News Analysis: ಹಿಜಾಬ್​ ವಿವಾದ- ಕಾಂಗ್ರೆಸ್​ನ ಶೂನ್ಯ ಸಂಪಾದನೆ

ಕಾಂಗ್ರೆಸ್​ನ​ ಧರಣಿ, ಸಾಂವಿಧಾನಿಕ ಹೋರಾಟದ ಬಗ್ಗೆ ಜನ ಮಾತನಾಡುತ್ತಿಲ್ಲ. ಕಾಂಗ್ರೆಸ್​ನ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗುವಂತೆ, ಹಿಜಾಬ್​ ವಿಚಾರದಲ್ಲಿ ಕಾಂಗ್ರೆಸ್​ನ ಪಾತ್ರ ಏನು ಎಂಬುದರ ಬಗ್ಗೆ ಜನ ಮಾತನಾಡುತ್ತಿದ್ದಾರೆ.

News Analysis: ಹಿಜಾಬ್​ ವಿವಾದ- ಕಾಂಗ್ರೆಸ್​ನ ಶೂನ್ಯ ಸಂಪಾದನೆ
ಹಿಜಾಬ್ ವಿವಾದ- ಶಬರಿ ಮಲೆ ವಿವಾದ
Follow us
ಡಾ. ಭಾಸ್ಕರ ಹೆಗಡೆ
| Updated By: ಸುಷ್ಮಾ ಚಕ್ರೆ

Updated on: Feb 19, 2022 | 5:55 PM

ಕೆಲ ವರ್ಷದ ಹಿಂದಿನ ಮಾತು. 2006ರಲ್ಲಿ ಖ್ಯಾತ ನಟಿ ಮತ್ತು ಮಾಜಿ ಸಚಿವೆ ಜಯಮಾಲಾ (Jayamala) ಒಂದು ಗುಟ್ಟನ್ನು ಹೊರ ಜಗತ್ತಿಗೆ ಹೇಳಿದರು. “ಮೂವತ್ತು ವರ್ಷಗಳ ಹಿಂದೆ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ (Sabarimala Ayyappa Swamy temple) ಹೋಗಿದ್ದೆ. ತುಂಬಾ ಜನ ಜಂಗುಳಿ ಇತ್ತು. ನನ್ನನ್ನು ನೂಕಿದ್ದಕ್ಕಾಗಿ ನಾನು ಅಯ್ಯಪ್ಪನ ಪಾದ ಮುಟ್ಟಿ ಬಂದೆ.” ಈ ಹೇಳಿಕೆ ಪಕ್ಕದ ಕೇರಳದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯ್ತು. ಈ ವಿಚಾರ ಅಲ್ಲಿ ಎಷ್ಟು ವಿವಾದಕ್ಕೆ ಕಾರಣವಾಯ್ತು ಎಂದರೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಕ್ತರು ಜ್ಯೋತಿಷ್ಯ ಕೇಳಿದರು. ಆ ಹೇಳಿಕೆಯ ಆಧಾರದ ಮೇಲೆ ಅಯ್ಯಪ್ಪನ ಭಕ್ತರ ನಂಬಿಕೆಗೆ ದ್ರೋಹ ಬಗೆದರು ಎಂಬ ಕಾರಣವಿಟ್ಟುಕೊಂಡು ಕೇರಳದಲ್ಲಿ ಜಯಮಾಲಾ ಅವರ ಮೇಲೆ ಕೇಸ್​ ಕೂಡ ಹಾಕಲಾಯ್ತು.

