ಸಿದ್ದರಾಮಯ್ಯ ಹೊಡೆಯಲು ಕೈಎತ್ತಿದ್ದ ಎಎಸ್ಪಿ ಭರಮನಿ ಸ್ವಯಂ ನಿವೃತ್ತಿ ಪತ್ರದ ಭಾವುಕ ಸಾಲುಗಳು ಇಲ್ಲಿವೆ
ಧಾರವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಿತರಾಗಿದ್ದಕ್ಕಾಗಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದಾರೆ. ಬೆಳಗಾವಿಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭರಮನಿ ಅವರನ್ನು ಸಾರ್ವಜನಿಕ ವೇದಿಕೆಯಲ್ಲೇ ಹೊಡೆಯಲು ಕೈಎತ್ತಿದ್ದರು. ಭರಮನಿ ಅವರು ಈ ಘಟನೆಯಿಂದಾಗಿ ತೀವ್ರ ಮಾನಸಿಕ ನೋವು ಅನುಭವಿಸುತ್ತಿರುವುದಾಗಿ ಹೇಳಿದ್ದು, ಭಾವುಕ ಪತ್ರ ಬರೆದಿದ್ದಾರೆ. ಪತ್ರದಲ್ಲೇನಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 3: ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ (Dharwad ASP Narayana bharamani) ಇದೀಗ ಸ್ವಯಂ ನಿವೃತ್ತಿಗೆ (VRS) ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ಇಲಾಖೆ ಜತೆ ತಾವು ಹೊಂದಿದ್ದ ಬಾಂಧವ್ಯದ ಬಗ್ಗೆ ಭಾವುಕರಾಗಿ ಉಲ್ಲೇಖಸಿದ್ದಾರೆ.
ನಾರಾಯಣ ಭರಮನಿ ಪತ್ರದಲ್ಲೇನಿದೆ?
‘‘ಮಾನ್ಯ ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿ ಸಲ್ಲಿಸಲು ಮುಂದಾಗಿದ್ದೇನೆ. ನಾನು, ಎನ್. ವಿ. ಬರಮನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಧಾರವಾಡ. 1994 ನೇ ಸಾಲಿನಲ್ಲಿ ಪಿ.ಎಸ್.ಐ ಆಗಿ ನೇಮಕಗೊಂಡು ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಪಿಎಸ್ಐ ಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರೆಗೆ ವಿವಿಧ ಹುದ್ದೆಗಳಲ್ಲಿ ಕಾನೂನು ಬದ್ಧ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ. ದಿನಾಂಕ : 28/04/2025 ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರೀ ಸಿದ್ದರಾಮಯ್ಯ. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ರವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ಬಂದೋಬಸ್ತ್ ಕರ್ತವ್ಯಕ್ಕೆ ಮೇಲಾಧಿಕಾರಿಗಳು ನನ್ನನ್ನು ನಿಯೋಜಿಸಿ ವೇದಿಕೆಯ ಉಸ್ತುವಾರಿ ವಹಿಸಿದರು’’ ಎಂದು ಪತ್ರದಲ್ಲಿ ಭರಮನಿ ಉಲ್ಲೇಖಿಸಿದ್ದಾರೆ.
