
ಹುಬ್ಬಳ್ಳಿ, ಏಪ್ರಿಲ್ 24: ಹುಬ್ಬಳ್ಳಿ (Hubli) ನಗರದಲ್ಲಿರುವ ಕಿಮ್ಸ್ ಆಸ್ಪತ್ರೆ (KIMS Hospital), ಉತ್ತರ ಕರ್ನಾಟಕ ಭಾಗದಲ್ಲಿ ರೋಗಿಗಳಿಗೆ ಸಂಜೀವಿನಿಯಾಗಿದೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಈ ಆಸ್ಪತ್ರೆಗೆ ಬರುತ್ತಾರೆ. ಅವರ ಆರೋಗ್ಯ ಸುಧಾರಣೆಗಾಗಿ, ಕಿಮ್ಸ್ನಲ್ಲಿ ವೈದ್ಯರು ಸೇರಿದಂತೆ ಬರೋಬ್ಬರಿ 1300 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಆರೋಗ್ಯ ಸುಧಾರಣೆಗಾಗಿ, ರೋಗಿಗಳ ಜೀವ ಉಳಿಸಲು ಹಗಲಿರಳು ದುಡಿಯುವ ಸಿಬ್ಬಂದಿ, ಇದೀಗ ತಮ್ಮ ಕುಟುಂಬವನ್ನು ಉಳಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿಗೆ ಸಕಾಲದಲ್ಲಿ ವೇತನ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಗ್ರೂಪ್ ಎ ದಿಂದ ಗ್ರೂಪ್ ಡಿ ವರಗಿನ ಸಿಬ್ಬಂದಿಗೆ ಕಳೆದ ಒಂದೂವರೆ ವರ್ಷದಿಂದ ಸಕಾಲದಲ್ಲಿ ವೇತನ ಪಾವತಿ ಆಗುತ್ತಿಲ್ಲ ಎನ್ನಲಾಗಿದೆ. ಕೆಲವು ಸಲ, ತಿಂಗಳ ಮಧ್ಯದಲ್ಲಿ ವೇತನವಾದರೆ, ಹಲವು ಸಲ ತಿಂಗಳ ಕೊನೆಯಲ್ಲಿ ವೇತನ ಪಾವತಿಯಾಗುತ್ತಿದೆಯಂತೆ. ಹೀಗಾದರೆ ನಾವು ಕುಟುಂಬ ನಡೆಸುವುದು ಹೇಗೆ? ಮನೆ ಬಾಡಿಗೆ, ಮಕ್ಕಳ ಫೀಸ್ ಸೇರಿದಂತೆ ದೈನಂದಿನ ಖರ್ಚು ವೆಚ್ಚವನ್ನು ನಿಬಾಯಿಸುವುದು ಹೇಗೆ ಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.
ವೇತನ ವಿಳಂಬ ಸಮಸ್ಯೆ ಬಗ್ಗೆ ಯಾರಾದರೂ ಬಹಿರಂಗವಾಗಿ ಮಾತನಾಡಿದರೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ.
ಕಿಮ್ಸ್ನಲ್ಲಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಸಿಗದೇ ಇರಲು ಮುಖ್ಯ ಕಾರಣ ಆರ್ಥಿಕ ಸ್ಥಿತಿ ಹದೆಗೆಟ್ಟಿರುವುದು. ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುವುದರಿಂದ, ವೇತನ ಹೊಂದಿಸಲಿಕ್ಕಾಗದೇ ಪರದಾಡುವಂತಾಗಿದೆ. ಹೀಗಾಗಿ ಕಿಮ್ಸ್, ವೈದ್ಯಕೀಯ ಶಿಕ್ಷಣ ಇಲಾಖೆಗೆ, ವೇತನ ಸೇರಿದಂತೆ ಖರ್ಚು ವೆಚ್ಚಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಅನೇಕ ಬಾರಿ ಮನವಿ ಮಾಡಿದೆ. ಆದರೆ ಸರ್ಕಾರ ಈವರೆಗೆ ಅನುದಾನ ನೀಡ್ತಿಲ್ಲ ಎನ್ನಲಾಗಿದೆ. ಕಿಮ್ಸ್ ಆದಾಯದಲ್ಲಿಯೇ ವೇತನ ಪಾವತಿ ಮಾಡುವಂತೆ ಸೂಚಿಸಿದೆ. ಒಂದಡೆ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿ ಸಿಬ್ಬಂದಿ ಪರದಾಡುವುದರ ಜೊತೆಗೆ ವೇತನಕ್ಕಾಗಿ ಪರದಾಡುವಂತಾಗಿದೆ. ಆದರೆ ಇನ್ನೊಂದೆಡೆ ಸರ್ಕಾರ ಕೂಡಾ ನೆರವಿಗೆ ಬಾರದೇ ಇರುವುದ ಅವರ ಸಂಕಷ್ಟವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಧಾರವಾಡದಲ್ಲೂ ಜನಿವಾರ ವಿವಾದ: ವಿದ್ಯಾರ್ಥಿ ತೆಗೆಯುತ್ತೇನೆಂದರು ಬಿಡದೆ ಕತ್ತರಿಸಿ ಬಿಟ್ಟರು!
ಹಣಕಾಸಿನ ವರ್ಷದ ಕೊನೆಯ ತಿಂಗಳು ಆಗಿದ್ದರಿಂದ ಕಳೆದ ತಿಂಗಳು, ಈ ತಿಂಗಳ ವೇತನ ಸ್ವಲ್ಪ ಹೆಚ್ಚು ಕಡಿಮೆಯಾಗಿರಬಹುದು. ಆದರೆ ಸಕಾಲದಲ್ಲಿ ವೇತನ ನೀಡಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಶ್ವಾಸನೆ ನೀಡಿದ್ದಾರೆ. ಆದರೆ ರೋಗಿಗಳಿಗಾಗಿ ಹಗಲಿರಳು ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳ ಮೊದಲ ವಾರದಲ್ಲಿಯೇ ಪ್ರತಿ ತಿಂಗಳು ವೇತನ ಸಿಗುವಂತಹ ವ್ಯವಸ್ಥೆ ಮಾಡಬೇಕಿದೆ.
Published On - 10:36 am, Thu, 24 April 25