಅದ್ಭುತ ಪ್ಲಾನ್ ಮಾಡಿದೆ ಸರ್ಕಾರ ಎನ್ನಲಾಗುತ್ತಿತ್ತು. ಆದ್ರೆ ಇಲ್ಲಿ ಆಗಿದ್ದೆ ಬೇರೆ. ಯೋಜನೆಯನ್ನೇನೋ ರೂಪಿಸಿದ್ದಾರೆ ಆದರೆ ಜಾರಿಗೆ ಬರುತ್ತಿಲ್ಲ. ಇಂತಹ ಭಟ್ಟಿಯನ್ನ ಬೇರೆ ಕಡೆ ಸ್ಥಳಾಂತರ ಮಾಡುವ ಪ್ಲಾನ್ ಮಾಡಿದೆ. ಆದ್ರೆ ಅದು ಮಾತ್ರ ಜಾರಿಗೆ ಬರುತ್ತಿಲ್ಲ. ಮಾಲೀಕರು ಹಾಗೂ ಕಾರ್ಮಿಕರು ಕಷ್ಟ ಅನುಭಸುತ್ತಿದ್ದಾರೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)
Published On - 11:24 am, Fri, 2 December 22