ಮುಂದುವರಿದು, ‘‘ನೀಡಲಾದ ಜವಬ್ದಾರಿಯನ್ನು ಯಾವುದೇ ಲೋಪವಾಗದಂತೆ ನನ್ನ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದವನು. ವೇದಿಕೆಯ ಮೇಲೆ ರಾಜ್ಯ ಸರ್ಕಾರದ ಅನೇಕ ಮಂತ್ರಿಗಳು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಧುರೀಣರು ಜನರನ್ನುದ್ದೇಶಿಸಿ ಭಾಷಣ ಮಾಡಿದರು. ತದನಂತರ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದರಾಮಯ್ಯ ರವರು ಭಾಷಣ ಮಾಡಲು ಪ್ರಾರಂಭಿಸಿದರು. ಭಾಷಣ ಮುಂದುವರೆಸಿದ ಸುಮಾರು 10 ನಿಮಿಷಗಳ ನಂತರ ಸಾರ್ವಜನಿಕರು/ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕುಳಿತು ಕೊಂಡಿದ್ದ ಸಭಾ ಸ್ಥಳದಲ್ಲಿ ಬೇರೊಬ್ಬ ಎಸ್.ಪಿ ಮಟ್ಟದ ಅಧಿಕಾರಿ ಉಸ್ತುವಾರಿಯಲ್ಲಿದ್ದು, ಆ ಸ್ಥಳದಲ್ಲಿ ಯಾರೋ ನಾಲೈದು ಮಹಿಳೆಯರು ಕಪ್ಪು ಬಾವುಟ ತೋರಿಸಿ ಘೋಷಣೆ ಕೂಗಿದಾಗ, ಭಾಷಣ ಮಾಡುತ್ತಾ ಇದ್ದ ಮಾನ್ಯ ಮುಖ್ಯಮಂತ್ರಿಗಳು ಭಾಷಣ ನಿಲ್ಲಿಸಿ ನನ್ನ ಕಡೆ ಕೈ ಮಾಡಿ ‘ಏಯ್ ಯಾವನೊ ಇಲ್ಲಿ ಎಸ್ಪಿ ಬಾರಯ್ಯ ಇಲ್ಲಿ’ ಎಂದು ಏರು ಧ್ವನಿಯಲ್ಲಿ ಅಬ್ಬರಿಸಿದಾಗ ಅಲ್ಲಿ ಸ್ಥಳೀಯ ಎಸ್ಪಿಯಾಗಲಿ ಅಥವಾ ಡಿಸಿಪಿಯಾಗಲಿ ಇರದೇ ಇದ್ದುದ್ದರಿಂದ, ಅವರ ಕರೆಗೆ ಓಗೊಟ್ಟು ವೇದಿಕೆ ಮೇಲೆ ಹೋದೆನು. ಮತ್ತು ಮಾನ್ಯರಿಗೆ ಗೌರವಸೂಚಕವಾಗಿ ಅತೀ ವಿನಮ್ರತೆಯಿಂದ ವಂದಿಸಿ ನಿಂತುಕೊಂಡೆನು. ತಕ್ಷಣ ಏನೂ ಮಾತನಾಡದೆ ಏಕಾ ಏಕಿ ಕೈ ಎತ್ತಿ ನನಗೆ ‘ಕಪಾಳ ಮೋಕ್ಷ’ ಮಾಡಲು ಬಂದರು. ಕೂಡಲೇ ನಾನು ಒಂದು ಹೆಜ್ಜೆ ಹಿಂದೆ ಸರಿದು ಸಾರ್ವಜನಿಕವಾಗಿ ಆಗಬಹುದಾಗಿದ್ದ ಕಪಾಳಮೋಕ್ಷದಿಂದ ತಪ್ಪಿಸಿಕೊಂಡನು. ನಾ ಮಾಡದ ತಪ್ಪಿಗೆ ಅವಮಾನಿತನಾಗಿದೆ. ಈ ಘಟನೆಯನ್ನು ನಿರಂತರವಾಗಿ ಟಿವಿ ದೃಶ್ಯ ಮಾಧ್ಯಮಗಳಲ್ಲಿ 2 ದಿನಗಳ ಕಾಲ ಬಿತ್ತರಿಸಿದ್ದನ್ನು ತಾವೂ ಕೂಡ ಗಮನಿಸಿರುತ್ತೀರಿ ಎಂದು ಭಾವಿಸಿದ್ದೇನೆ’’ ಎಂದು ಭರಮನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಪಾಳಮೋಕ್ಷದಿಂದ ತಪ್ಪಿಸಿಕೊಂಡೆ, ಆದರೆ ಅವಮಾನದಿಂದಲ್ಲ: ಭರಮನಿ
