AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IIT Dharwad: ಪರಿಸರ ಸ್ನೇಹಿಯಾಗಿ ರೂಪುಗೊಂಡ ಧಾರವಾಡದ ಐಐಟಿ, ಕ್ಯಾಂಪಸ್​​ನಲ್ಲಿ ಏನೇನಿದೆ ವಿಶೇಷ? ಇಲ್ಲಿದೆ ನೋಡಿ

2852 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿ ಧಾರವಾಡ ಐಐಟಿ ರೂಪುಗೊಂಡಿದೆ. ಇದನ್ನು ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

IIT Dharwad: ಪರಿಸರ ಸ್ನೇಹಿಯಾಗಿ ರೂಪುಗೊಂಡ ಧಾರವಾಡದ ಐಐಟಿ, ಕ್ಯಾಂಪಸ್​​ನಲ್ಲಿ ಏನೇನಿದೆ ವಿಶೇಷ? ಇಲ್ಲಿದೆ ನೋಡಿ
ಧಾರವಾಡ ಐಐಟಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಕಿರಣ್ ಹನುಮಂತ್​ ಮಾದಾರ್
|

Updated on:Mar 10, 2023 | 12:55 PM

Share

ಧಾರವಾಡ: 2852 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿ ಧಾರವಾಡ ಐಐಟಿ ರೂಪುಗೊಂಡಿದೆ. ಪ್ರಕೃತಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡದೆ ಸುಮಾರು 18 ಬೃಹತ್ ಕಟ್ಟಡಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗಿದೆ. ಈ ಸ್ಥಾಯಿ ಕ್ಯಾಂಪಸ್ 65 ಎಕರೆ ಸಂರಕ್ಷಿತ ಅರಣ್ಯ ವಲಯ ಹೊಂದಿದ್ದು, ಅಲ್ಲಿನ ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೂ ಆಶ್ರಯ ತಾಣವಾಗಿದೆ. ಇದನ್ನು ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ಕ್ಯಾಂಪಸ್‌ನಲ್ಲಿ ಮೊದಲೇ ಇದ್ದ ಆರು ಚಿಕ್ಕ-ಚಿಕ್ಕ ಹಾಗೂ 400 ಮಾವಿನ ಗಿಡಗಳನ್ನು ಉಳಿಸಿಕೊಳ್ಳಲಾಗಿದೆ. ಹುಲ್ಲುಹಾಸು ನಿರ್ಮಾಣ ಮಾಡಲು ಮಣ್ಣಿನ ಮರುಪೂರಣ ಮಾಡಲಾಗಿದೆ. ಪ್ರತಿಯೊಂದು ಕಟ್ಟಡಕ್ಕೂ ಮಳೆ ನೀರು ಕೊಯ್ಲು ವ್ಯವಸ್ಥೆ, ಸೌರಶಕ್ತಿ ಬಳಕೆ, ಘನತ್ಯಾಜ್ಯ ವಿಲೇವಾರಿ ಘಟಕ ಆವರಣದ ವೈಶಿಷ್ಟ್ಯಗಳು. ಐಟಿಗೆ ಹೋಗುವ ಸುಮಾರು 2 ಕಿ.ಮೀ. ಉದ್ದದ ರಸ್ತೆಯನ್ನು ಕೂಡ ಕಟ್ಟಡ ಸಾಮಗ್ರಿ ತ್ಯಾಜ್ಯದಿಂದಲೇ ನಿರ್ಮಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ಶಬ್ದ ಮಾಲಿನ್ಯ ಉಂಟು ಮಾಡದೇ, ಇರುವ ಇಲೆಕ್ಟಿಕಲ್ ಬೈಕ್‌, ಕಾರು ಹಾಗೂ ಸೈಕಲ್‌ಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. 5 ಸಾವಿರ ಗಿಡಗಳನ್ನು ಆವರಣದಲ್ಲಿ ನೆಡಲಾಗಿದೆ.

