Kalghatgi Thottilu: ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಸಿದ್ಧವಾಯಿತು ಜಗತ್ಪ್ರಸಿದ್ಧ ಕಲಘಟಗಿ ತೊಟ್ಟಿಲು

|

Updated on: Mar 10, 2023 | 6:54 PM

ಮಾರ್ಚ್​ 12ರಂದು ಧಾರವಾಡ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಉಡುಗೊರೆಯಾಗಿ ನೀಡಲು ಕಲಘಟಗಿ ತೊಟ್ಟಿಲು ಸಿದ್ಧವಾಗಿದೆ.

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿಯ ಬಣ್ಣದ ತೊಟ್ಟಿಲು (Kalaghatgi cradle) ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಜೊತೆಗೆ ಎಲ್ಲರಿಗೂ ಅಚ್ಚು ಮೆಚ್ಚು. ರಾಜಕಾರಣಿ, ಜನಪ್ರತಿನಿಧಿಗಳ ಮಕ್ಕಳು-ಮೊಮ್ಮಕ್ಕಳಿಗೆ, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಆಕರ್ಷಕ ತೊಟ್ಟಿಲು ಉಡುಗೊರೆಯಾಗಿ ನೀಡುವುದು ಹೊಸ ಟ್ರೆಂಡ್ ಆಗಿದೆ. ಈ ನಿಟ್ಟಿನಲ್ಲಿ ಕಲಘಟಗಿ ತೊಟ್ಟಿಲು ಈಗ ಮತ್ತೊಬ್ಬ ಮಹಾನ ವ್ಯಕ್ತಿಯ ಕೈಸೇರಲಿದೆ.

ಕಲಾವಿದನ ಕೈ ಚಳಕದಿಂದ ನೋಡುಗರ ಕಣ್ಮನ ಸೆಳೆಯುವ ಈ ಕಲಘಟಗಿ ತೊಟ್ಟಿಲು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಮಾರ್ಚ್​ 12ರಂದು ಧಾರವಾಡ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಐಐಟಿ ಉದ್ಘಾಟನೆ, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಕಲಘಟಗಿಯ ತೊಟ್ಟಿಲು ಉಡುಗೊರೆಯಾಗಿ ನೀಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಇದನ್ನೂ ಓದಿ: ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ; ಮೋದಿ ಭೇಟಿ ನೀಡಲಿರುವ ಈ ಕ್ಯಾಂಪಸ್ ಸ್ಪೆಷಾಲಿಟಿ ಏನು ಗೊತ್ತಾ?

ಮಾರುತಿ ಬಡಿಗೇರ ಮತ್ತು ಇತರರಿಂದ ತೊಟ್ಟಿಲು ಸಿದ್ಧ 

ಹಾವೇರಿಯ ಯಾಲಕ್ಕಿ ಮಾಲೆ, ಸಿದ್ಧಾರೂಢರ ಮೂರ್ತಿ, ಕಸೂತಿಯ ಶಾಲ್ ಸೇರಿದಂತೆ ಹಲವಾರು ಉಡುಗೊರೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಎರಡು-ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಮಾಡಿಕೊಂಡು ಬಂದಿರುವ ಕುಟುಂಬದ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ, ಶ್ರೀಶೈಲ ಬಡಿಗೇರ ಅವರು ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲು ತೊಟ್ಟಿಲು ತಯಾರಿಸಿದ್ದಾರೆ.

ಸಾಂಪ್ರದಾಯಿಕತೆಗೆ ಒತ್ತು

ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಘಟನೆಗಳು, ತುಂಟಾಟಗಳು, ಬೆಣ್ಣೆಯೊಂದಿಗೆ ಕೃಷ್ಣನ ಲೀಲೆಗಳನ್ನು ವರ್ಣಿಸುವಂತಹ ಸುಂದರ ಚಿತ್ರಗಳನ್ನು ಬಿಡಿಸಲಾಗಿದೆ. ತೊಟ್ಟಿಲಿನ ಸ್ಟ್ಯಾಂಡ್‌ಗೆ ಚಿಕ್ಕ ಗಂಟೆಗಳನ್ನು ಕಟ್ಟಿದ್ದು, ಕಣ್ಮನ ಸೆಳೆಯುವ ಬಣ್ಣಗಳಿಂದ ಅಲಂಕರಿಸಲಾಗಿದೆ. ತೇಗಿನ ಮರದಿಂದ ಮಾಡಿರುವ ತೊಟ್ಟಿಲಿಗೆ ಜೇಡಿಮಣ್ಣು, ಅಂಟು, ಅರಗು ಬಳಸಲಾಗಿದೆ. ಸಾಂಪ್ರದಾಯಿಕತೆಗೆ ಒತ್ತು ಕೊಡಲಾಗಿದೆ. ಅತ್ಯುತ್ತಮ ಗುಣಮಟ್ಟದ ಕಟ್ಟಿಗೆಗಳನ್ನು ಬಳಸಲಾಗಿದ್ದು, ಕನಿಷ್ಠ 100 ವರ್ಷ ಬಾಳಿಕೆ ಬರುತ್ತದೆ. ಶ್ರೇಷ್ಠ ಗುಣಮಟ್ಟ ಮತ್ತು ಕಡಿಮೆ ತೂಕದ ತೊಟ್ಟಿಲು ನಿರ್ಮಿಸಿದ್ದೇವೆ ಎಂದು ಮಾರುತಿ ಬಡಿಗೇರ ಹೇಳುತ್ತಾರೆ.

ಇದನ್ನೂ ಓದಿ: IIT Dharwad: ಪರಿಸರ ಸ್ನೇಹಿಯಾಗಿ ರೂಪುಗೊಂಡ ಧಾರವಾಡದ ಐಐಟಿ, ಕ್ಯಾಂಪಸ್​​ನಲ್ಲಿ ಏನೇನಿದೆ ವಿಶೇಷ? ಇಲ್ಲಿದೆ ನೋಡಿ

ಕಲಘಟಗಿಯ ಬಣ್ಣದ ತೊಟ್ಟಿಲಿಗೆ ಸಿನಿಮಾ ನಟರು ಕೂಡ ಮಾರು ಹೋಗಿದ್ದಾರೆ. ಯಶ್-ರಾಧಿಕಾ ಪಂಡಿತ್ ಮಗುವಿಗೆ ಅಂಬರೀಷ್ ಅಭಿಮಾನಿಯೊಬ್ಬರು ಇದೇ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು. ಮತ್ತು  ರಾಜಕುಮಾರ್ ಕುಟುಂಬಕ್ಕೆ ಸಹ ಈ ತೊಟ್ಟಿಲು ನೀಡಲಾಗಿದೆ.

ವರದಿ: ಶಿವಕುಮಾರ ಪತ್ತಾರ ಟಿವಿ9, ಹುಬ್ಬಳ್ಳಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:41 pm, Fri, 10 March 23