ಧಾರವಾಡ, ಅ.01: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ಯುವಕರಿಬ್ಬರು ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ (Saundatti Yellamma Temple) ಕೇವಲ 12 ಗಂಟೆಗಳಲ್ಲಿ ಪಾದಯಾತ್ರೆ (Padayatre) ಮೂಲಕ ತೆರಳಿ ದರ್ಶನ ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ. ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ಮಹಾಂತೇಶ ಯಲ್ಲಪ್ಪ ಅರಳಿಹೊಂಡ ಹಾಗೂ ಗಂಗಪ್ಪ ಗಿರೇಪ್ಪಗೌಡರ ಎಂಬ ಯುವಕರೇ ಸಾಧನೆ ಮಾಡಿದವರು. ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ ಮೂಲಕ ತೆರಳಿ ಹರಿಕೆ ತೀರಿಸಿರುವ ಈ ಯುವಕರು ಹೋಗುವ, ಬರುವ ದಾರಿ ಸೇರಿ ಸುಮಾರು 120 ಕಿ.ಮೀ ದೂರವನ್ನು ಕೇವಲ 12 ಗಂಟೆಯಲ್ಲಿ ಪೂರ್ಣಗೊಳಿಸಿದ್ದು ವಿಶೇಷವಾಗಿದೆ.
ಮಹಾಂತೇಶ ಅರಳಿಹೊಂಡ, ಗಂಗಪ್ಪ ಗಿರೇಪ್ಪಗೌಡ ಅವರ ಜೊತೆ ಇನ್ನೂ 9 ಯುವಕರು ಪಾದಯಾತ್ರೆ ಮಾಡಿದ್ದಾರೆ. ಜಿ.ಬಸವನಕೊಪ್ಪ ಗ್ರಾಮದವರೇ ಆದ ಬಸವರಾಜ ಅಂಗಡಿ, ರಮೇಶ ಹರಿಜನ, ಮಲ್ಲಿಕಾರ್ಜುನ ಅರಳಿಹೊಂಡ, ಸಿದ್ರಾಮ ಮಡಿವಾಳರ, ನಿಂಗಪ್ಪ ಮಡಿವಾಳರ, ಪ್ರಕಾಶ ಮಡಿವಾಳರ, ಮಲ್ಲಿರ್ಕಾಜುನ ಗಿರೇಪ್ಪಗೌಡರ, ನಿರಂಜನ ಹೂಗಾರ, ಮಂಜುನಾಥ ಹುಡೇದ ಎಂಬ ಯುವಕರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಹಿರಿಯರ ಸಮ್ಮುಖದಲ್ಲಿ 11 ಯುವಕರು ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ ಮೂಲಕ ತೆರಳಿ ದೇವಿ ದರ್ಶನ ಪಡೆಯುವ ಹರಿಕೆ ಹೊತ್ತಿದ್ದರು. ಗ್ರಾಮದಿಂದ ಬೆಳಗ್ಗೆ ಬಿಟ್ಟು ಯಲ್ಲಮ್ಮನ ಗುಡ್ಡಕ್ಕೆ ತೆರಳಿ ದೇವಿ ದರ್ಶನ ಪಡೆದು ಸಂಜೆ 6 ಗಂಟೆ ವೇಳೆಗೆ ಮರಳಿ ಗ್ರಾಮಕ್ಕೆ ಬರಬೇಕು ಎಂಬ ಶರ್ಯತ್ತು ವಿಧಿಸಲಾಗಿತ್ತು. ಅದರಂತೆ ಯುವಕರು ಬೆಳಗ್ಗೆ 6ಕ್ಕೆ ಗ್ರಾಮದಿಂದ ಯಲ್ಲಮ್ಮನ ಗುಡ್ಡಕ್ಕೆ ಪಯಣ ಬೆಳೆಸಿದ್ದರು.
ಇದನ್ನೂ ಓದಿ: ಹಬ್ಬದ ಪ್ರಯುಕ್ತ ಸ್ಪರ್ಧೆ ಆಯೋಜನೆ, 16 ವರ್ಷದ ಯುವಕರಿಂದ ವಿನೂತನ ಸಾಧನೆ, ಎಲ್ಲಿ?
