AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರ ಮನೆಯ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ 20 ವಾಹನಗಳ ಮೇಲೆ ದುಷ್ಕರ್ಮಿಗಳಿಂದ ದಾಳಿ

ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯ ಹತ್ತಿರ ನಿಲ್ಲಿಸಿದ್ದ 12 ಕಾರುಗಳು ಮತ್ತು 8 ಆಟೋಗಳ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಅನುಮಾನಿಸಲಾಗಿದೆ. ಕಾರು ಮತ್ತು ಆಟೋ ಮಾಲೀಕರು ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಶಾಸಕರ ಮನೆಯ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ 20 ವಾಹನಗಳ ಮೇಲೆ ದುಷ್ಕರ್ಮಿಗಳಿಂದ ದಾಳಿ
ಕಾರು, ಆಟೋ ಗಾಜು ಪುಡಿ, ಪುಡಿ
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ|

Updated on:Jul 10, 2025 | 7:04 PM

Share

ಆನೇಕಲ್​, ಜುಲೈ 07: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ (Satish Reddy) ಮನೆಯ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರು ಮತ್ತು ಆಟೋಗಳ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 12 ಕಾರುಗಳು 8 ಆಟೋಗಳ ಗಾಜುಗಳು ಪುಡಿ ಪುಡಿಯಾಗಿವೆ. ಬೊಮ್ಮನಹಳ್ಳಿಯ (Bommanahalli) ಹೊಂಗಸಂದ್ರದಲ್ಲಿ ಘಟನೆ ನಡೆದಿದೆ. ಹೊಂಗಸಂದ್ರದ ರಾಜಕುಮಾರ್ ರಸ್ತೆ ಬದಿ ನಿಲ್ಲಿಸಿದ್ದ 12 ಕಾರುಗಳು 8 ಆಟೋಗಳ ಮೇಲೆ ದುಷ್ಕರ್ಮಿಗಳು ನಸುಕಿನ ಜಾವ 3 ಗಂಟೆ ಸುಮಾರಿಗೆ ಕಲ್ಲು, ದೊಣ್ಣೆ, ರಾಡ್​ನಿಂದ ಕಾರು ಆಟೋಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಕಾರು ಮತ್ತು ಆಟೋಗಳ ಗಾಜುಗಳು ಒಡೆದಿವೆ.

ಪ್ರಕರಣ ಸಂಬಂಧ ಕಾರು, ಆಟೋ ಮಾಲೀಕರು ಪ್ರತಿಕ್ರಿಯಿಸಿದ್ದು, ಹಲವು ವರ್ಷಗಳಿಂದ “ಕಾರು, ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದೇವೆ. ಬಾಡಿಗೆ ಮನೆಗಳ ಬಳಿ ಕಾರು, ಆಟೋ ನಿಲ್ಲಿಸಲು ಜಾಗವಿಲ್ಲದೆ ರಸ್ತೆ ಬದಿ ಪಾರ್ಕ್ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಇಂತಹ ಘಟನೆ ನಡೆದಿರಲಿಲ್ಲ. ಆದರೆ, ಇದೀಗ ಅಪರಿಚಿತರು ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ಆಟೋಗಳ ಮೇಲೆ ದಾಳಿ ನಡೆಸಿ ಗಾಜುಗಳನ್ನು ಒಡೆದಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚು ನೀರಿನ ಟ್ಯಾಂಕರ್ ವಾಹನಗಳ ಓಡಾಡುತ್ತವೆ. ತಿರುವುಗಳಲ್ಲಿ ಟ್ಯಾಂಕರ್ ವಾಹನಗಳು ಸಾಗಲು ಕಿರಿಕಿರಿಯಾಗುತ್ತಿತ್ತು. ವಾಟರ್ ಟ್ಯಾಂಕರ್​ದವರು ದಾಳಿ ಮಾಡಿರುವ ಸಾಧ್ಯತೆ ಇದೆ” ಎಂದು ಆರೋಪಿಸಿದ್ದಾರೆ.

ಸದ್ಯ ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಆಧರಿಸಿ ಪೊಲೀಸರು ಅರುಣ್, ಸಾಗರ್, ಸತೀಶ್ ಮತ್ತು ಮರಿಯಪ್ಪ ಎಂಬ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕುಡಿದ ನಶೆಯಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 am, Mon, 7 July 25