ಧಾರವಾಡ ಲೋಕಸಭಾ ಕ್ಷೇತ್ರದ ವಿವಿಧ ಶಾಲೆಗಳಿಗೆ 50 ಶಾಲಾ ಕೊಠಡಿ ಮಂಜೂರು – ಪ್ರಲ್ಹಾದ್ ಜೋಶಿ
ಮಳೆಯಿಂದ ಶಿಥಿಲಗೊಂಡ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿರುವ ಶಾಲೆಗಳಿಗೆ ಕೊಠಡಿಯನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ 4 ಪ್ರೌಢ ಶಾಲೆ ಹಾಗೂ 27 ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ.
ಹುಬ್ಬಳ್ಳಿ : ಧಾರವಾಡ ಲೋಕಸಭಾ ವ್ಯಾಪ್ತಿಯ (Dharwad Lok Sabha) ವಿವಿಧ ಶಾಲೆಗಳಿಗೆ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿ.ಎಸ್.ಆರ್ Corporate social responsibility -CSR)) ಅಂಗವಾಗಿ 50 ಹೆಚ್ಚುವರಿ ಶಾಲಾ ಕೊಠಡಿಗಳು (school rooms) ಮಂಜೂರಾಗಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಎಸ್.ಆರ್ ಅಡಿ ಹೆಚ್ಚುವರಿ ಶಾಲಾ ಕೊಠಡಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಸ್ತಾವನೆ ಸಲ್ಲಿಸಿದ್ದರು.
ವಿವಿಧ ಪ್ರಾಥಮಿಕ ಶಾಲೆಗಳಿಗೆ 50 ಹೆಚ್ಚುವರಿ ಶಾಲಾ ಕೊಠಡಿಗಳನ್ನು ವಿವೇಕ ಶಾಲೆ ಯೋಜನೆಯಡಿ ರಾಜ್ಯ ಸರ್ಕಾರ ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 13.90 ಲಕ್ಷ ರೂ. ಮತ್ತು ಪ್ರೌಢ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 16.40 ಲಕ್ಷ ರೂ ಕ್ರಿಯಾ ಯೋಜನೆಯಲ್ಲಿ ನಮೂದಿಸಲಾಗಿದ್ದು, ಅದರಂತೆ ಅನುದಾನವೂ ಬಿಡುಗಡೆಯಾಗಿದೆ ಎಂದು ಪ್ರಕಣೆಯಲ್ಲಿ ಹೇಳಲಾಗಿದೆ.
ಮಳೆಯಿಂದ ಶಿಥಿಲಗೊಂಡ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿರುವ ಶಾಲೆಗಳಿಗೆ ಕೊಠಡಿಯನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ 4 ಪ್ರೌಢ ಶಾಲೆ ಹಾಗೂ 27 ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ. ಕುಂದಗೋಳ, ತಾಲೂಕಿನ 5, ಹುಬ್ಬಳ್ಳಿ ಗ್ರಾಮೀಣ 6, ಮತ್ತು ಹುಬ್ಬಳ್ಳಿ ಶಹರದಲ್ಲಿ 5 ಶಾಲಾ ಕೊಠಡಿಗಳನ್ನು ಸೇರಿದಂತೆ 16 ಶಾಲಾ ಕೊಠಡಿಗಳನ್ನು 229 ಲಕ್ಷ ರೂ ವೆಚ್ಚದಲ್ಲಿ ಮಂಜೂರು ಮಾಡಿದ್ದು, ಧಾರವಾಡ ಗ್ರಾಮೀಣ 8, ಕಲಘಟಗಿ 7, ನವಲಗುಂದ 4 ಹೀಗೆ ಒಟ್ಟು 26 ಶಾಲಾ ಕೊಠಡಿಗಳನ್ನು 375 ಲಕ್ಷರೂ ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ.