ಇದಕ್ಕೂ ಮೊದಲು ಒಂದು ಬೆಳವಣಿಗೆ ಆಗಿತ್ತು. 1990ರಲ್ಲಿ ಕೇರಳದ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತಂದ ರಾಜ್ಯ ಸರಕಾರ, ಮುಟ್ಟಾಗುತ್ತಿರುವ ಹೆಣ್ಣು ಮಕ್ಕಳಿಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರವೇಶವನ್ನು ನಿರಾಕರಿಸಿತು. ಇದನ್ನು ಒಪ್ಪಿಕೊಳ್ಳದ ಇಂಡಿಯನ್​ ಯಂಗ್​ ಲಾಯರ್ಸ್​ ಗುಂಪು ಕೇರಳ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿತು. ‘ಇದು ಬಹಳ ವರ್ಷದಿಂದ ಇರುವ ಸಂಪ್ರದಾಯ, ಹಾಗಾಗಿ ಮುಟ್ಟಿನ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಸ್ಥಾನಕ್ಕೆ ಸೇರಿಸದೇ ಇದ್ದುದು ಸರಿ ಇದೆ,’ ಎಂದು ಕೇರಳ ಉಚ್ಛ ನ್ಯಾಯಾಲಯ ಹೇಳಿತ್ತು. ಇದನ್ನು ಪ್ರಶ್ನಿಸಿ, ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಯ್ತು.  ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ 2018 ರಲ್ಲಿ ತನ್ನ ತೀರ್ಪು ನೀಡಿತು. ನೂರಾರು ವರ್ಷದ ನಂಬಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಸರ್ವೋಚ್ಛ ನ್ಯಾಯಾಲಯ, ಹೆಣ್ಣು ಮಕ್ಕಳಿಗೆ ಲಿಂಗ ಸಮಾನತೆ ತತ್ವದ ಆಧಾರದ ಮೇಲೆ ನ್ಯಾಯ ನೀಡಬೇಕು ಮತ್ತು ಹೆಣ್ಣು ಮಕ್ಕಳು ಬಯಸಿದರೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಹೇಳಿತು. ಅಷ್ಟೇ ಅಲ್ಲ, ಆರ್ಟಿಕಲ್​ 25ರ ಕೆಳಗೆ ಈ ಸಂಪ್ರದಾಯ ಹಿಂದೂ ಧರ್ಮದ ಗುರುತಲ್ಲ ಎಂದು ಹೇಳಿತ್ತು. ಆ ತೀರ್ಪನ್ನು ಪ್ರಗತಿಪರರು, ವಿಚಾರವಾದಿಗಳು, ಹೆಲವಾರು ಸೇವಾ ಸಂಸ್ಥೆಗಳು- ಹೀಗೆ ಎಲ್ಲರೂ ಸ್ವಾಗತಿಸಿದ್ದರು. 2018ರಲ್ಲಿ ಕಾಂಗ್ರೆಸ್​ ರಾಷ್ಟ್ರೀಯ ನಾಯಕರು ಕೂಡ ಈ ತೀರ್ಪನ್ನು ಸ್ವಾಗತಿಸಿದ್ದರು. 2018ರ ಸೆಪ್ಟೆಂಬರ್​ 28 ರಂದು ಟ್ವೀಟ್​ ಮಾಡಿದ್ದ ಕಾಂಗ್ರೆಸ್ ನಾಯಕ ರಣದೀಪ್​ ಸಿಂಗ್​ ಸುರ್ಜೆವಾಲಾ, “There can be no discrimination to worship on the basis of gender or otherwise. A welcome and progressive move towards gender equality by Supreme Court in #Sabarimala. As society evolves, so should religious beliefs and law” ಎಂದು ಪ್ರತಿಕ್ರಿಯಿಸಿದ್ದರು. ಕೆಲ ಬಿಜೆಪಿ ನಾಯಕರು ಇದಕ್ಕೆ ಹೊರತಾಗಿರಲಿಲ್ಲ. ಡಾ. ಸುಬ್ರಮಣಿಯನ್​ ಸ್ವಾಮಿ ಕೂಡ ಲಿಂಗ ಸಮಾನತೆಗೆ ಸಿಕ್ಕ ಜಯ ಎಂದು ಬಣ್ಣಿಸಿದ್ದರು. ಈ ತೀರ್ಪು ಬಂದ ಮೇಲೆ ಕೆಲ ಹೆಣ್ಣು ಮಕ್ಕಳು ಅಯ್ಯಪ್ಪನ ದರ್ಶನಕ್ಕೆ ಹೋಗಲು ಪ್ರಯತ್ನ ಪಟ್ಟರು. ಆಗ ದೇವಸ್ಥಾನದ ಆಡಳಿತ ಅದಕ್ಕೆ ಅವಕಾಶ ಕೊಡಲಿಲ್ಲ. ಇದನ್ನು ದೇಶಾದ್ಯಂತ ತೀವ್ರವಾಗಿ ಖಂಡಿಸಲಾಯ್ತು. ಆದರೆ ಕೇರಳ ಚುನಾವಣೆ ಬರುವ ಹೊತ್ತಿಗೆ ಕಾಂಗ್ರೆಸ್​ ತನ್ನ ಬಣ್ಣ ಬದಲಾಯಿಸಿತ್ತು. ಆ ಮಾತು ಬೇರೆ. ಇಷ್ಟೆಲ್ಲ ವಿಚಾರ ಹೇಳಲು ಒಂದು ಕಾರಣ ಇದೆ.

