ಅರಣ್ಯ ಇಲಾಖೆಯ ಜವಾಬ್ದಾರಿಯುತ ಅಧಿಕಾರಿಗಳೇ ಅನುಮತಿ ಇಲ್ಲದೇ ಮೀಸಲು ಅರಣ್ಯದೊಳಗೆ ಪ್ರವೇಶ ಮಾಡಿದ್ದು ಏಕೆ?
ಪಶ್ಚಿಮ ಘಟ್ಟದ ಆರಂಭ ಆಗೋದು ಧಾರವಾಡ ಜಿಲ್ಲೆಯಿಂದ. ಹೀಗಾಗಿ ಇಲ್ಲಿನ ಅರಣ್ಯ ವಲಯಕ್ಕೆ ಸಾಕಷ್ಟು ಮಹತ್ವವಿದೆ. ಆದರೆ ಸಿಬ್ಬಂದಿಯೇ ಕಾನೂನುಬಾಹಿರವಾಗಿ ವರ್ತಿಸಿದರೆ, ಅಪರಿಚಿತರನ್ನು ಮೀಸಲು ಅರಣ್ಯ ಇಲಾಖೆಯೊಳಗೆ ಕರೆದೊಯ್ದರೆ ಹೇಗೆ ಅನ್ನೋ ಪ್ರಶ್ನೆ ಎದ್ದಿದೆ. ತನಿಖೆ ಶುರುವಾಗಿದ್ದು, ಏನೆಲ್ಲಾ ಅಂಶಗಳು ಹೊರ ಬರುತ್ತವೆ ಕಾದು ನೋಡಬೇಕಿದೆ.
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ನಿಯಮ-ಕಾಯ್ದೆಗಳಿವೆ. ಆ ನಿಯಮಗಳನ್ನು ಮೀರಿದರೆ ಅದೊಂದು ಕಷ್ಟಕರ ಸ್ಥಿತಿ. ಅದರಲ್ಲೂ ಮೀಸಲು ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೇ ಎಂಟ್ರಿ ಕೊಟ್ರೆ ಅವರ ಕಥೆ ಅಷ್ಟೇ..! ಧಾರವಾಡದಲ್ಲಿ ಅರಣ್ಯ ಇಲಾಖೆಯ (Dharwad Forest Department) ಸಿಬ್ಬಂದಿಯೇ ಈ ಕೃತ್ಯವೆಸಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಸಿಬ್ಬಂದಿ ಮೀಸಲು ಅರಣ್ಯ ಪ್ರದೇಶದೊಳಗೆ ಅನುಮತಿ (Permission ) ಇಲ್ಲದೇ ಪ್ರವೇಶ ಮಾಡಿದ್ದು ಏಕೆ? ಅವರ ಮೇಲೆ ಆಗಿರೋ ಕ್ರಮವಾದರೂ ಏನು? ಇಲ್ಲಿದೆ ನೋಡಿ…
ಮೇಲಿನ ಫೋಟೋದಲ್ಲಿ ಕಾಣುತ್ತಿರೋ ವ್ಯಕ್ತಿಗಳ ಹೆಸರು ಶಿವಾನಂದ ಕೊಂಡಿಕೊಪ್ಪ ಹಾಗೂ ಅವಿನಾಶ ರಣಕಾಂಬೆ. ಶಿವಾನಂದ ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವಿನಾಶ ಡೆಪ್ಯೂಟಿ ಆರ್ ಎಫ್ ಓ. ಇಬ್ಬರೂ ಜವಾಬ್ದಾರಿಯುತ ಹುದ್ದೆಯಲ್ಲಿ ಇರೋರೆ. ಡೆಪ್ಯೂಟಿ ಆರ್ ಎಫ್ ಓ ಅವಿನಾಶ ಧಾರವಾಡದ ವೃತ್ತ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿವಾನಂದ ಕೊಂಡಿಕೊಪ್ಪ ಇದುವರೆಗೂ ಧಾರವಾಡ ವಿಭಾಗದ ಕಲಿಕೇರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇತ್ತೀಚೆಗಷ್ಟೇ ಅವರನ್ನು ಕಲಘಟಗಿ ತಾಲೂಕಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಗೆ ಹೋಗಿ ಕರ್ತವ್ಯಕ್ಕೆ ಹಾಜರಾದ ಬಳಿಕ ಒಂದು ದಿನ ರಜೆ ಹಾಕಿ ಡಿಸೆಂಬರ್ 5 ರಂದು ತನ್ನ ಹಳೆಯ ವ್ಯಾಪ್ತಿಯ ಸ್ಥಳಕ್ಕೆ ಬಂದಿದ್ದಾನೆ. ಬರೋವಾಗ ಜೊತೆಗೆ ಅವಿನಾಶ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಇದ್ದರು. ಅಲ್ಲದೇ ವಾಹನವೊಂದರಲ್ಲಿ ಬಂದಿದ್ದ ನಾಲ್ವರೂ ಕಲಿಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ನುಗ್ಗಿದ್ದಾರೆ. ಅನುಮತಿ ಇಲ್ಲದೇ ಹೀಗೆ ಒಳಗಡೆ ಪ್ರವೇಶ ಮಾಡಿದ್ದು ಅರಣ್ಯ ನಿಯಮಗಳ ಪ್ರಕಾರ ಅಪರಾಧ. ಇದೇ ಕಾರಣಕ್ಕೆ ಇದೀಗ ಇಬ್ಬರೂ ಸಿಬ್ಬಂದಿ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.