ಆರಂಭದಿಂದಲೂ ವಿದ್ಯಾಕೇಂದ್ರವಾಗಿ ಗುರುತಿಸಿಕೊಂಡಿರುವ ಧಾರವಾಡದಲ್ಲಿ ಈಗಾಗಲೇ ಮೂರು ವಿಶ್ವವಿದ್ಯಾಲಯಗಳಿವೆ. ಜೊತೆಗೆ ಎರಡು ಡೀಮ್ಡ್ ವಿವಿಗಳಿವೆ. ಎಸ್‌ಡಿಎಂ ಮತ್ತು ಕೆಎಲ್‌ಇ ಸಂಸ್ಥೆಗಳ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಿವೆ. ಇಂಥದೊಂದು ಶೈಕ್ಷಣಿಕ ಪರಿಸರದಲ್ಲಿ ಐಐಟಿ ಸ್ಥಾಪನೆಯಾಗಬೇಕೆಂಬ ಕೂಗು ದಶಕಗಳಿಂದಲೂ ಕೇಳಿ ಬರುತ್ತಿತ್ತು. ಹಿಂದೆ ದಿ. ಎಸ್.ಆರ್.ಬೊಮ್ಮಾಯಿ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದಲ್ಲಿ ಐಐಟಿ ಸ್ಥಾಪನೆ ಮಾಡಲು ಆಸಕ್ತಿ ತೋರಿದ್ದರಾದರೂ ರಾಜಕೀಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ದೇಶದ 18 ರಾಜ್ಯಗಳಲ್ಲಿ ಐಐಟಿ ಕೇಂದ್ರಗಳಿವೆ. ಆದರೆ ರಾಜ್ಯದಲ್ಲಿ ಮಾತ್ರ ಇರಲಿಲ್ಲ. 2016ರಲ್ಲಿ ಕೇಂದ್ರ ಸರಕಾರವು ಬಜೆಟ್‌ನಲ್ಲಿ ರಾಜ್ಯಕ್ಕೆ ಪ್ರಥಮ ಐಐಟಿಯನ್ನು ಘೋಷಣೆ ಮಾಡಿತ್ತು.

ಇದನ್ನೂ ಓದಿ:ಉದ್ಘಾಟನೆಗೆ ಐಐಟಿ ರೆಡಿ: ಪ್ರಧಾನಿ ಆಗಮನಕ್ಕಾಗಿ ಎದುರು ನೋಡುತ್ತಿದೆ ವಿದ್ಯಾಕಾಶಿ ಧಾರವಾಡ! ಎಲ್ಲೆಡೆ ಮೋದಿ ಜೋಷ್ ಇದೆ ಎಂದ ಸಂಸದ ಪ್ರಲ್ಹಾದ ಜೋಶಿ

ಧಾರವಾಡದ ಮುಮ್ಮಿಗಟ್ಟಿ ಬಳಿ ಇರುವ 500 ಎಕರೆ ಸರಕಾರಿ ಜಾಗವನ್ನು ತಂಡವು ಪರಿಶೀಲನೆ ಮಾಡಿತಲ್ಲದೆ, ತಾತ್ಕಾಲಿಕವಾಗಿ ಐಐಟಿ ಕೇಂದ್ರ ಸ್ಥಾಪನೆಗೆ ಕೃಷಿ ವಿವಿಯ ಅತಿಥಿಗೃಹ, ಪೊಲೀಸ್ ತರಬೇತಿ ಶಾಲೆಯ ಸಂಕೀರ್ಣ ಮತ್ತು ಹೈಕೋರ್ಟ್ ಪಕ್ಕದಲ್ಲೇ ಇರುವ ವಾಲ್ಮಿಕಿ (ಜಲ ಮತ್ತು ಪರಿಸರ ಸಂಶೋಧನಾ ಸಂಸ್ಥೆ) ಕಟ್ಟಡವನ್ನು ಪರಿಶೀಲನೆ ಮಾಡಿತ್ತು. ರಾಯಚೂರು, ಮೈಸೂರುಗಳಿಗಿಂತಲೂ ಉತ್ತಮ ಶೈಕ್ಷಣಿಕ ವಾತಾವರಣದ ಜೊತೆಗೆ ಸಕಲ ಮೂಲಸೌಕರ್ಯ ಹೊಂದಿರುವ ಹಿನ್ನೆಲೆಯಲ್ಲಿ ಧಾರವಾಡದಲ್ಲೇ ಐಐಟಿ ಸ್ಥಾಪನೆಗೆ ತಂಡವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಒಟ್ಟಾರೆಯಾಗಿ ಧಾರವಾಡ, ರಾಜ್ಯದ ವಿದ್ಯಾಕೇಂದ್ರವಾಗಿ ಗುರುತಿಸಿಕೊಂಡಿದ್ದು, ರಾಜ್ಯದ ಪ್ರಪ್ರಥಮ ಐಐಟಿ ಸ್ಥಾಪನೆಯೊಂದಿಗೆ ತನ್ನ ವಿದ್ಯಾಕಾಶಿಯ ಮುಕುಟಕ್ಕೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಂತಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Fri, 10 March 23