ಈಗ 2022ಕ್ಕೆ ಬನ್ನಿ:

ಸಮವಸ್ತ್ರದ ಜೊತೆಗೆ ಹಿಜಾಬ್​​ ಧರಿಸಲು ಅನುವು ಮಾಡಿಕೊಟ್ಟಿಲ್ಲ ಎಂಬ ವಿಚಾರ ಈಗ ರಾಷ್ಟ್ರವೇಕೆ ಇಡೀ ವಿಶ್ವದ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಈಗ ಅದು ಉಚ್ಛ ನ್ಯಾಯಾಲಯದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಜಾಬ್​ ಇಸ್ಲಾಂ ಧರ್ಮದ ಭಾಗವೇ? ಹಿಜಾಬ್​ vs ಸಮವಸ್ತ್ರದ ವಿಚಾರದಲ್ಲಿ ಯಾವುದು ಸರಿ? ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಕುರಿತು ಚರ್ಚೆ ಈಗ ಅನುಚಿತ.

ಆದರೆ, ಕರ್ನಾಟಕ ಮತ್ತು ರಾಷ್ಟ್ರ ಮಟ್ಟದಲ್ಲಿನ ವಿಚಾರವಾದಿಗಳು ಮತ್ತು ಪ್ರಗತಿಪರರ ಪ್ರತಿಕ್ರಿಯೆ ಮತ್ತು ಕರ್ನಾಟಕದಲ್ಲಿನ ವಿರೋಧ ಪಕ್ಷ ಕಾಂಗ್ರೆಸ್​ನ ರಾಜಕೀಯ ನಿಜಕ್ಕೂ ಆಶ್ಚರ್ಯಕಾರಿಯಾಗಿದೆ. ಶಬರಿಮಲೆಯ ವಿಚಾರದಲ್ಲಿ ತೆರೆದ ಮನಸ್ಸಿನಿಂದ ತೀರ್ಪನ್ನು ಸ್ವಾಗತಿಸಿದ್ದ ಪ್ರಗತಿಪರರು ಈಗ ಕೈ ಕೈ ಹೊಸಕಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೆ: ಹಿಜಾಬ್​ ಹೆಣ್ಣುಮಕ್ಕಳ ದಮನದ ಪ್ರತೀಕ ಎಂದು ಬಿಂಬಿಸಿದರೆ ಧಾರ್ಮಿಕ ಭಾವನೆಗೆ ಧಕ್ಕೆ ಆಗಬಹುದು ಎಂಬ ಹೆದರಿಕೆ. ಇನ್ನೊಂದೆಡೆ, ಸಮವಸ್ತ್ರ ಇರಲಿ, ಹಿಜಾಬ್​ ಅಲ್ಲ ಅಂದರೆ ಅದು ಕೂಡ ಧಾರ್ಮಿಕ ಭಾವನೆಯ ಧಕ್ಕೆಗೆ ಕಾರಣವಾಗಬಹುದು. ಸಾರ್ವಜನಿಕ ವಲಯದಲ್ಲಿ ತಮ್ಮ ಜನಪ್ರಿಯತೆ ಕಳೆದುಕೊಳ್ಳಲು ಯಾವ ಪ್ರಗತಿಪರರೂ ಇಷ್ಟಪಡಲಾರರು. ಅದು ತಪ್ಪಲ್ಲ.