ಸಾರ್ವಜನಿಕವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ ಕಪಾಳ ಮೋಕ್ಷ ತಪ್ಪಿಸಿಕೊಂಡಿದ್ದೇನೋ ಸರಿ. ಆದರೆ ಸಾರ್ವಜನಿಕವಾಗಿ ಆದ ಅವಮಾನದಿಂದಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅದೇ ವೇದಿಕ ಮೇಲೆ ರಾಜ್ಯದ ಎಲ್ಲಾ ಕಡೆಯಿಂದ ಬಂದ ರಾಜಕೀಯ ಮುಖಂಡರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು. ಅಲ್ಲದೇ ರಾಜ್ಯಾದ್ಯಂತ ಸುದ್ದಿ ಬಿತ್ತರಿಸುವ ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ವರದಿಗಾರರು ಇದ್ದರು. ಅದೂ ಅಲ್ಲದೆ ನನ್ನ ಇಲಾಖೆಯ ಮತ್ತು ಇತರ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಜನರಿದ್ದರು. ಅವರೆಲ್ಲರ ಮುಂದೆ ಅವಮಾನಕ್ಕೊಳಗಾದರೂ ಇಲಾಖೆ ಮೇಲಿನ ಗೌರವದಿಂದಾಗಿ ಮತ್ತು ಮಾನ್ಯ ಮುಖ್ಯ ಮಂತ್ರಿಗಳ ಪದವಿಗೆ ಚ್ಯುತಿ ಬಾರದಿರಲಿ ಎಂಬ ಕಾರಣಕ್ಕಾಗಿ ಮರು ಮಾತಾಡದ ವೇದಿಕೆಯಿಂದ ಕೆಳಗಿಳಿದು ಬಂದಿದ್ದೆ ಎಂದು ಭರಮನಿ ಉಲ್ಲೇಖಿಸಿದ್ದಾರೆ.
ಮಾನಸಿಕ ವೇದನೆ ಹೆಚ್ಚಾಯಿತು: ಭರಮನಿ
ಸಮವಸ್ತ್ರದಲ್ಲಿದ್ದ ನನಗೆ ಸಾರ್ವಜನಿಕವಾಗಿ ಅವಮಾನಿಸಿ ನನ್ನ ಮತ್ತು ನನ್ನ ಇಲಾಖೆಯ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸಿದ ಮಾನ್ಯ ಮುಖ್ಯ ಮಂತ್ರಿಗಳ ವರ್ತನೆಯನ್ನು ಇಡೀ ರಾಜ್ಯದಲ್ಲಿ ದೃಶ್ಯಮಾದ್ಯಮಗಳ ಮೂಲಕ ಬಿತ್ತರಿಸಲಾಗಿತ್ತು. ಘಟನೆಯಿಂದ ಮನಸ್ಸಿಗೆ ಆಘಾತವಾಗಿ, ಯಾರಲ್ಲಿ ಏನನ್ನೂ ಪ್ರಸ್ತಾಪಿಸದೆ ಮನೆಗೆ ಹೋದೆನು. ಮನೆಯಲ್ಲಿ ಸ್ಮಶಾನ ಮೌನ. ನನ್ನನ್ನು ನೋಡಿದ ಮಡದಿ ಮತ್ತು ಮಕ್ಕಳ ದುಃಖ ಕಟ್ಟೆಯೊಡೆದು ಬೋರ್ಗರೆಯಿತು. ಇಡೀ ದಿನ ಮೌನವೇ ಮಾತಾಯಿತು. ನನಗೆ ಮತ್ತು ಮಡದಿಗೆ ಹಿತೈಷಿಗಳಿಂದ ಬಂದ ದೂರವಾಣಿ ಕರೆಗಳಿಗೆ ಉತ್ತರಿಸಲಾಗದಷ್ಟು