ತ್ರಿಶಂಕುಸ್ಥಿತಿಗೆ ಸಿಲುಕಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಹುದ್ದೆ: ಹೈಕೋರ್ಟ್ನಿಂದ ತಡೆಯಾಜ್ಞೆ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಸದ್ಯ ಜಟಾಪಟಿ ಶುರುವಾಗಿದೆ. ಮೆರಿಟ್ ಮತ್ತು ಸಾಮಾಜಿಕ ನ್ಯಾಯದ ಮೇಲೆ ನೇಮಕಾತಿ ನಡೆದಿಲ್ಲವೆಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕುಲಪತಿ ಆಕಾಂಕ್ಷಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಇತ್ತೀಚೆಗೆ ನೂತನ ಕುಲಪತಿಯ ನೇಮಕ ಮಾಡಿತ್ತು.

ಧಾರವಾಡ, ಜುಲೈ 10: ಧಾರವಾಡದ ಕರ್ನಾಟಕ (Karnatak) ವಿಶ್ವವಿದ್ಯಾಲಯಕ್ಕೆ ಕೊನೆಗೂ ಖಾಯಂ ಕುಲಪತಿ (Chancellor) ನೇಮಕವಾಗಿದೆ. ಈ ಬಾರಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಮಣೆ ಹಾಕಿದೆ. ನೂತನ ಕುಲಪತಿಯಾಗಿ ಎ.ಎಂ. ಖಾನ್ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಈ ನೇಮಕಾತಿಯಲ್ಲಿ ಮೆರಿಟ್ ಮತ್ತು ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕುಲಪತಿ ಸ್ಥಾನದ ಪ್ರಬಲ ಆಕಾಂಕ್ಷಿಯೊಬ್ಬರು ಇದೀಗ ಹೈಕೋರ್ಟ್ ಮೊರೆ ಹೋಗುವ ಮೂಲಕ ಕುಲಪತಿ ನೇಮಕಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಕುಲಪತಿ ಹುದ್ದೆ ತ್ರಿಶಂಕುಸ್ಥಿತಿಗೆ ಸಿಲುಕಿದಂತಾಗಿದೆ.
ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿಯಾಗಿ 9 ತಿಂಗಳು ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪ್ರಭಾರಿ ಕುಲಪತಿಗಳ ಅಡಿಯಲ್ಲಿಯೇ ನಡೆದಿದ್ದ ವಿಶ್ವವಿದ್ಯಾಲಯಕ್ಕೆ ಈಗ ಸರ್ಕಾರ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ನೂತನ ಕುಲಪತಿ ಖಾನ್ ಅವರು ನೇಮಕ ಆದೇಶ ಬರುತ್ತಿದ್ದಂತೆಯೇ ಅಧಿಕಾರ ವಹಿಸಿಕೊಂಡು ಕಾರ್ಯಭಾರ ಆರಂಭಿಸಿದ್ದಾರೆ. ಆದರೆ ಈ ನೇಮಕ ಪ್ರಶ್ನಿಸಿ ಡಾ. ಮಹದೇವಪ್ಪ ಕರಿದುರಗನವರ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇವರ ರಿಟ್ ಅರ್ಜಿ ಪರಿಗಣಿಸಿರುವ ಕೋರ್ಟ್ ನೇಮಕಾತಿ ಸಂಬಂಧಿಸಿ ಯಾವುದೇ ನಿರ್ಧಾರ ಕಾರ್ಯಗತಗೊಳಿಸದಂತೆ ಮಧ್ಯಂತರ ಆದೇಶ ನೀಡಿದೆ.
ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ ಬಿಜೆಪಿ
ಅರ್ಹತೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕುಲಪತಿ ನೇಮಕವಾಗಬೇಕು. ಆದರೆ ರಾಜ್ಯಪಾಲರು, ಸರ್ಕಾರ ಮತ್ತು ಅರ್ಜಿಗಳನ್ನು ಪರಿಶೀಲಿಸುವ ಸತ್ಯಶೋಧನಾ ಸಮಿತಿ ಮಾನದಂಡಗಳನ್ನು ಪರಿಗಣಿಸಿಲ್ಲ ಅನ್ನೋದು ಡಾ. ಮಹದೇವಪ್ಪರ ಆರೋಪವಾಗಿದೆ.

ಕುಲಪತಿ ಆಕಾಂಕ್ಷಿ ಡಾ. ಮಹದೇವಪ್ಪ ಕರಿದುರಗನವರ್, ನೂತನ ಕುಲಪತಿ ಎ.ಎಂ. ಖಾನ್
ಧಾರವಾಡದ ಕರ್ನಾಟಕ ವಿಶ್ವವಿದ್ಯಾಯದ ರಸಾಯನಶಾಸ್ತ್ರ ವಿಭಾಗದಲ್ಲಿ 1997ರಲ್ಲಿ ಉಪಸ್ಯಾಕರಾಗಿ ಸೇರಿದ್ದ ಮಹದೇವಪ್ಪ, ಪ್ರಾಧ್ಯಾಪಕರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಆಗಿ, 2024ರಲ್ಲಿ ನಿವೃತ್ತಿ ಹೊಂದಿದ್ದಾರೆ. ಸುಮಾರು 500ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಆಹ್ವಾನಿಸಿ ಧಾರವಾಡದಲ್ಲಿ 2, ಪೋರ್ಚುಗಲ್ನಲ್ಲಿ 2 ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಿರುವ ಹೆಗ್ಗಳಿಕೆ ಇದೆ. ವಿವಿಧ ವಿಜ್ಞಾನ ಪ್ರಶಸ್ತಿಗಳನ್ನು ಕೂಡ ಮಹದೇವಪ್ಪ ಪಡೆದುಕೊಂಡಿದ್ದಾರೆ.
