ದೇಶ ವಿರೋಧಿ ಸಂಘಟನೆಗಳಿಂದ ಹಿಜಾಬ್ ವಿವಾದ ಪ್ರಚಾರ: ಸಚಿವ ಪ್ರಲ್ಹಾದ್ ಜೋಶಿ ಆರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 19, 2022 | 5:57 PM

ದೇಶ ವಿರುದ್ಧದ ಪ್ರಚಾರಕ್ಕಾಗಿ ಟೂಲ್​ಕಿಟ್ ಸಿದ್ಧವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಸರು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ.

ದೇಶ ವಿರೋಧಿ ಸಂಘಟನೆಗಳಿಂದ ಹಿಜಾಬ್ ವಿವಾದ ಪ್ರಚಾರ: ಸಚಿವ ಪ್ರಲ್ಹಾದ್ ಜೋಶಿ ಆರೋಪ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Follow us on

ಧಾರವಾಡ: ಹಿಜಾಬ್ ವಿಚಾರವನ್ನು ದೇಶ ವಿರೋಧಿ ಸಂಘಟನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿವೆ. ದೇಶ ವಿರುದ್ಧದ ಪ್ರಚಾರಕ್ಕಾಗಿ ಟೂಲ್​ಕಿಟ್ ಸಿದ್ಧವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಸರು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿರೋಧಿಸಲೆಂದು ಕಾಂಗ್ರೆಸ್ ಪಕ್ಷದವರು ದೇಶವನ್ನು ವಿರೋಧಿಸಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Prahlad Joshi) ಸಲಹೆ ಮಾಡಿದರು. ಕೆಂಪುಕೋಟೆ ಮೇಲೆ ಕೇಸರಿಧ್ವಜ ಹಾರಿಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. 100ರಿಂದ 200 ವರ್ಷಗಳ ನಂತರ ಹೀಗೆ ಆಗಬಹುದು ಎಂಬುದು ಅವರ ಹೇಳಿಕೆ. ಕಳೆದ 75 ವರ್ಷಗಳಿಂದ ದೇಶದಲ್ಲಿ ತ್ರಿವರ್ಣ ಧ್ವಜವಿದೆ, ಮುಂದೆಯೂ ಇರುತ್ತದೆ. ಕೇಸರಿಧ್ವಜದ ಜತೆ ದೇಶಕ್ಕೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿದರು.

ಈಶ್ವರಪ್ಪನವರ ಕೇಸರಿಧ್ವಜದ ಹೇಳಿಕೆ ವಿರುದ್ಧ ಅಹೋರಾತ್ರಿ ಧರಣಿ ನಡೆಸಿ, ಕಲಾಪ ಹಾಳುಮಾಡಿದ್ದು ಸರಿಯಲ್ಲ. ಕಾಂಗ್ರೆಸ್​ ಪಕ್ಷದವರಿಗೆ ಈಶ್ವರಪ್ಪ ಹೇಳಿಕೆಯು ಒಂದು ನೆಪವಾಗಿ ಸಿಕ್ಕಿದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್​ನಲ್ಲಿ ಎರಡು ಬಣಗಳಿವೆ. ಒಂದು ಬಣವು ಹಿಜಾಬ್ ಪರ ಇದ್ದರೆ ಮತ್ತೊಂದು ಬಣವು ಹಿಜಾಬ್​ಗೆ ವಿರುದ್ಧವಾಗಿದೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್​ನವರಿಗೆ ಆಂತರಿಕ ಸಮಸ್ಯೆ ಇರುವುದರಿಂದ ಕಲಾಪ ಹಾಳುಮಾಡುತ್ತಿದ್ದಾರೆ. ಧರಣಿ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಆಂತರಿಕ ಸಮಸ್ಯೆ ಮುಚ್ಚಿಟ್ಟುಕೊಳ್ಳಲು ಈಶ್ವರಪ್ಪ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.

ಹಿಜಾಬ್‌ ಬಗ್ಗೆ ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಲಿ

ಹಿಜಾಬ್‌ ಧಾರಣೆ ಕುರಿತು ಕಾಂಗ್ರೆಸ್‌ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದರು. ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮುಸ್ಲಿಮರ ಬಗ್ಗೆ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯ ಎನ್ನುವ ಅಂಶ ಶಿಕ್ಷಣ ಕಾಯ್ದೆಯಲ್ಲೇ ಇದೆ. ವಸ್ತುಸ್ಥಿತಿ ಹೀಗಿದ್ದರೂ ಹಿಜಾಬ್‌-ಕೇಸರಿಶಾಲು ವಿಚಾರವನ್ನು ದೊಡ್ಡ ವಿವಾದ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿಯು ಈ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದೆ. ಕೇಸರಿಶಾಲೂ ಬೇಡ, ಹಿಜಾಬ್‌ ಕೂಡ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಅದೇ ರೀತಿ ಕಾಂಗ್ರೆಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದರು.

ಇದನ್ನೂ ಓದಿ: ಹುಬ್ಬಳ್ಳಿಯ ತಮ್ಮ ನೆಚ್ಚಿನ ಹೋಟೆಲ್​ಗೆ ಪತ್ನಿ ಸಮೇತರಾಗಿ ಆಗಮಿಸಿ ಇಷ್ಟದ ತಿಂಡಿ ಸವಿದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಇದನ್ನೂ ಓದಿ: News Analysis: ಹಿಜಾಬ್​ ವಿವಾದ- ಕಾಂಗ್ರೆಸ್​ನ ಶೂನ್ಯ ಸಂಪಾದನೆ

Published On - 5:57 pm, Sat, 19 February 22