ದುಃಖಿತರಾಗಿದ್ದೆವು. ಇದರಿಂದಾಗಿ ನಾನು ಮತ್ತು ನನ್ನ ಕುಟುಂಬ ಮನೋವ್ಯಾಕುಲತೆಗೆ ಒಳಗಾದೆವು. ಇಷ್ಟಾದರೂ ಮಾನ್ಯ ಮುಖ್ಯಮಂತ್ರಿಗಳಾಗಲಿ ಅಥವಾ ಅವರ ಪರವಾಗಿ ಸರ್ಕಾರ ಮಟ್ಟದ ಅಧಿಕಾರಿಗಳಾಗಲಿ ಅಥವಾ ನಮ್ಮ ಇಲಾಖೆಯ ನೆಚ್ಚಿನ ಹಿರಿಯ ಅಧಿಕಾರಿಗಳಾಗಲಿ ನನ್ನನ್ನು ಸಾಂತ್ವಾನಿಸುವ ಪ್ರಯತ್ನ ಮಾಡಲಿಲ್ಲ. ಅಲ್ಲದೇ ನನ್ನ ಸಹೋದ್ಯೋಗಿಗಳು ಕೂಡ ನನಗಾದ ಅವಮಾನವನ್ನು ಪ್ರತಿಭಟಿಸಿ ನೈತಿಕ ಬೆಂಬಲ ವ್ಯಕ್ತಪಡಿಸಲೂ ಇಲ್ಲಾ. ಇದರಿಂದಾಗಿ ಮತ್ತಷ್ಟು ಮಾನಸಿಕ ವೇದನೆ ಹೆಚ್ಚಾಯಿತು ಎಂದು ಭರಮನಿ ಅಳಲು ತೋಡಿಕೊಂಡಿದ್ದಾರೆ.
ನನ್ನಷ್ಟಕ್ಕೆ ನಾನು ಧೈರ್ಯ ತುಂಬಿಕೊಂಡು ಇದರಿಂದ ಹೊರಬರಲು ಕರ್ತವ್ಯಕ್ಕೆ ಹಾಜರಾದೆನು. ಇಲ್ಲಿ ಸಮಸ್ಯೆಗಳನ್ನು ಹೇಳಿಕೊಂಡು ಬರುವ ನೊಂದ ಜನರೂ ಕೂಡ ‘‘ಸಾರ್ ತಮ್ಮಂತೋರಿಗೆ ಹೀಗಾದರೆ ನಮ್ಮಂತ ಜನ ಸಾಮಾನ್ಯರ ಸ್ಥಿತಿ ಏನು’’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಇದು ಇಷ್ಟಕ್ಕೆ ನಿಲ್ಲದೇ ಇಲಾಖೆಯ ಸಭೆಗಳಲ್ಲಿ, ಬೇರೆ ಇಲಾಖೆಯೊಂದಿಗಿನ ಸಭೆಗಳಲ್ಲಿಯೂ ಇದು ಮಾರ್ದನಿಸುತ್ತಿತ್ತು. ಪ್ರತಿ ನಿತ್ಯ ಸಮವಸ್ತ್ರ ಧರಿಸುವಾಗ ಯಾರದೋ ತಪ್ಪಿಗೆ ನನ್ನನ್ನು ದಂಡಿಸಿದರಲ್ಲಾ ಎಂದು ಆ ಘಟನೆ ನನ್ನನ್ನು ಸದಾ ಕಾಡುತ್ತಿದೆ. ಒಂದು ರಾಜ್ಯದ ಮುಖ್ಯಮಂತ್ರಿ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿ, ಅವಮಾನಿಸಿ ಸಾಂತ್ವನಿಸದೆ ಇದ್ದುದು ನನ್ನನ್ನು ವಿಚಲಿತಗೊಳಿಸಿದೆ. ನನ್ನಷ್ಟಕ್ಕೆ ನಾನು ನ್ಯಾಯ ಪಡೆದುಕೊಳ್ಳಲು ಆಗದವನು ಪರರಿಗೆ ನ್ಯಾಯ ಕೊಡಿಸಲಾದೀತೇ ಎಂಬ ಕೊರಗು ನನ್ನಲ್ಲಿ ಕಾಡತೊಡಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಸ್ತರಗಳಲ್ಲಿ ಶಿಸ್ತಿನ ಸಿಪಾಯಿಯಾಗಿ, ನೊಂದು ಬರುವ ಸಾರ್ವಜನಿಕರ ಅಹವಾಲುಗಳಿಗೆ ಅಂತಃಕರಣದಿಂದ ಸ್ಪಂದಿಸಿ ಅವರ ಗೌರವಕ್ಕೆ ಪಾತ್ರನಾಗಿ ಇಲಾಖೆಯಲ್ಲಿ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಿರುತ್ತೇನೆ. ಇಲಾಖೆ ಹಾಗೂ ಸಮಾಜದಲ್ಲಿ ಗೌರವ ಮಾನ ಸನ್ಮಾನ ನೀಡಿದ ಸಮವಸ್ತ್ರದೊಂದಿಗಿನ ಸಂಬಂಧ ನನ್ನ ಹೆತ್ತ ತಾಯಿಯೊಂದಿಗಿರುವಷ್ಟೇ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಸರ್ಕಾರವನ್ನು ಪ್ರತಿನಿಧಿಸುವ ಸರ್ಕಾರಿ ನೌಕರರಿಗೆ ಪ್ರತಿ ಹಂತದಲ್ಲೂ ಸವಾಲುಗಳ ಸಾಲೇ ಇರುತ್ತವೆ. ತನ್ನೆಲ್ಲಾ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಅವಮಾನಗಳನ್ನು ಸಹಿಸುತ್ತಾ, ಸರ್ಕಾರದ ಹಿತಾಸಕ್ತಿಗೆ ಟೊಂಕಕಟ್ಟಿ ನಿಂತು ಸೇವೆ ಸಲ್ಲಿಸುತ್ತಿರುವ ಎಲ್ಲಾ ಸರ್ಕಾರಿ ನೌಕರರಿಗೆ ಆತ್ಮಸ್ಥೆರ್ಯವನ್ನು ತುಂಬಬೇಕಾದ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ವರ್ತನೆಯಿಂದ ನನ್ನ ಮತ್ತು ರಾಜ್ಯದ ಇತರ ಸರ್ಕಾರಿ ನೌಕರರ ಆತ್ಮಸ್ಥೆರ್ಯ ಕುಂದಿಸಿರುತ್ತಾರೆ. ಈ ಘಟನೆಯಿಂದಾಗಿ ನಾನು ಮತ್ತು ನನ್ನ ಪರಿವಾರ ಇನ್ನಿಲ್ಲದಂತೆ ಮಾನಸಿಕವಾಗಿ ಕುಗ್ಗಿ, ಮನೊವೇದನೆಯಿಂದ ಮನೋವ್ಯಾಕುಲತೆಗೆ ಒಳಗಾಗಿದ್ದೇವೆ. ಇದು ನನ್ನೊಬ್ಬನ ಅಳಲಲ್ಲ. ರಾಜ್ಯದ ಸಮವಸ್ತ್ರ ಧರಿಸುವ ಕೆಳಸ್ತರದ ಅಧಿಕಾರಿ ಸಿಬ್ಬಂದಿಗಳಷ್ಟೇ ಅಲ್ಲ, ಸಮಸ್ತ ಸರ್ಕಾರಿ ನೌಕರರ ಅಳಲು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಕೈ ಎತ್ತಿದ್ದ ಸಿಎಂ: ಅವಮಾನದಿಂದ ಸ್ವಯಂ ನಿವೃತ್ತಿಗೆ ಮುಂದಾದ ಪೊಲೀಸ್ ಆಫೀಸರ್
ಸಾರ್ವಜನಿಕ ವೇದಿಕೆಯ ಮೇಲೆ ಮಾನ್ಯ ಮುಖ್ಯ ಮಂತ್ರಿಗಳ ವರ್ತನೆಯಿಂದ ನಾನು ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ, ಅವಮಾನಗೊಂಡ ನನಗೆ ಅನ್ಯ ಮಾರ್ಗವಿಲ್ಲದೇ ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದು ಮಾನ್ಯರು ಇದನ್ನು ಅಂಗೀಕರಿಸಬೇಕೆಂದು ವಿನಂತಿ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.








