
ಹುಬ್ಬಳ್ಳಿ, ಡಿಸೆಂಬರ್ 01: ನೈಋತ್ಯ ರೈಲ್ವೆ (South Western Railway) ನವೆಂಬರ್ 2025ರಲ್ಲಿ ಸರಕು ಸಾಗಣೆ ಮತ್ತು ಆದಾಯದಲ್ಲಿ (revenue) ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದು, ಪ್ರಮುಖ ಕಾರ್ಯಾಚರಣಾ ಕ್ಷೇತ್ರಗಳಲ್ಲಿ ತನ್ನ ಸಕಾರಾತ್ಮಕ ಸಾಧನೆಯ ವೇಗವನ್ನು ಮುಂದುವರಿಸಿದೆ. ಈ ತಿಂಗಳು ವಲಯವು 4.469 ಮಿಲಿಯನ್ ಟನ್ ಮೂಲ ಸರಕು ಸಾಗಣೆಯನ್ನು ನಿರ್ವಹಿಸಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಸಾಧಿಸಿದ 3.941 ಮಿಲಿಯನ್ ಟನ್‌ಗಿಂತ ಶೇ 13.4 ಹೆಚ್ಚಾಗಿದೆ. ಕಚ್ಚಾ ಸಾಮಗ್ರಿ ಸ್ಟೀಲ್ ಕಾರ್ಖಾನೆಗೆ, ಪಿಗ್ ಐರನ್ ಮತ್ತು ಉಕ್ಕು, ಕಬ್ಬಿಣದ ಅದಿರು, ರಸಗೊಬ್ಬರ, ಕಂಟೇನರ್‌ಗಳು ಮತ್ತು ಇತರ ಸರಕುಗಳ ಹೆಚ್ಚು ಲೋಡಿಂಗ್ ಈ ಸಾಧನೆಗೆ ಕಾರಣವಾಗಿದೆ.
ಕಚ್ಚಾ ಸಾಮಗ್ರಿ ಸ್ಟೀಲ್ ಕಾರ್ಖಾನೆಗೆ (RMSP) 0.214 ಮಿಲಿಯನ್ ಟನ್ ಸಾಗಣೆಯೊಂದಿಗೆ ಶೇ 185 ಕ್ಕಿಂತ ಹೆಚ್ಚು ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ. ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು ಒಟ್ಟಿಗೆ ಶೇ 28.5 ಏರಿಕೆ ಕಂಡು 0.806 ಮಿಲಿಯನ್ ಟನ್‌ಗೆ ತಲುಪಿವೆ. ಕಲ್ಲಿದ್ದಲು ಲೋಡಿಂಗ್ 0.732 ಮಿಲಿಯನ್ ಟನ್ ಆಗಿದೆ. ಕಬ್ಬಿಣದ ಅದಿರು ಸಾಗಣೆ ಶೇ.6ರಷ್ಟು ಏರಿಕೆ ಕಂಡು 1.951 ಮಿಲಿಯನ್ ಟನ್ ಆಗಿದೆ. ರಸಗೊಬ್ಬರ ಲೋಡಿಂಗ್ 0.129 ಮಿಲಿಯನ್ ಟನ್ ಆಗಿ ಶೇ 40.2 ಬೆಳವಣಿಗೆ ಪಡೆದುಕೊಂಡಿದೆ. ಕಂಟೇನರ್ ಸಂಚಾರ ಶೇ 15.3 ಮತ್ತು ಇತರ ಸರಕುಗಳು ಶೇ 29.6ರಷ್ಟು ಏರಿಕೆಯನ್ನು ಕಂಡು, ನೈಋತ್ಯ ರೈಲ್ವೆಯ ಬಲವಾದ ಸರಕು ನಿರ್ವಹಣಾ ಸಾಮರ್ಥ್ಯ ಮತ್ತು ಕೈಗಾರಿಕಾ ಕ್ಷೇತ್ರದ ನಿರಂತರ ಬೇಡಿಕೆಯನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ! ಈ ಮಾರ್ಗದ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ
ನವೆಂಬರ್ 2025ರವರೆಗೂ ಒಟ್ಟು ಸರಕು ಸಾಗಣೆ 33.292 ಮಿಲಿಯನ್ ಟನ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ 28.34 ಮಿಲಿಯನ್ ಟನ್‌ಗಿಂತ ಶೇ 17.5 ಹೆಚ್ಚಾಗಿದೆ. RMSP, ಪಿಗ್ ಐರನ್ ಮತ್ತು ಸ್ಟೀಲ್, ಕಬ್ಬಿಣದ ಅದಿರು, ರಸಗೊಬ್ಬರ ಹಾಗೂ ಕಂಟೇನರ್ ಸರಕುಗಳಲ್ಲಿ ಕಂಡುಬಂದ ಸುಧಾರಣೆಗಳು ನೈಋತ್ಯ ರೈಲ್ವೆಯು ಹೆಚ್ಚುವರಿ ಸರಕುಗಳನ್ನು ಆಕರ್ಷಿಸುವಲ್ಲಿ ಮತ್ತು ಪಾಲುದಾರರೊಂದಿಗೆ ಸಮನ್ವಯ ಸುಧಾರಿಸುವಲ್ಲಿ ಸಾಧಿಸಿರುವ ಯಶಸ್ಸನ್ನು ತೋರಿಸುತ್ತವೆ.
ನವೆಂಬರ್ 2025ರಲ್ಲಿ ವಲಯವು ಆದಾಯದ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಪ್ರಯಾಣಿಕರ ಆದಾಯ 297 ರೂ ಕೋಟಿಯಾಗಿದ್ದು, ಇದು ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ 28.01 ಹೆಚ್ಚಾಗಿದೆ. ಸರಕು ಸಾಗಣೆ ಆದಾಯ 451.61 ಕೋಟಿ ರೂ ಆಗಿ ಶೇ 10.55 ಏರಿಕೆ ಕಂಡಿದೆ. ಇತರೆ ಕೋಚಿಂಗ್ ಆದಾಯ 26.67 ಕೋಟಿ ರೂ ಮತ್ತು ಇತರ ಆದಾಯ 15.53 ಕೋಟಿ ರೂ. ಆಗಿದೆ. ನವೆಂಬರ್ ತಿಂಗಳ ಒಟ್ಟು ಆದಾಯ 790.75 ಕೋಟಿ ರೂ ತಲುಪಿದ್ದು, ಇದು ಶೇ 15.17 ಒಟ್ಟಾರೆ ಬೆಳವಣಿಗೆಯನ್ನು ಪೂರೈಸಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು
ನವೆಂಬರ್ 2025ರವರೆಗೆ ಒಟ್ಟಾರೆ ಆದಾಯದಲ್ಲಿ ಕೂಡ ಗಣನೀಯ ಸುಧಾರಣೆ ಕಂಡುಬಂದಿದೆ. ಪ್ರಯಾಣಿಕರ ಆದಾಯ 2247 ಕೋಟಿ ರೂ ತಲುಪಿದ್ದು, ಇದು ಶೇ 6.67 ಹೆಚ್ಚಳ ಕಂಡಿದೆ. ಸರಕು ಆದಾಯ 3458 ಕೋಟಿ ರೂ ಏರಿಕೆಗೊಂಡಿದ್ದು, ಇದು ಶೇ 22.79 ಬೆಳವಣಿಗೆ ತಂದಿದೆ. ಇತರೆ ಕೋಚಿಂಗ್ ಆದಾಯ 221.96 ಕೋಟಿ ರೂ ಆಗಿದ್ದು, ಇತರ ಆದಾಯ 144.54 ಕೋಟಿ ರೂ. ಆಗಿದೆ. ಈ ಅವಧಿಯ ಒಟ್ಟು ಆದಾಯ 6072.31 ಕೋಟಿ ರೂ ತಲುಪಿದ್ದು, ಇದು ಹಿಂದಿನ ವರ್ಷಗಿಂತ ಶೇ15.12 ಹೆಚ್ಚಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:07 pm, Mon, 1 December 25