AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಿದ ನೈರುತ್ಯ ರೈಲ್ವೆ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ

ಇದು ಡಿಜಿಟಲ್ ಯುಗ, ವ್ಯವಹರಿಸುವ ಹಣದಿಂದಿಡಿದು ಮನೆಯ ಲಾಕರ್ ಸಹ ಡಿಜಿಟಲ್ ಆಗಿದೆ. ಇಷ್ಟು ದಿನ ಬ್ಯಾಂಕ್​ಗಳಿಗೆ ಸೀಮಿತವಾಗಿದ್ದ, ಡಿಜಿಟಲ್ ಲಾಕರ್ ಸಿಸ್ಟಮ್ ಇದೀಗ ರೈಲ್ವೆ ಇಲಾಖೆಗೂ ಕಾಲಿಟ್ಟಿದೆ. ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯ ಹೊಸತನ ನೀಡುತ್ತಿರುವ ನೈರುತ್ಯ ರೈಲ್ವೆ ವಿಭಾಗ, ಈಗ ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸೇಫ್ಟಿ ಲಾಕರ್ ವ್ಯವಸ್ಥೆ ಆರಂಭಿಸಿದ್ದು, ರಾಜ್ಯದ ಪ್ರಯಾಣಿಕರು ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಿದ ನೈರುತ್ಯ ರೈಲ್ವೆ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ ​1 ರಲ್ಲಿ ಸೇಫ್​ಕ್ಲಾಕ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ
ಶಿವಕುಮಾರ್ ಪತ್ತಾರ್
| Edited By: |

Updated on: Aug 16, 2023 | 8:15 AM

Share

ಹುಬ್ಬಳ್ಳಿ, ಆ.16: ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನೈರುತ್ಯ ರೈಲ್ವೆ(South Western Railway)ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ‌ ಬಾರಿಗೆ ಪ್ರಯಾಣಿಕರೇ ಸಿದ್ದಪಡಿಸಿಕೊಳ್ಳಬಹುದಾದ ಡಿಜಿಟಲ್ ಸೇಫ್ಟಿ ಲಾಕರ್​ಗಳನ್ನು ಪರಿಚಯಿಸಲಾಗಿದೆ. ಹೌದು, ಹುಬ್ಬಳ್ಳಿ(Hubballi)ಯ ಶ್ರೀ ಸಿದ್ಧಾರೂಢ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ ​1 ರಲ್ಲಿ ಸೇಫ್​ಕ್ಲಾಕ್ ಡಿಜಿಟಲ್ ಲಗೇಜ್ ಲಾಕರ್(Digital luggage locker)ಸೌಲಭ್ಯ ಆರಂಭಿಸಲಾಗಿದೆ. ಈ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಹೆಚ್ಚಿನ ಭದ್ರತೆಯನ್ನು ಹೊಂದಿರುವ ಐಒಟಿ ಆಧಾರಿತ ಸ್ಮಾರ್ಟ್ ​ಲಾಕರ್​ಗಳಾಗಿದ್ದು, ಪ್ರಯಾಣಿಕರು ತಮ್ಮ ಮೊಬೈಲ್​ಗೆ ಬರುವ ಒಟಿಪಿ ನಮೂದಿಸಿ, ಹಣ ಪಾವತಿಸಿ ಈ ಲಗೇಜ್ ಲಾಕರ್​ಗಳನ್ನು ಬಳಸಬಹುದಾಗಿದೆ.