ಕಾಂಗ್ರೆಸ್​ ಕಣ್ಣಾಮುಚ್ಚಾಲೆ ಆಟ

ಉಚ್ಛ ನ್ಯಾಯಾಲಯ ಮಧ್ಯಂತರ ನಿರ್ಧಾರ ಹೊರಬಿದ್ದ ಮೇಲೆ, ಕಾಂಗ್ರೆಸ್​ ನಾಯಕರು ಮಾತ್ರ ಚಳಿ ಬಿಟ್ಟು ಮಾತನಾಡುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಯಾವುದೇ ವಿಚಾರದ ಕುರಿತು ಮಾತನಾಡುವಾಗ, “ಈ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಪ್ರತಿಕ್ರಿಯಿಸುವುದಿಲ್ಲ” ಎಂದು ಹೇಳುವ ಕಾಂಗ್ರೆಸ್​ ನಾಯಕರ ವರ್ತನೆ ಆಶ್ಚರ್ಯಕರವಾಗಿದೆ. ಹಿಜಾಬ್​ ವಿಚಾರದಲ್ಲಿ ಕೋರ್ಟ ತೀರ್ಪು ಬರುವವರೆಗೆ ಕಾಯಲು ತಯಾರಿಲ್ಲದೇ, ಮಧ್ಯಂತರ ತೀರ್ಪು ಇದ್ದರೂ ಹಿಜಾಬ್​ ಅನ್ನು ರಾಜಕೀಯ ದಾಳವಾಗಿ ಬಳಸಿ ಕೋರ್ಟ ತೀರ್ಪಿಗೆ ವ್ಯತಿರಿಕ್ತವಾಗಿ ಮಾತನಾಡುತ್ತಿರುವುದನ್ನು ನೋಡಿದಾಗ ಇದರ ಹಿಂದೆ ಬೇರೆ ಲೆಕ್ಕಾಚಾರ ಅಡಗಿದೆ ಎಂಬುದು ನಿಚ್ಚಳವಾಗುತ್ತದೆ.

ಸಚಿವ ಕೆ.ಎಸ್​. ಈಶ್ವರಪ್ಪ ಅವರು ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆಯನ್ನಿಟ್ಟುಕೊಂಡು ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್​ ಶಾಸಕರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯ ಹಿಂದೆ ಇರುವ ಲೆಕ್ಕಾಚಾರ ಇಷ್ಟೇ: ಹಿಜಾಬ್ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದು.

ಬಿಜೆಪಿ ಕೂಡ ಇಲ್ಲಿ ಒಂದು ತಪ್ಪು ಮಾಡಿದ್ದು ಕಾಣುತ್ತಿದೆ. ಈ ಹಿಂದೆ ಉತ್ತರ ಕನ್ನಡ ಸಂಸದ ಅನಂತಕುಮಾರ್​ ಹೆಗಡೆ ಇಂಥದೇ ಒಂದು ಹೇಳಿಕೆ ಕೊಟ್ಟಿದ್ದರು. ಕೊನೆಗೆ ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದಾಗ ಆ ವಿವಾದಕ್ಕೆ ತೆರೆ ಬಿದ್ದಿತ್ತು. ನನ್ನ ಹೇಳಿಕೆಯಿಂದ ತಪ್ಪು ಗ್ರಹಿಕೆ ಆಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ- ಎಂದು ಈಶ್ವರಪ್ಪ ಹೇಳಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಚರ್ಚೆಗೆ ಯಾವ ವಿಷಯವೂ ಸಿಗುತ್ತಿರಲ್ಲಿಲ್ಲ.

