ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಹತ್ಯೆ ಪ್ರಕರಣ; ವಿನಯ್ ಕುಲಕರ್ಣಿಗೆ ಕಂಟಕವಾಗುತ್ತಾ 36 ಸಾಕ್ಷಿಗಳು?

ಜೂನ್ 15, 2016 ರ ಬೆಳಗಿನ ಜಾವ ಧಾರವಾಡದ ಸಪ್ತಾಪುರ ಬಡಾವಣೆಯ ಉದಯ ಜಿಮ್​ನಲ್ಲಿ ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ್​ ಗೌಡರನ್ನು ಬರ್ಬರವಾಗಿ ಕೊಲೆಗೈಯಲಾಗಿತ್ತು.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಹತ್ಯೆ ಪ್ರಕರಣ; ವಿನಯ್ ಕುಲಕರ್ಣಿಗೆ ಕಂಟಕವಾಗುತ್ತಾ 36 ಸಾಕ್ಷಿಗಳು?
ಮಾಜಿ ಸಚಿವ ವಿನಯ್ ಕುಲಕರ್ಣಿ
Follow us
| Updated By: sandhya thejappa

Updated on:Aug 28, 2021 | 10:21 AM

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ (Yogesh Gowda) ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಇದೀಗ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ಹೀಗೆ ಬಂದಿರುವ ವಿನಯ್ ಕುಲಕರ್ಣಿಗೆ ಯಾವುದೇ ಕಾರಣಕ್ಕೂ ಸ್ವಂತ ಜಿಲ್ಲೆ ಧಾರವಾಡಕ್ಕೆ ಆಗಮಿಸಲು ಅವಕಾಶವಿಲ್ಲ. ಇದಕ್ಕೆಲ್ಲಾ ಕಾರಣ ಪ್ರಕರಣದ ಮೇಲೆ ವಿನಯ್ ಪ್ರಭಾವ ಬೀರುವ ಸಾಧ್ಯತೆ ಇದೆ ಅನ್ನೋ ಅನುಮಾನ. ಈ ಮಧ್ಯೆ ಸಿಬಿಐ ತನಿಖೆ ವೇಳೆ ವಿನಯ್ಗೆ ಕಂಟಕವಾಗುವ ಅನೇಕ ಅಂಶಗಳು ಕಂಡು ಬಂದಿವೆ. ಅದರಲ್ಲೂ ಸಿಬಿಐ ಪ್ರಕರಣಕ್ಕೆ ಸಾಕ್ಷಿಯಾಗಿ ಬಳಸಿಕೊಂಡಿದ್ದವರ ಸಂಖ್ಯೆಯನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಅದರಲ್ಲೂ ಅನೇಕರು ನೇರವಾಗಿ ನ್ಯಾಯಾಧೀಶರ ಮುಂದೆಯೇ ಸಾಕ್ಷಿ ಹೇಳಿರುವುದು ವಿನಯ್ ಪಾಲಿಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಐದು ವರ್ಷಗಳ ಹಿಂದಿನ ಕೇಸು; ಮಾಜಿ ಸಚಿವನಿಗೂ ಸುತ್ತಿಕೊಂಡ ಉರುಳು ಜೂನ್ 15, 2016 ರ ಬೆಳಗಿನ ಜಾವ ಧಾರವಾಡದ ಸಪ್ತಾಪುರ ಬಡಾವಣೆಯ ಉದಯ ಜಿಮ್​ನಲ್ಲಿ ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ್​ ಗೌಡರನ್ನು ಬರ್ಬರವಾಗಿ ಕೊಲೆಗೈಯಲಾಗಿತ್ತು. ಆತನದ್ದೇ ಜಿಮ್​ನಲ್ಲಿ ಆತನ ಹುಡುಗರ ಎದುರೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ನಡೆದ ಬಳಿಕ ಉಪನಗರ ಠಾಣೆಯ ಪೊಲೀಸರು ಬಸವರಾಜ ಮುತ್ತಗಿ ಸೇರಿ ಆರು ಜನರನ್ನು ಬಂಧಿಸಿದ್ದರು. ಅವರೇ ಕೊಲೆಗಾರರು ಅಂತಾ ಅವರ ವಿರುದ್ಧ ಆರೋಪ ಪಟ್ಟಿಯನ್ನು ಕೂಡ ಸಲ್ಲಿಸಲಾಗಿತ್ತು. ಆದರೆ ಈ ಕೊಲೆ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಅಂತಾ ಯೋಗೀಶ್ ಕುಟುಂಬಸ್ಥರು ಆರೋಪಿಸುತ್ತಲೇ ಬಂದಿದ್ದರು. ಆದರೆ ಯಾವಾಗ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ ಆಗ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಪ್ರಕರಣದ ತನಿಖೆ ಸಿಬಿಐ ಕೈಗೆ ಹೋಗುತ್ತಲೇ ತನಿಖೆಯ ದಾರಿಯೇ ಬದಲಾಗಿ ಹೋಗಿತ್ತು. ಆರಂಭದಲ್ಲಿಯೇ ಸಿಬಿಐ ಈ ಕೊಲೆಯನ್ನು ಮಾಡಿದ್ದು ಬೇರೆಯವರು ಅಂತಾ ಗುರುತಿಸಿತ್ತು. ಅಲ್ಲದೇ ಬೆಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಿತ್ತು.