ಇನ್ನು ಕವಿವಿ ಇತಿಹಾಸದಲ್ಲಿ ಇಂದಿನವರೆಗೂ ಒಬ್ಬರೂ ಎಸ್ಸಿ, ಎಸ್ಟಿ ಗಳಿಗೆ ಕುಲಪತಿ ಹುದ್ದೆ ನೀಡಿಲ್ಲ. ಭೋವಿ ಸಮಾಜದ ಒಬ್ಬರು ರಾಜ್ಯದ ಯಾವ ವಿವಿಗೂ ಕುಲಪತಿಯಾಗಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಮ್ಮದೇ ಹೆಸರು ಬರಬೇಕಿತ್ತು. ಮೆರಿಟ್ ನೋಡಿದರೆ ನನ್ನ ಮೀರಿ ಯಾರೂ ಇರಲಿಲ್ಲ. ಆದರೂ ನನ್ನ ಹೆಸರು ಸತ್ಯಶೋಧನಾ ಸಮಿತಿ ಲಿಸ್ಟ್ನಲ್ಲಿ ಬಂದಿಲ್ಲವೆಂದು ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ಮನ್ನಣೆ
ಇನ್ನು ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ಸಮುದಾಯದವರಿಗೆ ಮನ್ನಣೆ ನೀಡಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಎ.ಎಂ. ಪಠಾಣ್ ಎರಡು ಅವಧಿ, ಎಂ. ಖಾಜಾಪೀರ್ ಅವರು ಒಂದು ಅವಧಿಗೆ ಕುಲಪತಿ ಆಗಿದ್ದರು. ಇದೀಗ ಮತ್ತೊಮ್ಮೆ ಮುಸ್ಲಿಂ ಸಮುದಾಯಕ್ಕೆ ಮನ್ನಣೆ ನೀಡಲಾಗಿದೆ. ಆದರೆ ಇದುವರೆಗೂ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಭೋವಿ ಸಮಾಜದ ಯಾರಿಗೂ ಒಂದು ಬಾರಿಯೂ ಅವಕಾಶ ಸಿಕ್ಕಿಲ್ಲ. ಇನ್ನು ಕೋರ್ಟ್ ಸ್ಟೇ ನೀಡಿರುವ ಬಗ್ಗೆ ಪ್ರೊ. ಎ. ಎಂ. ಖಾನ್ ಪ್ರತಿಕ್ರಿಯೆ ನೀಡಿದ್ದು, ಇದುವರೆಗೂ ಕೋರ್ಟ್ನಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ. ಈ ಬಗ್ಗೆ ತಮಗೆ ಹೆಚ್ಚಿಗೇನೂ ಗೊತ್ತಿಲ್ಲ ಎಂದಿದ್ದಾರೆ.
ನಿವೃತ್ತಿಯಾಗಿ ಒಂದು ವರ್ಷದವರೆಗೆ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಬಾರಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ 190 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆದರೆ ಕೊನೆಗೂ ಸರಕಾರ ಪ್ರೊ. ಖಾನ್ ಅವರನ್ನು ನೇಮಿಸಿತು. ಇದೀಗ ನೇಮಕಾತಿ ಸಂಬಂಧಿತ ಯಾವುದೇ ನಿರ್ಧಾರ ಕಾರ್ಯಗತಗೊಳಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆಯಾದರೂ ಆದೇಶಕ್ಕೂ ಮೊದಲೇ ಖಾನ್ ಕುಲಪತಿ ಹುದ್ದೆ ಅಲಂಕರಿಸಿಬಿಟ್ಟಿದ್ದರು.
ಇದನ್ನೂ ಓದಿ: ಧಾರವಾಡ: ಮಳೆ ಬರುತ್ತೆ ಅಂದ್ರೆ ಮಕ್ಕಳು ಶಾಲೆಗೆ, ಜನ್ರು ಕೆಲಸಕ್ಕೆ ಹೋಗುವುದನ್ನೇ ಬಿಡ್ತಾರೆ, ಏಕೆ ಗೊತ್ತಾ?
ಸದ್ಯ ಇದಕ್ಕೆ ಸಂಬಂಧಿಸಿದವರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಜುಲೈ 23ಕ್ಕೆ ಮುಂದಿನ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಹೀಗಾಗಿ ಮುಂದೆ ಈ ಕುಲಪತಿ ಹುದ್ದೆ ಜಟಾಪಟಿ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದು ಕುತೂಹಲ ಹುಟ್ಟಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:54 am, Thu, 10 July 25








