ಧಾರವಾಡ: ಮಹದಾಯಿ ನೀರಿಗಾಗಿ ಹೋರಾಟ ಮಾಡಿದವರ ಮೇಲೆ ವಾರೆಂಟ್; ಅನ್ನದಾತರ ಪರದಾಟ
ರಾಜ್ಯದಲ್ಲಿ ಸದ್ಯ ವಿಧಾನಸಭೆ ಚುನಾವಣೆ ಕಾವು ಜೋರಾಗಿ ನಡೆದಿದೆ. ಆದರೆ ಅತ್ತ ಚುನಾವಣೆ ಜೋರಾಗಿ ನಡೆಯುತ್ತಿರುವ ಹೊತ್ತಿನಲ್ಲಿಯೇ ಧಾರವಾಡದಲ್ಲಿ ಮಹದಾಯಿ ನೀರಿಗಾಗಿ ಹೋರಾಟ ಮಾಡಿದ ರೈತರ ಮೇಲೆ ಕಂಡಲ್ಲಿ ಬಂಧಿಸಿ ಕರೆತರುವ ವಾರೆಂಟ್ ಜಾರಿಯಾಗಿದೆ. ಹಾಗಾದ್ರೆ ಏನಿದು ಹೋರಾಟಗಾರರ ಸಂಕಷ್ಟ? ಯಾಕೆ ಬಂಧನದ ವಾರೆಂಟ್ ಬಂದಿದೆ ಅನ್ನೋದರ ಸ್ಟೋರಿ ಇಲ್ಲಿದೆ.
ಧಾರವಾಡ: ಜಿಲ್ಲೆಯ ನವಲಗುಂದ ಭಾಗದಲ್ಲಿ ಮಹದಾಯಿ(Mahadayi) ನೀರಿಗಾಗಿ ಈ ಹಿಂದೆ ದೊಡ್ಡ ಮಟ್ಟದ ಹೋರಾಟಗಳು ನಡೆದಿದ್ದವು. ಯಾವಾಗ ಕರ್ನಾಟಕಕ್ಕೆ ಅನ್ಯಾಯವಾಗಿತ್ತೋ ಆಗ ನವಲಗುಂದದ ರೈತ ಹೋರಾಟಗಾರರು ಬೇರೆ ಬೇರೆ ರೀತಿಯಲ್ಲಿ ಹೋರಾಟಗಳನ್ನು ಮಾಡಿದ್ದರು. ಅದರಲ್ಲಿ ಹೋರಾಟದ ಒಂದು ಭಾಗವಾಗಿ 2016ರಲ್ಲಿ ರೈತ ಹೋರಾಟಗಾರರು ಧಾರವಾಡ ತಾಲೂಕಿನ ಅಮ್ಮಿನಬಾವಿಯಲ್ಲಿರುವ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ ಬಂದ್ ಮಾಡುವುದಕ್ಕೆ ಮುಂದಾಗಿದ್ದು. ಆದರೆ ಆಗ ರೈತರನ್ನು ಜಾಕ್ವೆಲ್ ಕೇಂದ್ರದ ಗೇಟ್ ಹೊರಗೆ ಪೊಲೀಸರು ತಡೆದಿದ್ದರು. ಆ ವೇಳೆ ರೈತರು ರಸ್ತೆಯಲ್ಲಿಯೇ ಕುಳಿತು ಹೋರಾಟ ಮಾಡಿದ್ದರು. ಅವತ್ತು ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಒಂದು ದೂರು ದಾಖಲಾಗಿತ್ತು. ಸದ್ಯ ಅದೇ ದೂರಿಗೆ ಸಂಬಂಧಿಸಿದಂತೆ ನವಲಗುಂದದ ಐದು ರೈತ ಮುಖಂಡರುಗಳ ಮನೆಗಳಿಗೆ ಪೊಲೀಸರು ಕಂಡಲ್ಲಿ ಬಂಧಿಸಿ ಕರೆತರುವ ಕೋರ್ಟ್ ಆದೇಶ ಇರುವ ನೋಟೀಸ್ ಅಂಟಿಸಿದ್ದಾರೆ. ಮಹದಾಯಿ ಹೋರಾಟದ ಪ್ರಮುಖರಾಗಿರುವ ಲೋಕನಾಥ ಹೆಬಸೂರ, ರಘುನಾಥ ನಡುವಿನಮನಿ, ಚಂದ್ರಶೇಖರ ಪಲ್ಲೇದ, ಗಂಗಾಧರ ಹಡಪದ, ವೀರಣ್ಣ ಮಳಗಿ ಅವರ ಮನೆಗಳಿಗೆ ಈ ನೋಟೀಸ್ ಅಂಟಿಸಲಾಗಿದೆ.
ಇನ್ನು ಇತ್ತೀಚೆಗೆ ಮಹದಾಯಿ ಹೋರಾಟ ಸಂಪೂರ್ಣವಾಗಿ ತಣ್ಣಗಾಗಿದೆ. ಮಹದಾಯಿ ನ್ಯಾಯಾಧೀಕರಣದಿಂದ ಮಧ್ಯಂತರ ತೀರ್ಪು ಬಂದು ಬಳಿಕ ಕ್ರಮೇಣ ಹೋರಾಟ ಕಡಿಮೆಯಾಗುತ್ತ ಬಂದಿದ್ದು, ಈ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಕಾಮಗಾರಿ ಆರಂಭಕ್ಕೆ ಅಸ್ತು ಸಿಗುವುದು ಒಂದೇ ಬಾಕಿ ಇದೆ. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ 56 ಪ್ರಕರಣಗಳ ಪೈಕಿ 50 ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಅದಾದ ಬಳಿಕ ಉಳಿದ ಆರು ಕೇಸ್ಗಳನ್ನು ವಾಪಸ್ ಪಡೆದುಕೊಳ್ಳಬಹುದು ಎಂದುಕೊಂಡು ಇವರು ಕೋರ್ಟ್ಗೂ ಹಾಜರಾಗದೇ ಹಾಗೆಯೇ ಉಳಿದಿದ್ದರು. ಈ ಸರ್ಕಾರದ ಅವಧಿಯಲ್ಲಿ ಉಳಿದ ಕೇಸ್ಗಳನ್ನ ವಾಪಸ್ ಪಡೆಯುವುದಕ್ಕೆ ರೈತ ಹೋರಾಟಗಾರರು ಸ್ಥಳೀಯ ಶಾಸಕರಿಂದ ಹಿಡಿದು ಸಿಎಂವರೆಗೂ ಒತ್ತಡ ಹಾಕಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ:PM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ
ಚುನಾವಣೆ ಸಮಯದಲ್ಲಿಯೇ ಈ ರೀತಿ ನೋಟೀಸ್ ಬಂದಿರುವ ಕಾರಣಕ್ಕೆ ರೈತರು ಈಗ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯುವ ಸಾಧ್ಯತೆಗಳೂ ಇವೆ. ಒಂದೆಡೆ ಚುನಾವಣೆಯ ಭದ್ರತೆಯ ದೃಷ್ಟಿಯಿಂದ ಮಹದಾಯಿ ಹೋರಾಟ ಪುನಃ ಆರಂಭಗೊಳ್ಳದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದ್ದು, ಇದು ಎಲ್ಲಿಗೆ ಬಂದು ನಿಲ್ಲುತ್ತೋ ಅನ್ನೋದನ್ನು ಕಾದು ನೋಡಬೇಕಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