ಇದಾದ ಬಳಿಕ ನಿಧಾನವಾಗಿ ಈ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡವಿರೋದಾಗಿ ಆರೋಪಿಸಿ, 2020ರ ನವೆಂಬರ್ 5 ರಂದು ಬಂಧಿಸಿತ್ತು. ಅದಾದ ಬಳಿಕ ನಡೆದ ಅನೇಕ ಘಟನೆಗಳು ಅಚ್ಚರಿ ಮೂಡಿಸಿದ್ದವು. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು, ವಿನಯ್ ಕುಲಕರ್ಣಿ ಆಪ್ತ ಬಸವರಾಜ ಮುತ್ತಗಿ ಕೊಲೆಗೆ ಸ್ಕೆಚ್ ರೂಪಿಸಿದ್ದರು ಎನ್ನಲಾದ ಪ್ರಕರಣ. ಈ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು ಹತ್ಯೆ ಮಾಡಿಸಲು ಸ್ವತಃ ವಿನಯ್ ಕುಲಕರ್ಣಿ ಅವರೇ ಸುಪಾರಿ ನೀಡಿದ್ದರು ಎನ್ನುವ ಆರೋಪ ಅಚ್ಚರಿ ಮೂಡಿಸಿತ್ತು. ಈ ಘಟನೆ ವಿನಯ್ ಹಾಗೂ ಮುತ್ತಗಿ ನಡುವೆ ಮುನಿಸು ಉಂಟಾಗಲು ಕಾರಣವೂ ಆಗಿತ್ತು. ಇಂಥ ಅನೇಕ ವಿಚಾರಗಳ ನಡುವೆ ಗಮನ ಸೆಳೆದ ವಿಚಾರವೆಂದರೆ ಸಿಬಿಐ ಸಾಕ್ಷಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು. ಸಾಕ್ಷಿಗಳು ಗಟ್ಟಿಯಾದ್ದರಷ್ಟೇ ಕೊಲೆಗಾರರಿಗೆ ಶಿಕ್ಷೆ ಆಗುತ್ತೆ. ಹೀಗಾಗಿ ಸಿಬಿಐ ಅನೇಕ ಸಾಕ್ಷಿಗಳನ್ನು ಸೆಕ್ಷನ್ 164ರ ಅಡಿ ಸಾಕ್ಷಿ ಮಾಡಿಸಿತು. ಇದೇ ಮಾಜಿ ಸಚಿವ ವಿನಯ್ ಕುಲಕರ್ಣಿ ಪಾಲಿಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೊದಲಿಗೆ 16, ಆದರೆ ಇದೀಗ 36? ಇತ್ತೀಚಿನ ದಿನಗಳವರೆಗೂ ಪ್ರಕರಣದಲ್ಲಿ ಒಟ್ಟು 16 ಜನರು ಸೆಕ್ಷನ್ 164ರ ಅಡಿ ತಮ್ಮ ಸಾಕ್ಷಿಯನ್ನು ಹೇಳಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ತಿಳಿದು