
ಹುಬ್ಬಳ್ಳಿ, ಜುಲೈ 10: ಪೊಲೀಸ್ ಇಲಾಖೆಯಲ್ಲಿ (Police Deapartment) ಕೆಲಸ ಮಾಡುತ್ತಿರುವ ಅನೇಕ ಸಿಬ್ಬಂದಿ ಅತಿ ಹೆಚ್ಚು ತೂಕ ಹೊಂದಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅತಿಯಾದ ತೂಕ ಮತ್ತು ಬೊಜ್ಜುತನ ಅನೇಕ ಪೊಲೀಸರಿಗೆ ಮುಜಗರ ತಂದಿದೆ. ತಮ್ಮ ಸಿಬ್ಬಂದಿ ಆರೋಗ್ಯವಂತರಾಗಿರಬೇಕು, ಜೊತೆಗೆ ಫಿಟ್ ಆಗಿರಬೇಕು ಎಂಬ ಉದ್ದೇಶದಿಂದ, ಹುಬ್ಬಳ್ಳಿ-ಧಾರವಾಡ ಪೊಲೀಸ್ (Hubballi-Dharwad Police) ಆಯುಕ್ತ ಎನ್. ಶಶಿಕುಮಾರ್ (N Shashikumar) ಅವರು ತಮ್ಮ ಸಿಬ್ಬಂದಿಗೆ ತೂಕ ಕಡಿಮೆ ಮಾಡಿಕೊಳ್ಳುವ ಟಾಸ್ಕ್ ನೀಡಿದ್ದು, ತೂಕ ಇಳಿಕೆಯ ಶಿಬಿರ ಆರಂಭಿಸಿದ್ದಾರೆ.
ಅವಳಿ ನಗರದಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಲ್ಲಿ ಹೆಚ್ಚು ತೂಕ ಇರುವ ಸಿಬ್ಬಂದಿಯನ್ನು ಗುರುತಿಸಲಾಗಿದೆ. 90 ಕೆಜಿಗಿಂತ ಹೆಚ್ಚು ತೂಕ ಇರುವ ಪುರುಷ ಪೊಲೀಸ್ ಸಿಬ್ಬಂದಿ, 70 ಕೆಜಿಗಿಂತ ಹೆಚ್ಚು ತೂಕ ಇರುವ ಮಹಿಳಾ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಹೀಗೆ, 65 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ಕಳೆದ ಒಂದು ತಿಂಗಳಿನಿಂದ ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ಸಿಆರ್ ಮೈದಾನದಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುವುದರ ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವ ಸಿಬ್ಬಂದಿಯು ತೂಕ ಇಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ತೂಕ ಇಳಿಕೆ ಶಿಬಿರದಲ್ಲಿ ಭಾಗಿಯಾದವರಿಗೆ ಮುಂಜಾನೆ ವಾಕಿಂಗ್, ನಂತರ ಪೊಲೀಸ್ ಡ್ರಿಲ್ ಮಾಡಿಸಲಾಗುತ್ತಿದೆ. ನಂತರ ಯೋಗ ಮಾಡಿಸಲಾಗುತ್ತದೆ. ಸಂಜೆ ಕೂಡ ಇದೇ ರೀತಿ ಅನೇಕ ದೈಹಿಕ ಕಸರತ್ತುಗಳನ್ನು ಮಾಡಿಸಲಾಗುತ್ತದೆ. ಊಟ, ಉಪಹಾರದಲ್ಲಿ ಕೂಡ ಕಟ್ಟು-ನಿಟ್ಟಿನ ಕ್ರಮ ಅನಸರಿಸಲಾಗಿದ್ದು, ಹಣ್ಣು, ಮೊಳಕೆ ಕಾಳು ಸೇರಿದಂತೆ ಕಡಿಮೆ ಕ್ಯಾಲೊರಿ ಇರುವ ಆಹಾರವನ್ನು ಮಾತ್ರ ನೀಡಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಒಬ್ಬಬ್ಬ ಪೊಲೀಸ್ ಸಿಬ್ಬಂದಿ 5-11 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಕಾಲ ಮನೆಬಿಟ್ಟು, ಸಿಆರ್ ಕೇಂದ್ರದಲ್ಲಿಯೇ ಬೀಡು ಬಿಟ್ಟಿರುವ ಸಿಬ್ಬಂದಿ, ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಹೊಡೆಯಲು ಕೈಎತ್ತಿದ್ದ ಎಎಸ್ಪಿ ಭರಮನಿ ಸ್ವಯಂ ನಿವೃತ್ತಿ ಪತ್ರದ ಭಾವುಕ ಸಾಲುಗಳು ಇಲ್ಲಿವೆ
ಪ್ರತಿನಿತ್ಯ ಕೆಲಸ ಮತ್ತು ಕುಟುಂಬದ ನಿರ್ವಹಣೆಯಿಂದ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಹೀಗಾಗಿ ತೂಕ ಹೆಚ್ಚಾಗಿತ್ತು. ಇದೀಗ ತೂಕ ಇಳಿಕೆ ಶಿಬಿರದಿಂದ ತಕ್ಕಮಟ್ಟಿನ ತೂಕ ಇಳಿಕೆಯಾಗಿದೆ ಎಂದು ಪೊಲೀಸ್ ಸಿಬ್ಬಂದಿ ಶ್ರೀದೇವಿಯವರು ಸಂತಸ ವ್ಯಕ್ತಪಡಿಸಿದ್ದಾರೆ.
ತೂಕ ಇಳಿಕೆ ಶಿಬಿರದಿಂದ ಪೊಲೀಸ್ ಸಿಬ್ಬಂದಿ ಸಂತಸಗೊಂಡಿದ್ದಾರೆ. ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಕೈಗೊಂಡ ಕ್ರಮ ಉಳಿದ ಜಿಲ್ಲೆಯ ಪೊಲೀಸರಿಗೆ ಮಾದರಿಯಾಗಿದೆ.