ಧಾರವಾಡ, ಅಮ್ಮಿನಭಾವಿ, ಇನಾಂಹೊಂಗಲ, ಹಾರೋಬೆಳವಡಿ, ಸವದತ್ತಿ ಮಾರ್ಗವಾಗಿ 11 ಯುವಕರು ಸುಕ್ಷೇತ್ರ ತಲುಪಿದ್ದರು. ಕೆಲವರು ಮೊದಲು, ಇನ್ನೂ ಕೆಲವರು ಆನಂತರ ಯಲ್ಲಮ್ಮನ ಗುಡ್ಡ ತಲುಪಿದ್ದರು. ಆದರೆ ಮಹಾಂತೇಶ ಅರಳಿಹೊಂಡ, ಗಂಗಪ್ಪ ಗಿರೇಪ್ಪಗೌಡ ಇಬ್ಬರು ಯುವಕರು ಮಾತ್ರ ಸುಕ್ಷೇತ್ರ ತಲುಪಿ ದೇವಿ ದರ್ಶನ ಪಡೆದು ನಿಗದಿತ ಸಮಯಕ್ಕೆ ಮರಳಿ ಗ್ರಾಮಕ್ಕೆ ತಲುಪಿ ಸಾಹಸ ಮೆರೆದಿದ್ದಾರೆ.
ನಿಗದಿತ ಸಮಯಕ್ಕೆ ಮರಳಿ ಗ್ರಾಮಕ್ಕೆ ಆಗಮಿಸಿದ ಮಹಾಂತೇಶ ಅರಳಿಹೊಂಡ, ಗಂಗಪ್ಪ ಗಿರೇಪ್ಪಗೌಡ ಅವರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಅರ್ಜುನ ಅಂಗಡಿ, ಗುರುಸಿದ್ಧಯ್ಯ ಹುಬ್ಬಳ್ಳಿಮಠ, ಬಸಯ್ಯ ದುರುದುಡಿಮಠ, ಚಂದ್ರಕಾಂತ ಹಡಪದ, ಗದಿಗೆಪ್ಪ ಪಲ್ಲೇದ ಅವರ ನೇತೃತ್ವದಲ್ಲಿ ಮಹಾಂತೇಶ ಹಾಗೂ ಗಂಗಪ್ಪ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಮೆರವಣಿಗೆ ನಡೆಸಿ ಸನ್ಮಾನಿಸಿ ಗೌರವಿಸಿದ್ದಾರೆ.
ಒಂದು ದಿನದಲ್ಲಿ 40-50 ಕಿ.ಮೀ ದೂರ ಪಾದಯಾತ್ರೆ ಮಾಡುವುದನ್ನು ಕೇಳಿದ್ದೇವೆ. ಸುಮಾರು 120 ಕಿ.ಮೀ ದೂರವನ್ನು ಕೇವಲ 12 ಗಂಟೆಯಲ್ಲಿ ಕ್ರಮಿಸಿದ್ದು ಸುಲಭದ ಮಾತಲ್ಲ. ಇಂತಹ ಸಾಹಸ ಮೆರೆದಿರುವ ನಮ್ಮೂರಿನ ಯುವಕರ ಧೈರ್ಯ-ಸ್ಥೈರ್ಯ ಶ್ಲಾಘನೀಯವಾದದ್ದು. ಯುವಕರು ಜಿ.ಬಸವನಕೊಪ್ಪ ಗ್ರಾಮದ ಕೀರ್ತಿ-ಗೌರವ ಹೆಚ್ಚಿಸಿದ್ದಾರೆ ಎಂದು ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.
120 ಕಿ.ಮೀ ನಡೆದು ಸಾಗುವ ಗುರಿ ಅಷ್ಟು ಸುಲಭವಾಗಿರಲಿಲ್ಲ. ಬೆಳಗ್ಗೆ ನಡೆದು ಹೋಗುವುದು ಅಷ್ಟೊಂದು ಕಷ್ಟವಿರಲಿಲ್ಲ. ಆದರೆ ಮಧ್ಯಾಹ್ಯ ಆಗುತ್ತಿದಂತೆ ಆಯಾಸ ಹೆಚ್ಚಾಗುತ್ತಿತ್ತು. ಆದರೂ ಛಲ ಬಿಡಲಿಲ್ಲ. ಗ್ರಾಮದ ಹಿರಿಯರು-ಸ್ನೇಹಿತರು ಪ್ರೋತ್ಸಾಹದಿಂದ ಈ ಕಾರ್ಯಸಾಧನೆ ಆಗಿದೆ. ಯಲ್ಲಮ್ಮನ ಆಶೀರ್ವಾದ ನಮ್ಮ ಮೇಲಿತ್ತು ಎಂದು ಮಹಾಂತೇಶ ಹಾಗೂ ಗಂಗಪ್ಪ ಸಾಹಸಿ ಯುವಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