ಇವರು ವಾಹನವನ್ನು ಅರಣ್ಯದ ಹೊರಭಾಗದಲ್ಲಿ ನಿಲ್ಲಿಸಿ ಒಳಗಡೆ ಹೋಗಿ ಏನು ಮಾಡಿದರು ಅನ್ನೋದು ಗೊತ್ತಾಗಿಲ್ಲ. ತನ್ನದಲ್ಲದ ಪ್ರದೇಶಕ್ಕೆ ಅಪರಿಚಿತರನ್ನು ಕರೆ ತಂದಿದ್ದು ಒಂದು ತಪ್ಪಾದರೆ, ಇವರು ಹೊರಗಡೆ ಬರುತ್ತಲೇ ಅಲ್ಲಿಗೆ ಸ್ಥಳೀಯ ಅರಣ್ಯ ಸಿಬ್ಬಂದಿ ಹೋಗಿದ್ದಾರೆ. ಆಗ ಇಲ್ಲಿಗೆ ನೀವು ಬಂದಿದ್ದೇಕೆ ಅಂತಾ ಕೇಳಿದರೆ ಅದಕ್ಕೆ ಉತ್ತರ ನೀಡದೇ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಹೀಗಾಗಿ ಇದೀಗ ಇವರು ಮೀಸಲು ಅರಣ್ಯದೊಳಗೆ ಹೋಗಿದ್ದು ಏಕೆ ಅನ್ನೋ ಅನುಮಾನ ಶುರುವಾಗಿದೆ.
ಈ ಮುಂಚೆ ಶಿವಾನಂದ ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರಿಂದ ಈ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಇದೀಗ ಕಲಿಕೇರಿ ಡಿ ಆರ್ ಎಫ್ ಓ ಪರಶುರಾಮ ಮನಕೂರು ನೀಡಿರೋ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 24ಸಿ/2 ಅಡಿ ಇಬ್ಬರು ಸಿಬ್ಬಂದಿ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಹೀಗೆ ಅರಣ್ಯ ಸಿಬ್ಬಂದಿಯೆ ಅಕ್ರಮವಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವೇಶ ಮಾಡಿರೋದರ ವಿರುದ್ಧ ದಾಖಲಾಗಿರೋ ಇದು ರಾಜ್ಯದಲ್ಲಿಯೇ ಪ್ರಥಮ ಕೇಸು ಎನ್ನಲಾಗಿದೆ. ಇದರ ಹಿಂದೆ ಏನಿದೆ ಅನ್ನೋದರ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ಸ್ಥಳೀಯರ ಆಗ್ರಹ.
ಪಶ್ಚಿಮ ಘಟ್ಟದ ಆರಂಭ ಆಗೋದು ಧಾರವಾಡ ಜಿಲ್ಲೆಯಿಂದ. ಹೀಗಾಗಿ ಇಲ್ಲಿನ ಅರಣ್ಯ ವಲಯಕ್ಕೆ ಸಾಕಷ್ಟು ಹೆಸರಿದೆ. ಆದರೆ ಸಿಬ್ಬಂದಿಯೇ ಈ ರೀತಿ ವರ್ತಿಸಿದರೆ ಹಾಗೂ ಅಪರಿಚಿತರನ್ನು ಮೀಸಲು ಅರಣ್ಯ ಇಲಾಖೆಯೊಳಗೆ ಕರೆದೊಯ್ದರೆ ಹೇಗೆ ಅನ್ನೋ ಪ್ರಶ್ನೆ ಎದ್ದಿದೆ. ಇದೀಗ ತನಿಖೆ ಶುರುವಾಗಿದ್ದು, ಅದರಲ್ಲಿ ಏನೆಲ್ಲಾ ಅಂಶಗಳು ಹೊರ ಬರುತ್ತವೆ ಅನ್ನೋದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನೋ ಮಾತು ಈ ಪ್ರಕರಣದಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