ಬಂದಿರುವ ಅಂಶವೆಂದರೆ, ಹೀಗೆ ಸೆಕ್ಷನ್ 164ರ ಅಡಿ ಸಾಕ್ಷಿ ದಾಖಲಿಸಿದವರ ಸಂಖ್ಯೆ ಬರೋಬ್ಬರಿ 36 ಎನ್ನಲಾಗಿದೆ. ಯಾವುದೇ ಕೇಸ್ ಆದರೂ ಅದು ಗಟ್ಟಿಯಾಗಿ ನಿಲ್ಲುವುದು ಸಾಕ್ಷಿಗಳ ಮೇಲೆಯೇ. ಸಾಕ್ಷಿಗಳು ಸರಿಯಾಗಿಲ್ಲ ಅಂದರೆ ಅಲ್ಲಿಗೆ ಕೇಸ್ ಕಥೆ ಮುಗಿದಂತೆಯೇ. ಇದೇ ಕಾರಣಕ್ಕೆ ಸಿಬಿಐ ಸಾಕ್ಷಿಗಳ ವಿಚಾರವಾಗಿ ಗಂಭೀರವಾಗಿ ಯೋಚನೆ ಮಾಡಿದೆ. ಯಾವುದೇ ಕಾರಣಕ್ಕೂ ಸಾಕ್ಷಿಗಳು ಮುಂದಿನ ದಿನಗಳಲ್ಲಿ ಉಲ್ಟಾ ಹೊಡೆಯಬಾರದು ಎನ್ನುವ ಕಾರಣಕ್ಕೆ ಸೆಕ್ಷನ್ 164ರ ಅಡಿಯಲ್ಲಿ 36 ಜನರ ಸಾಕ್ಷಿ ದಾಖಲಿಸಲಾಗಿದೆಯಂತೆ. ಇದೇ ಮುಂದಿನ ದಿನಗಳಲ್ಲಿ ವಿನಯ್ ಕುಲಕರ್ಣಿಗೆ ಮುಳುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ 36 ಸಾಕ್ಷಿಗಳ ಪೈಕಿ ಅನೇಕರು ಸರಕಾರಿ ನೌಕರರು ಕೂಡ ಇದ್ದಾರೆ ಎನ್ನಲಾಗಿದೆ. ಈ ವಿಚಾರವಂತೂ ಕೇಸು ಗಟ್ಟಿಯಾಗಲು ಮತ್ತಷ್ಟು ಅವಕಾಶ ಕಲ್ಪಿಸುತ್ತದಂತೆ. ಏಕೆಂದರೆ ಸಾಮಾನ್ಯವಾಗಿ ಸರಕಾರಿ ನೌಕರರು ಒಂದು ಬಾರಿ ನ್ಯಾಯಾಧೀಶರ ಮುಂದೆ ಸಾಕ್ಷಿ ನುಡಿದರೆ ಮುಂದಿನ ದಿನಗಳಲ್ಲಿ ವಿಚಾರಣೆ ವೇಳೆ ಉಲ್ಟಾ ಹೊಡೆಯೋದು ತುಂಬಾನೇ ಕಷ್ಟ. ಒಂದು ವೇಳೆ ಉಲ್ಟಾ ಹೊಡೆದರೆ ಅದರಿಂದ ಅವರ ಸರಕಾರಿ ನೌಕರಿಗೆ ತೊಂದರೆಯುಂಟಾಗುತ್ತದೆ. ಹೀಗಾಗಿ ಅವರು ಉಲ್ಟಾ ಹೊಡೆಯೋ ಸಾಧ್ಯತೆ ತೀರಾನೇ ಕಡಿಮೆ ಎನ್ನಲಾಗಿದೆ. ಇದೇ ಸಿಬಿಐ ಪಾಲಿಗೆ ಅನುಕೂಲವಾದರೆ ಇತ್ತ ವಿನಯ್ ಕುಲಕರ್ಣಿ ಪಾಲಿಗೆ ಕಂಟಕವಾಗಲಿದೆ.