ಜಿಲ್ಲೆಯಲ್ಲಿ ಸಾಕಷ್ಟು ಶಾಲೆಗಳು ಕಟ್ಟಡ ಕೊರತೆ ಎದುರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿತ್ತು. ಈ ಯೋಜನೆಯಿಂದ ಕೊಠಡಿ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಸರಕಾರಿ ಶಾಲೆಗಳಿಗೆ ನೂತನ ಕೊಠಡಿ ಭಾಗ್ಯ ಲಭಿಸಲಿದೆ. ವಿವೇಕ ಯೋಜನೆಯಡಿ ಜಿಲ್ಲೆಯಲ್ಲಿ 50 ಕೊಠಡಿಗಳು ನಿರ್ಮಾಣವಾಗಲಿವೆ. ಈಗಾಗಲೇ ಅನುಮೋದನೆಗೊಂಡು ಕಾಮಗಾರಿಗೂ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಕೊಠಡಿಗಳು ವಿದ್ಯಾರ್ಥಿಗಳ ಬಳಕೆಗೆ ಮುಕ್ತವಾಗಲಿವೆ ಎಂದು ಸಚಿವ ಜೋಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಸಿ.ಎಸ್.ಆರ್. ಅಡಿ 300 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 150 ಕೊಠಡಿ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಿ.ಇ.ಓ. ಧಾರವಾಡ ಎಂ.ಓ.ಯು. ಮಾಡಿಕೊಂಡಿದ್ದು, ಟೆಂಡರ್ ಹಂತದಲ್ಲಿದೆ. ಇನ್ನೂ 150 ಕೊಠಡಿಗಳ ಪ್ರಸ್ತಾವನೆಗಳು ಅನುಮತಿ ಹಂತದಲ್ಲಿವೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಅವಶ್ಯವಿರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಎಲ್ಲ ರೀತಿಯಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.
ಜ. 1ಕ್ಕೆ ಧಾರವಾಡ ಐಐಟಿ ಕಟ್ಟಡ ಉದ್ಘಾಟನೆ ತಯಾರಿಗೆ ಕೇಂದ್ರ ಸಚಿವ ಜೋಶಿ ಸೂಚನೆ -ಪ್ರಧಾನಿ ಮೋದಿಯವರಿಂದ ಉದ್ಘಾಟನೆ
ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಐಐಟಿ ಕಟ್ಟಡ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಇಂದು ಪರಿಶೀಲಿಸಿದರು. ಜನವರಿ 1 ರೊಳಗೆ ನೂತನ ಕಟ್ಟಡ ಕಾಮಗಾರಿ ಮುಗಿಸುವಂತೆ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದ್ದಾರೆ.
ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿಯವರು, ಧಾರವಾಡ ಐಐಐಟಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲು ಒಪ್ಪಿದ್ದಾರೆ. ಡಿಸೆಂಬರ್ ನಲ್ಲೇ ಉದ್ಘಾಟನೆಗೆ ಯೋಜಿಸಲಾಗಿತ್ತು. ಆದರೆ ಕಾಮಗಾರಿಯ ಕೆಲಸ ಮುಗಿಯದ ಕಾರಣ ಜನವರಿ 1 ಕ್ಕೆ ಉದ್ಘಾಟನೆ ಮಾಡಲು ಚಿಂತಿಸಲಾಗಿದೆ. ಜನವರಿಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ತಯಾರಿ ಮಾಡುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದೇನೆ. ಮತ್ತೊಂದು ಬಾರಿ ಕಾಮಗಾರಿ ವೀಕ್ಷಿಸಿ, ಉದ್ಘಾಟನೆ ದಿನಾಂಕ ಫೈನಲ್ ಮಾಡುವುದಾಗಿ ಪ್ರಲ್ಹಾದ್ ಜೋಶಿ ಹೇಳಿದರು.
ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಎರಡು ಮೂರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರ ಭೇಟಿ ವೇಳೆ ಧಾರವಾಡ ಐಐಟಿಯನ್ನ ಜನವರಿಯಲ್ಲಿ ಉದ್ಘಾಟಿಸಲು ಯೋಜಿಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.