ಜಯಮಾಲಾ ಅವರ ವಿವಾದಿತ ಹೇಳಿಕೆ ನಂತರ ಕರ್ನಾಟಕದ ಕಾಂಗ್ರೆಸ್​ ಪಕ್ಷ ಅವರ ಬೆಂಬಲಕ್ಕೆ ನಿಂತಿತ್ತು. ಅದು ತಪ್ಪು ಎಂದು ಹೇಳಲಾಗದು. ಶಬರಿಮಲೆ ವಿಚಾರ ಕರ್ನಾಟಕದ ರಾಜಕೀಯದ ಮೇಲೆ ಯಾವ ಪರಿಣಾಮವನ್ನು ಬೀರಲಿಲ್ಲ. ಹಾಗಾಗಿ, ಜಯಮಾಲಾ ವಿವಾದದ ವಿಚಾರದಲ್ಲಿ ಕಾಂಗ್ರೆಸ್​ ನಾಯಕರು ಅತ್ಯಂತ ಪ್ರಗತಿಪರರಾಗಿ ವರ್ತಿಸಿದ್ದರಲ್ಲಿ ಏನೂ ವಿಶೇಷವಿರಲಿಲ್ಲ. ಆದರೆ, ಹಿಜಾಬ್​ ವಿಚಾರದಲ್ಲಿ ಕಾಂಗ್ರೆಸ್​ ಪ್ರಗತಿಪರ ಅಥವಾ ಕ್ರಾಂತಿಕಾರಿ ಧೋರಣೆ ತಳೆಯಲಾಗದು.

ಆದರೆ, ಈಶ್ವರಪ್ಪನವರ ಹೇಳಿಕೆ ಅಥವಾ ಹಿಜಾಬ್​ ವಿಚಾರ-ಈ ಎರಡರಲ್ಲಿ ಜನ ಯಾವುದಕ್ಕೆ ಹೆಚ್ಚು ಒತ್ತು ನೀಡಿದ್ದಾರೆ? ಸಾರ್ವಜನಿಕರು ಯಾವ ವಿಚಾರವನ್ನು ಪದೇ ಪದೇ ಮಾತನಾಡುತ್ತಿದ್ದಾರೆ, ಚರ್ಚಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ಕಾಂಗ್ರೆಸ್​ಗೆ ನಿರಾಸೆ ಆಗುವುದು ಖಂಡಿತ. ಯಾರೂ ಕೂಡ ಕಾಂಗ್ರೆಸ್​ನ​ ಧರಣಿ, ಸಾಂವಿಧಾನಿಕ ಹೋರಾಟದ ಬಗ್ಗೆ ಮಾತನಾಡುತ್ತಿಲ್ಲ. ಮತ್ತು ಕಾಂಗ್ರೆಸ್​ನ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗುವಂತೆ, ಜನ ಹಿಜಾಬ್​ ವಿಚಾರದಲ್ಲಿ ಕಾಂಗ್ರೆಸ್​ನ ಪಾತ್ರದ ಬಗ್ಗೆ ಸೂಕ್ಷ್ಮವಾಗಿ ಮಾತನಾಡುತ್ತಿದ್ದಾರೆ. ಧರಣಿಯಿಂದ ಕಾಂಗ್ರೆಸ್​ಗೆ ಶೂನ್ಯ ಸಂಪಾದನೆ ಆಗಿದೆ ಮತ್ತು ಹಿಜಾಬ್​ ವಿಚಾರದಲ್ಲಿ ಅತ್ಯಂತ ಋಣಾತ್ಮಕ ಬೆಂಬಲ ಸಿಕ್ಕಿದೆ ಎಂದಷ್ಟೇ ಹೇಳಬಹುದು. ಇದನ್ನು ಗಮನಿಸಲು ಸಾಧ್ಯವಾಗದ ಕಾಂಗ್ರೆಸ್​ ನಾಯಕರು ಇತ್ತ ಕೋರ್ಟಿಗೂ ಗೌರವ ಕೊಡದೆ ಹೇಳಿಕೆ ಕೊಡುತ್ತಾ ಮುಂದುವರಿದಿರುವುದು ವಿಷಾದನೀಯ.

Hijab row: ಉತ್ತರ ಪ್ರದೇಶದ ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು

Hijab Row: ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದ ಉಪನ್ಯಾಸಕಿ ರಾಜೀನಾಮೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್