ಈ ಸಾಕ್ಷಿಗಳ ಪೈಕಿ ಅನೇಕರು ವಿನಯ್ ಕುಲಕರ್ಣಿ ಆಪ್ತರು ಅಂತಾ ಹೇಳಲಾಗಿದೆ. ಇವುಗಳನ್ನೇ ಮುಂದಿಟ್ಟುಕೊಂಡು ಸಿಬಿಐ ಕುಣಿಕೆ ಸಿದ್ಧಗೊಳಿಸುತ್ತಿದೆಯಂತೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಸಾಕ್ಷಿ ನುಡಿಸುವ ಜನರು ಬಳಿಕ ಕೋರ್ಟನಲ್ಲಿ ಉಲ್ಟಾ ಹೊಡೆದು ಬಿಟ್ಟಿರುತ್ತಾರೆ. ಇದರಿಂದಾಗಿ ಕೇಸುಗಳು ಬಿದ್ದು ಹೋಗುತ್ತವೆ. ಇದೇ ಕಾರಣಕ್ಕೆ ಸಾಕ್ಷಿಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳದಂತೆ ಬಲೆ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರಕಾರದ ನಡೆ ಸರಿಯೋ? ತಪ್ಪೋ? ಈ ಮಧ್ಯೆ ಸುಪ್ರೀಂಕೋರ್ಟ್ನ ಸೂಚನೆಯಂತೆ ಬೆಂಗಳೂರಿನ ಹೈಕೋರ್ಟ್​ನಲ್ಲಿ ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಸರಿಯೋ ತಪ್ಪೋ ಎನ್ನುವುದರ ಬಗ್ಗೆ ವಿಚಾರಣೆ ಮುಂದುವರೆದಿದೆ. ಎರಡು ತಿಂಗಳಲ್ಲಿ ಈ ಬಗ್ಗೆ ಹೈಕೋರ್ಟ್ ಪ್ರಕರಣವನ್ನು ಇತ್ಯರ್ಥಗೊಳಿಸಬೇಕಿದೆ. ಟಿವಿ9 ಡಿಜಿಟಲ್​ಗೆ ಪ್ರತಿಕ್ರಿಯಿಸಿರುವ ವಿನಯ್ ಪರ ವಕೀಲ ಆನಂದ ಕೊಳ್ಳಿ, ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ತಪ್ಪು ಅಂತಾ ನಾವು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದೇವೆ. ಅದಾಗಲೇ ಉಪನಗರ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ ಸಾಕ್ಷಿಗಳ ಹೇಳಿಕೆಯೂ ಮುಗಿದಿತ್ತು. ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿದ್ದಾಗ ಸರಕಾರ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿತು. ಇದು ಸರಿಯಾದ ಕ್ರಮವಲ್ಲ ಅಂತಾ ನಾವು ಕೋರ್ಟ್​ಗೆ ಹೋಗಿದ್ದೇವೆ. ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ಕೂಡ ಎರಡು ತಿಂಗಳೊಳಗೆ ಇದನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್​ಗೆ ಸೂಚನೆಯನ್ನು ನೀಡಿದೆ. ಈ ಬಗ್ಗೆ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಮಾಜಿ ಸಚಿವರಿಗೆ ಉಳಿದಿರುವ ಒಂದೇ ಆಶಾಕಿರಣ ಕಳೆದ ವರ್ಷ ನವೆಂಬರ್ 5 ರಂದು ಸಿಬಿಐ ಕೈಯಿಂದ ಬಂಧಿತರಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಒಂಬತ್ತೂವರೆ ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು. ಆಗಸ್ಟ್ 11 ರಂದು ಸುಪ್ರೀಂಕೋರ್ಟ್ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಅಂತಾ ಹೇಳಿದ್ದ ಸುಪ್ರೀಂಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿತ್ತು. ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ. ಸಾಕ್ಷಿ ನಾಶ ಮಾಡುವಂತಿಲ್ಲ. ವಾರಕ್ಕೆ ಎರಡು ಬಾರಿ ಬೆಂಗಳೂರಿನ ಸಿಬಿಐ ಕಚೇರಿಗೆ ಭೇಟಿ ನೀಡಬೇಕು ಅಂತಾ ಷರತ್ತು ವಿಧಿಸಿತ್ತು. ಸುಪ್ರೀಂಕೋರ್ಟ್ ಜಾಮೀನು ನೀಡಿದ್ದರೂ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿ ನಾಶ ಪ್ರಕರಣದಲ್ಲಿ ಜಾಮೀನು ಸಿಗಬೇಕಿತ್ತು. ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ವಿನಯ್ ಪರ ವಕೀಲರು ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆಗಸ್ಟ್ 19 ರಂದು ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡಿತು. ಆಗಸ್ಟ್ 21 ರಂದು ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಿಂದ ಹೊರಗೆ ಬಂದಿದ್ದರು. ಅವತ್ತೇ ಅವರು ಬೆಂಗಳೂರಿಗೆ ಹೋದರು. ಇದೀಗ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅವರ ಪಾಲಿಗೆ ಇದೀಗ ಆಶಾದಾಯಕ ಸಂಗತಿ ಅಂದರೆ ಅದು ಹೈಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ

ಜೈಲಿನಿಂದ ಹೊರಬಂದ ವಿನಯ್​ ಕುಲಕರ್ಣಿ ಮೇಲೆ 2 ಹೊಸ ಕೇಸ್;​ ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿದ ಬೆಂಬಲಿಗರ ವಿರುದ್ಧವೂ ಪ್ರಕರಣ

ಜೈಲಿನಿಂದ ಬಿಡುಗಡೆಯಾಗುವ ವಿನಯ್ ಕುಲಕರ್ಣಿ ಸ್ವಾಗತಕ್ಕೆ ರಾಖಿ ಹಿಡಿದು ನಿಂತಿರುವ ಲಕ್ಷ್ಮೀ ಹೆಬ್ಬಾಳ್ಕರ್

(There are 36 Evidence against former minister Vinay Kulkarni)

Published On - 10:17 am, Sat, 28 August 21