ಹುಬ್ಬಳ್ಳಿಯಲ್ಲಿ ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ ಭೇಟಿ
ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ಇಡೀ ಕರ್ನಾಟಕದಲ್ಲಿ ಹಬ್ಬದ ಕಳೆಗಟ್ಟಿದ್ದು, ಪೂಜೆ ಪುನಸ್ಕಾರದಲ್ಲಿ ಭಕ್ತರು ತೊಡಗಿದ್ದಾರೆ. ಅದರಂತೆ ನಿನ್ನೆ ದಸರಾ ಹಬ್ಬದಲ್ಲಿ ಅಲ್ಲಿನ ಜನ, ಆ ದೇವರಿಗೆ ಭಯ ಭಕ್ತಿಯಿಂದ ಪೂಜೆ ಮಾಡಿದರು. ತಡರಾತ್ರಿವರೆಗೂ ಆ ಮೂರ್ತಿಗೆ ಪೂಜೆ ಮಾಡಿ ದಸರಾ ಹಬ್ಬ ಆಚರಣೆ ನೆರವೇರಿಸಿದರು. ಆದ್ರೆ, ಬೆಳಗಾಗುವವಷ್ಟರಲ್ಲಿ ಆ ಮೂರ್ತಿಯ ಕೈಗಳನ್ನೆ ಕಿಡಗೇಡಿಗಳು ಕಟ್ ಮಾಡಿದ್ದಾರೆ. ಅಷ್ಟಕ್ಕೂ ದೇವರ ಮೇಲೆ ವಿಕೃತಿ ಮೆರದಿದ್ದು ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.
ಹುಬ್ಬಳ್ಳಿ, ಅ.06: ಹುಬ್ಬಳ್ಳಿಯ ದೇಶಪಾಂಡೆ ನಗರದ ಅಪರ್ಣಾ ಅಪಾರ್ಟ್ಮೆಂಟ್ನಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿನ ದೇವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಹಬ್ಬದ ದಿನವೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಬೇಸರವನ್ನು ಮೂಡಿಸಿದೆ. ಏರಿಯಾದಲ್ಲಿ ನಡೆದ ಈ ಘಟನೆಯಿಂದ ಆತಂಕ ಕೂಡ ನಿರ್ಮಾಣವಾಗಿದೆ. 15 ವರ್ಷಗಳ ಹಿಂದೆ ಅಪರ್ಣಾ ಅಪಾರ್ಟ್ಮೆಂಟ್ನಲ್ಲಿನ ಎಲ್ಲರೂ ಸೇರಿ ದತ್ತಾತ್ರೇಯ ದೇವಸ್ಥಾನವನ್ನು ನಿರ್ಮಾಣ ಮಾಡಿ ದತ್ತಾತ್ರೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿದಿನವೂ ಕೂಡ ಪೂಜೆಯನ್ನು ಕೂಡ ನೆರವೇರಿಸಲಾಗುತ್ತಿತ್ತು. ನಿನ್ನೆ ರಾತ್ರಿ 2 ಗಂಟೆಯವರೆಗೂ ಇಲ್ಲಿ ಎಲ್ಲರೂ ಸೇರಿ ನವರಾತ್ರಿ ಹಬ್ಬವನ್ನು ಆಚರಣೆ ಮಾಡಿ ಹೋಗಿದ್ದಾರೆ. ಇಂದು ಬೆಳ್ಳಿಗ್ಗೆ ದೇವಸ್ಥಾನದ ಪೂಜಾರಿ ಬಂದಾಗ ದುಷ್ಕ್ರತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಾತನಾಡಿದ ದೇವಸ್ಥಾನದ ಪೂಜಾರಿ, ‘ರಾತ್ರಿ ದೇವಸ್ಥಾನದ ಬಾಗಿಲನ್ನು ಬೀಗ ಹಾಕಿ ಹೋಗಲಾಗಿತ್ತು. ಆದ್ರೆ, ಕಿಡಿಗೇಡಿಗಳು ಬೀಗವನ್ನು ಮೂರಿದಿಲ್ಲ, ಕಬ್ಬಿಣದ ರಾಡ್ ತಗೊಂಡು ಮೂರ್ತಿಯ ಕೈಗೆ ಹೊಡೆದು ನಾಲ್ಕು ಕೈ ಮೂರಿದಿರುವ ಅನುಮಾನ ಎದ್ದು ಕಾಣುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಕಬ್ಬಿಣದ ರಾಡ್ ಕೂಡ ಅಲ್ಲೇ ಬಿದ್ದಿದೆ ಎಂದರು. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿ 24 ಗಂಟೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ:ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಸ್ಥಳಕ್ಕೆ ಹುಬ್ಬಳ್ಳಿ ಉಪನಗರ ಪೊಲೀಸರು ಭೇಟಿ ನೀಡಿ, ಅಪಾರ್ಟ್ಮೆಂಟ್ನಲ್ಲಿನ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಜನರ ಧಾರ್ಮಿಕ ಭಾವನೆಗಳ ಜೊತೆ ಈ ದುಸ್ಕ್ರತ್ಯ ನಡೆಸಿದ ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧನ ಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