40 ರೂಪಾಯಿಯಿಂದ ಅವಧಿಗೆ ತಕ್ಕಂತೆ 200 ರೂಪಾಯಿ ತನಕವೂ ಆನ್ ಲೈನ್​ನಲ್ಲಿ ಪೇಮೆಂಟ್

ಇನ್ನು ಮೀಡಿಯಂ, ಲಾರ್ಜ್, ಎಸ್ಟ್ರಾಲಾರ್ಜ್ ಸ್ಥಳಾವಕಾಶದಲ್ಲಿ ಈ ಲಾಕರ್ ಸೌಲಭ್ಯ ಒದಗಿಸಲಾಗಿದೆ. 24 ಗಂಟೆಯೂ ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. 40 ರೂಪಾಯಿಯಿಂದ ಅವಧಿಗೆ ತಕ್ಕಂತೆ 200 ರೂಪಾಯಿ ತನಕವೂ ಆನ್ ಲೈನ್​ನಲ್ಲಿ ಪೇಮೆಂಟ್ ಮಾಡಬಹುದಾಗಿದೆ. ಈ ಸ್ಮಾರ್ಟ್ ಲಗೇಜ್ ಲಾಕರ್​ಗಳು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿವೆ. ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಲಾಕರ್ ಅನ್ನು ಆಯ್ಕೆ ಮಾಡಿಕೊಂಡು, ಡಿಜಿಟಲ್ ವಿಧಾನದ ಮೂಲಕ ಹಣ ಪಾವತಿಸಿ ತಮ್ಮ ಲಗೇಜ್​ಗಳನ್ನು ಈ ಲಾಕರ್​ಗಳಲ್ಲಿ ಸುರಕ್ಷಿತವಾಗಿ ಇಡಬಹುದು.

ಇದನ್ನೂ ಓದಿ:ಮೈಸೂರು ವಿಭಾಗದ ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ 347ಕೋಟಿ ರೂ ಮಂಜೂರು, ಆ. 6ರಂದು ಮೋದಿ ಚಾಲನೆ

ಲಗೇಜ್​ಗೆ ಸಿಕ್ತು ಸುರಕ್ಷತೆ

ಇಷ್ಟು ದಿನ ನಿಂತುಕೊಂಡು, ಟೋಕನ್ ಪಡೆದು ಮ್ಯಾನುವೆಲ್​ನಲ್ಲಿ ಅಸುರಕ್ಷಿತವಾಗಿ ತಮ್ಮ ಲಗೇಜುಗಳನ್ನು ಇಡುತ್ತಿದ್ದ ಪ್ರಯಾಣಿಕರು, ಇದೀಗ ರೈಲ್ವೆ ಇಲಾಖೆಯ ನ್ಯೂ ಐಡಿಯಾಗೆ ಫಿದಾ ಆಗಿದ್ದಾರೆ. ಇನ್ನು ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಈ ಲಾಕರ್​ಗಳನ್ನು ತಯಾರಿಸಿದೆ. ಈ ಡಿಜಿಟಲ್ ಕ್ಲಾಕ್ ರೂಮ್ ಗುತ್ತಿಗೆಯನ್ನು ಟಿಕೆಟ್ ದರ ಹೊರತುಪಡಿಸಿದ ಆದಾಯ ಯೋಜನೆ ಅಡಿಯಲ್ಲಿ ನೀಡಲಾಗಿದೆ. ಇದರಿಂದ ರೈಲ್ವೆಗೆ ಆದಾಯ ದೊರೆಯುವುದರ ಜೊತೆಗೆ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಡಿಜಿಟಲ್ ಪಾವತಿ ಸೌಲಭ್ಯವನ್ನು ಒಳಗೊಂಡ ಕ್ಲಾಕ್ ರೂಮ್ ಸೇವೆ ದೊರೆಯಲಿದೆ. ಇದು ಪ್ರಾಯೋಗಿಕವಾಗಿದ್ದು, ಹಂತ ಹಂತವಾಗಿ ಲಾಕರ್​ಗಳ‌ನ್ನು ಹೆಚ್ಚಿಸುವ ಉದ್ದೇಶ ರೈಲ್ವೆ ವಿಭಾಗೀಯ ಮಂಡಳಿ ಹೊಂದಿದೆ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗೀಯ ಹಿರಿಯ ವಾಣಿಜ್ಯ ಅಧಿಕಾರಿ ಹರಿತ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಸದಾ ಒಂದಲ್ಲ ಒಂದು ರೀತಿಯ ಹೊಸತನದೊಂದಿಗೆ, ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿರುವ ನೈರುತ್ಯ ರೈಲ್ವೆ ವಿಭಾಗ, ಈಗ ಯುವ ಸಮುದಾಯದ ಚಿಂತನೆಗೆ ತಕ್ಕಂತೆ ಅಪ್ಡೇಟ್ ಆಗಿರುವುದು ಸಂತಸದ ವಿಷಯ. ಆದರೆ, ಇದು ಎಷ್ಟರಮಟ್ಟಿಗೆ ಸದುಪಯೋಗ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