ಧಾರವಾಡ: ಕೃಷಿಗೆ ಮುಖ್ಯ ಆಧಾರವಾಗಬೇಕಿದ್ದ ಹವಾಮಾನ ಕೇಂದ್ರಕ್ಕೆ ಬೀಗ; ಏನಿದರ ಕಥೆ ಅಂತೀರಾ, ಈ ಸ್ಟೋರಿ ನೋಡಿ
ಅದು ಉತ್ತರ ಕರ್ನಾಟಕ ಭಾಗದ ರೈತರ ಪಾಲಿಗೆ ಕೃಷಿಗೆ ಮುಖ್ಯ ಆಧಾರವಾಗಬೇಕಿದ್ದ ಹವಾಮಾನ ಕೇಂದ್ರ. ಆರಂಭಗೊಂಡಾಗ ಎಲ್ಲರಲ್ಲಿಯೂ ಒಳ್ಳೆ ಉತ್ಸಾವವೇ ಇತ್ತು. ಆದರೆ ಆರಂಭದಲ್ಲಿ ಇದ್ದ ಉತ್ಸಾಹ ಕಡಿಮೆಯಾಗಿದ್ದರಿಂದಲೋ ಅಥವಾ ಸಂಬಂಧಿಸಿದವರ ನಿರ್ಲಕ್ಷ್ಯದಿಂದಲೋ ರೈತರ ಪಾಲಿಗೆ ಹವಾಮಾನ ದಿಕ್ಸೂಚಿಯಾಗಬೇಕಿದ್ದ ಆ ಕೇಂದ್ರ ಈಗ ಬೀಗ ಹಾಕಿರುವ ಸ್ಥಿತಿಗೆ ಬಂದಿದೆ.
ಧಾರವಾಡ: ಹೀಗೆ ಬೀಗ ಹಾಕಿಕೊಂಡಿರುವ ಇದು ಉತ್ತರ ಕರ್ನಾಟಕದ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರ. ನೇರವಾಗಿ ಕೇಂದ್ರ ಸರ್ಕಾರದಿಂದಲೇ ನಡೆಯುವ ಈ ಕೇಂದ್ರ ನಮ್ಮ ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಇರುವುದು ಧಾರವಾಡದಲ್ಲಿ ಮಾತ್ರ. ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕೂವರೆ ವರ್ಷಗಳ ಹಿಂದೆ ಇದು ಉದ್ಘಾಟನೆಗೊಂಡಿದೆ. ಆದರೆ ಉದ್ಘಾಟನೆಯಾಗಿದ್ದು ಬಿಟ್ಟರೆ ಈ ಕೇಂದ್ರ ಕಾರ್ಯವನ್ನೇ ಮಾಡಿಲ್ಲ. ಕೇಂದ್ರದ ಹಿಂದಿನ ಅವಧಿಯ ಬಿಜೆಪಿ ಸರ್ಕಾರದಲ್ಲಿ ಭೂ ವಿಜ್ಞಾನ ಖಾತೆ ಸಚಿವರಾಗಿದ್ದ ಡಾ. ಹರ್ಷವರ್ಧನ ಈ ಕೇಂದ್ರವನ್ನು ಉದ್ಘಾಟಿಸಿದ್ದರು. ಆದರೆ ಇನ್ನೂವರೆಗೂ ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದಾಗಿ 12 ಜಿಲ್ಲೆಗಳ ರೈತರು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಹವಾಮಾನ ಮನ್ಸೂಚನೆಯಿಂದ ವಂಚಿತರಾಗಿದ್ದಾರೆ.
ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯವು ಭಾರತ ಹವಾಮಾನ ಇಲಾಖೆಯ ಅಡಿಯಲ್ಲಿ ಬೆಂಗಳೂರು ನಂತರದಲ್ಲಿ ಇಡೀ ಉತ್ತರ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಈ ಹವಾಮಾನ ಮುನ್ಸೂಚನಾ ಕೇಂದ್ರ (ಎನ್‌ಕೆಎಎಫ್‌ಸಿ) ಆರಂಭಿಸಲಾಗಿದೆ. ಉದ್ಘಾಟನೆ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಬದಲಾಯಿತು. ಉದ್ಘಾಟನೆ ಮಾಡಿದ್ದ ಡಾ. ಹರ್ಷವರ್ಧನರ ಖಾತೆಯೂ ಬದಲಾಯಿತು. ಅಂದು ಸಂಸದರಾಗಿ ಉದ್ಘಾಟನೆಗೆ ಬಂದಿದ್ದ ಪ್ರಹ್ಲಾದ ಜೋಶಿ ಈಗ ಕೇಂದ್ರದಲ್ಲಿ ಸಚಿವರೂ ಹೌದು, ಇಷ್ಟೆಲ್ಲ ಬದಲಾದರೂ ರೈತರಿಗೆ ಆಶಾಕಿರಣವಾಗಬೇಕಿದ್ದ ಈ ಕೇಂದ್ರದ ನಸೀಬು ಮಾತ್ರ ಬದಲಾಗಿಲ್ಲ.
ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಶಾಸ್ತ್ರ ವಿಭಾಗದಲ್ಲಿ ಪ್ರತ್ಯೇಕವಾಗಿ ಎರಡು ಕೊಠಡಿಗಳನ್ನು ಈ ಕೇಂದ್ರಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ಒಂದು ಕೊಠಡಿಯಲ್ಲಿ ಎರಡು ಕಂಪ್ಯೂಟರ್, ಒಂದಷ್ಟು ಹವಾಮಾನ ಅಧ್ಯಯನದ ಪಟಗಳು ಬಿಟ್ಟರೇ ಬೇರೇನೂ ಇಲ್ಲ. ಈ ಹಿಂದೆ ತಾತ್ಕಾಲಿಕವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹವಾಮಾನ ಅಧಿಕಾರಿಯನ್ನೇ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿದ್ದರು. ಅವರು ವಿಮಾನ ನಿಲ್ದಾಣದ ಜೊತೆಗೆ ಈ ಕೇಂದ್ರವನ್ನೂ ನೋಡಿಕೊಳ್ಳಬೇಕಿರುವುದರಿಂದ ಅದು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡ ಯಾರ ಗಮನಕ್ಕೂ ತಂದಿರಲಿಲ್ಲ. ಶೀಘ್ರವೇ ಅದಕ್ಕೆ ಪುನಶ್ಚೇತನ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.
ಈ ಕೇಂದ್ರವು ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಕೇಂದ್ರ ಹವಾಮಾನ ಇಲಾಖೆಯಿಂದ ನಡೆಯುತ್ತದೆ. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಉತ್ತರ ಕರ್ನಾಟಕ ಭಾಗದ ಹಮಾವಾನ ಮುನ್ಸೂಚನೆ ತಿಳಿಯಲು ತುಂಬಾ ಅನುಕೂಲ ಆಗುತ್ತದೆ. ಆದಷ್ಟು ಬೇಗ ಈ ಕೇಂದ್ರ ಆರಂಭವಾಗಲಿ ಎಂದು ಈ ಭಾಗದ ರೈತರು ಸಹ ಕೇಳಿಕೊಳ್ಳುತ್ತಿದ್ದಾರೆ. ರೈತರ ಬೇಡಿಕೆ ಈಡೇರುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